ರಾಷ್ಟ್ರೀಯ ಗ್ರಾಹಕರ ಹಕ್ಕುಗಳ ದಿನಾಚರಣೆ:ಅನ್ಯಾಯಕ್ಕೊಳಗಾದ ಗ್ರಾಹಕರಿಗೊಂದು ವೇದಿಕೆ : ಡಿಸಿ ರಾಜೇಂದ್ರ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ: ಪ್ರತಿಯೊಬ್ಬರು ಜೀವನೋಪಾಯಕ್ಕಾಗಿ ವ್ಯಾಪಾರ ವ್ಯವಹಾರ ನಡೆಸಬೇಕಾಗುತ್ತಿದ್ದು, ಅಂತಹ ಗ್ರಾಹಕರಿಗೆ ಅನ್ಯಾಯವಾದಾಗ ಅವರ ರಕ್ಷಣೆಗೆ ಕಾನೂನು ರಚನೆಗೊಂಡಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದರು.

ಜಿಲ್ಲಾ ಪಂಚಾಯತ ಸಭಾಭವನದಲ್ಲಿಂದು ಜಿಲ್ಲಾಡಳಿತ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಆಹಾರ ನಾಗರಿಕ ಸರಬರಾಜು ಇಲಾಖೆ, ಜಿಲ್ಲಾ ಗ್ರಾಹಕರ ಆಯೋಗ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಶಿಕ್ಷಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಗ್ರಾಹಕರ ಹಕ್ಕುಗಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ವ್ಯವಹಾರದಲ್ಲಿ ಮೋಸ ಮಾಡುತ್ತಿರುವ ವ್ಯಾಪಾರಿಗಳು ಪದೇ ಪದೇ ಮೋಸ, ವಂಚನೆ ಮಾಡುತ್ತಿರುವುದು, ರಸೀದಿ ಪಡೆಯದೇ ವ್ಯವಹಾರ ಮಾಡಿದಲ್ಲಿ ಮೋಸಕ್ಕೆ ಒಳಗಾಗಬೇಕಾಗುತ್ತದೆ. ಅನ್ಯಾಯಕ್ಕೆ ಒಳಗಾದವನು ಗ್ರಾಹಕರ ವೇದಿಕೆಗೆ ಹೋಗಬೇಕಾದಲ್ಲಿ ಸಾಕ್ಷಿಗಳು ಅವಶ್ಯವಾಗಿವೆ. ಚಿಕ್ಕ ಚಿಕ್ಕ ಅಂಗಡಿಗಳಲ್ಲಿ ವ್ಯಾಪಾರಿ ರಸೀದಿ ನೀಡುವದಿಲ್ಲ. ಇತ್ತೀಚಿನ ದಿನಗಳಲ್ಲಿ ಸೂಪರ ಮಾರ್ಕೆಟ್ ನಂತಹ ಅಂಗಡಿಗಳಲ್ಲಿ ಗಣಕೀಕೃತ ರಸೀದಿ ಕೊಡಲಾಗುತ್ತಿದ್ದು, ಗ್ರಾಹಕ ವ್ಯಾಪಾರ ಮಾಡುವ ಮೊದಲು ಆ ಉತ್ಪನ್ನಗಳ ತಯಾರಿಕೆ, ಮುಕ್ತಾಯದ ದಿನಾಂಕ ಪರಿಶೀಲಿಸಿ ಖರೀದಿಸಬೇಕು ಎಂದರು.

ಮಕ್ಕಳಲ್ಲಿ ವಿಶೇಷವಾಗಿ ಈ ಬಗ್ಗೆ ತಿಳುವಳಿಕೆ ಮೂಡಿಸುವ ಕಾರ್ಯವಾಗಬೇಕಾಗಿದೆ. ಮುಂದಿನ ಪೀಳಿಗೆಗಾದರೂ ವ್ಯಾಪಾರ ವ್ಯವಹಾರಗಳಲ್ಲಿ ಮೋಸಹೋಗಿ ತೊಂದರೆಗೆ ಒಳಗಾಗಬಾರದು. ಮಕ್ಕಳ ಮನದಲ್ಲಿ ಇಂತಹ ವಿಚಾರಗಳು ಬೇಗ ಅಥೈಸಿಕೊಳ್ಳುತ್ತಿರುವದರಿಂದ ಜಾಗೃತಿ ಕಾರ್ಯ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಉಪನ್ಯಾಸಕರಾಗಿ ಆಗಮಿಸಿದ್ದ ನ್ಯಾಯವಾದಿ ಜಿ.ಎನ್.ಕುಲಕರ್ಣಿ ಮಾತನಾಡಿ ಹುಟ್ಟಿನಿಂದ ಸಾಯುವವರೆಗೂ ಪ್ರತಿಯೊಬ್ಬ ಮನುಷ್ಯ ದೈನಂದಿನ ವ್ಯವಹಾರ ಮಾಡಬೇಕಾಗುತ್ತದೆ. ಆಸ್ಪತ್ರೆಯಲ್ಲಿ, ತೂಕ ಅಳತೆಯಲ್ಲಿ, ಶಿಕ್ಷಣ, ವ್ಯಾಪಾರ, ವಾಹನ ವಿಮೆ, ಪಾಲಿಸಿ, ಠೇವಣಿ ಈ ಎಲ್ಲ ವ್ಯವಹಾರಗಳನ್ನು ಮಾಡುವಾಗ ಅಲ್ಲಿ ಅನ್ಯಾಯವಾಗಿದ್ದರೆ, ಸೂಕ್ತ ದಾಖಲೆಗಳೊಂದಿಗೆ ಗ್ರಾಹಕರ ವೇದಿಕೆಗೆ ಬಂದು ನ್ಯಾಯ ದೊರಕಿಸಿಕೊಳ್ಳಬಹುದಾಗಿದೆ ಎಂದರು.


ಕರಪತ್ರಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೇಮಲತಾ ಹುಲ್ಲೂರ ಅವರು ವ್ಯವಹರಿಸುವ ಸಂದರ್ಭದಲ್ಲಿ ಜಾಗೃತಿ ವಹಿಸಿ ಖರೀದಿಸಲು ಮುಂದಾಗಬೇಕು. ಖರೀದಿಸಿದ ವಸ್ತುಗಳಿಗೆ ಕಡ್ಡಾಯವಾಗಿ ರಸೀದಿಯನ್ನು ಸಹ ಪಡೆಯಲು ತಿಳಿಸಿದರು. ಅನ್ಯಾಯವಾದಲ್ಲಿ ಕಾನೂನು ಸೇವಾ ಪ್ರಾಧಿಕಾರದಲ್ಲಿ ಉಚಿತವಾಗಿ ಕಾನೂನು ಸೇವೆ ಪಡೆಯಬಹುದಾಗಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷೆ ಶಾರದಾ ಕೆ. ಮಾತನಾಡಿ ಆಕರ್ಷಕ ಜಾಹೀರಾತು, ಸೆಲೆಬ್ರೇಟಿನ್‍ಗಳು ಗ್ರಾಹಕರನ್ನು ಹುರಿದುಂಬಿಸುತ್ತವೆ. ಆನ್‍ಲೈನ್‍ನಲ್ಲಿ ವ್ಯವಹರಿಸಬೇಕಾದರೂ ಗ್ರಾಹಕ ಮೋಸ ಹೋಗುವ ಸಂದರ್ಭ ಬರುತ್ತದೆ. ಅಂತವುಗಳನ್ನು ಗಮನಿಸಿ ತಮಗೆ ಖಾತ್ರಿಯಾದ, ದೋಷರಹಿತ ವಸ್ತುಗಳನ್ನು ಖರೀದಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ನವನಗರದ ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳು ಜಾಗೃತಿ ಮೂಡಿಸುವ ಕಿರು ನಾಟಕವನ್ನು ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಸದಸ್ಯರಾದ ರಂಗನಗೌಡ ದಂಡನ್ನವರ, ಸುಮಂಗಲಾ ಹದ್ಲಿ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಶಿಧರ ಪೂಜಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*