ಬೆಲ್ಲದ ಹಬ್ಬ ಕಾರ್ಯಕ್ರಮಕ್ಕೆ ಸಂಸದ ಪಿ.ಸಿ.ಗದ್ದಿಗೌಡರ ಚಾಲನೆ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಗಮನ ಸೆಳೆದ ಬೆಲ್ಲದ ಉತ್ಪನ್ನಗಳು ವಿದ್ಯಾಗಿರಿಯ ಬೀಮ್ಸ್ ಎಂಬಿಎ ಕಾಲೇಜಿನ ಆವರಣದಲ್ಲಿ ಹಮ್ಮಿಕೊಳ್ಳಲಾದ ಎರಡು ದಿನಗಳ ಬೆಲ್ಲದ ಹಬ್ಬದ ಕಾರ್ಯಕ್ರಮದಲ್ಲಿ ಬೆಲ್ಲದ ವಿವಿಧ ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನದಲ್ಲಿ ವಿವಿಧ ಬೆಲ್ಲದಿಂದ ತಯಾರಿಸಿದ ಉತ್ಪನ್ನಗಳು ರೈತರ, ಜನರ ಗಮನ ಸೆಳೆದವು. ಮರೆತು ಹೋಗಿರುವ ಹಿಂದಿನ ಕಾಲದ ಬೆಲ್ಲದಿಂದ ತಯಾರಿಸುತ್ತಿರುವ ಉತ್ಪನ್ನಗಳು ಇಂದಿನ ಹಾಗೂ ಮುಂದಿನ ಪೀಳಿಗೆಯ ಪರಿಚಯಿಸಿ ಬಳಸುವ ನಿಟ್ಟಿನಲ್ಲಿ ವಿವಿಧ ಖಾದ್ಯಗಳಾದ ಬೆಲ್ಲದ ಪಾಕ, ಬೆಲ್ಲದ ವಡೆ, ಶುಂಠಿ ಬೆಲ್ಲದ ವಡೆ, ಬೆಲ್ಲದ ಪುಡಿ ಸೇರಿದಂತೆ ಹಲವಾರು ಬಗೆಯ ಉತ್ಪನ್ನಗಳು ಗಮನ ಸೆಳೆದವು.

ಬಾಗಲಕೋಟೆ:ನಗರದ ವಿದ್ಯಾಗಿರಿಯ ಬೀಮ್ಸ್ ಎಂಬಿಎ ಕಾಲೇಜಿನಲ್ಲಿ ರೈತ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾದ ಎರಡು ದಿನಗಳ ಬೆಲ್ಲದ ಹಬ್ಬದ ಕಾರ್ಯಕ್ರಮಕ್ಕೆ ಸಂಸದ ಪಿ.ಸಿ.ಗದ್ದಿಗೌಡರ ಚಾಲನೆ ನೀಡಿದರು.


ಗುರುವಾರ ಜಿಲ್ಲಾಡಳಿತ, ಕೃಷಿ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ, ಬಿವಿವ ಸಂಘದ ಎಂ.ಬಿ.ಎ ಕಾಲೇಜ, ಮುಧೋಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೃಷಿ ತಂತ್ರಜ್ಞರ ಸಂಸ್ಥೆ ಹಾಗೂ ಕೃಷಿಕ ಸಮಾಜದ ಸಹಯೋಗದಲ್ಲಿ ರೈತ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಬೆಲ್ಲದ ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ರೈತರ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಹಲವಾರು ಯೋಜನೆಗಳನ್ನು ರೂಪಿಸಿದ್ದು, ಆಯಾ ಜಿಲ್ಲೆಯ ಪ್ರಮುಖ ಬೆಳೆಯನ್ನು ಆಯ್ಕೆ ಮಾಡಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.


ಬಾಗಲಕೋಟೆ ಜಿಲ್ಲೆಗೆ ಒಂದು ಜಿಲ್ಲೆ ಒಂದು ಉತ್ಪನ್ನಕೆ ಬೆಲ್ಲವನ್ನು ಆಯ್ಕೆ ಮಾಡಲಾಗಿದ್ದು, ಬೆಲ್ಲದಿಂದ ವಿವಿಧ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆಯಲ್ಲಿ ಮಾರುವದರಿಂದ ರೈತ ಬೆಳೆದ ಬೆಳೆಗೆ ಬೆಲೆ ಬರುವದಲ್ಲದೇ ಆದಾಯವನ್ನು ಸಹ ಹೆಚ್ಚಿಸಲು ಸಾಧ್ಯವಾಗುತ್ತದೆ. ಇದರಿಂದ ರೈತರ ಶಕ್ತಿ ಹೆಚ್ಚಿಸಿದಂತಾಗುತ್ತದೆ. ಬೆಲ್ಲದಿಂದ ಉತ್ಪಾದಿಸಲು ಕಿರು ಸಂಸ್ಕರಣಾ ಘಟಕ ಸ್ಥಾಪನೆ ಸರಕಾರ ಹೆಚ್ಚಿನ ಒತ್ತು ನೀಡಿದ್ದು, ಸಹಾಯಧನ ರೂಪದಲ್ಲಿ ಸಾಲವನ್ನು ಸಹ ಒದಗಿಸಲಾಗುತ್ತಿದೆ ಎಂದರು.


ಕೇಂದ್ರ ಹಾಗೂ ರಾಜ್ಯ ಸರಕಾರಗಳು 2022 ರೊಳಗಾಗಿ ರೈತರ ಆದಾಯವನ್ನು ದ್ವಿಗುಣಗೊಳಿಸಲು ಹಲವಾರು ಯೋಜನೆ ಹಾಗೂ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಅದರಂತೆ ಆಯಾ ಜಿಲ್ಲೆಗಳಲ್ಲಿನ ಪ್ರಮುಖ ಬೆಳೆಗಳನ್ನು ಆಯ್ಕೆ ಮಾಡಿ ಆ ಬೆಳೆಯಿಂದ ಯಾವ ಯಾವ ಉತ್ಪನ್ನಗಳನ್ನು ತಯಾರಿಸಬಹುದಾಗಿದೆ ಎಂಬ ಪರಿಕಲ್ಪಣೆಯನ್ನು ರೈತರ ಹಾಗೂ ಇತರ ಸಣ್ಣ ಪುಟ್ಟ ಉದ್ದಿಮೆದಾರರಿಗೆ ಪರಿಚಯಿಸಲು ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.


ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಮಾತನಾಡಿ ರೈತರು ಬೆಳೆದ ಬೆಳೆಯಿಂದ ಉತ್ಪಾಧಿಸಿದ ವಸ್ತುಗಳನ್ನು ಮಾರುಕಟ್ಟೆಯಲ್ಲಿ ಮಾರಲಾಗುತ್ತಿದೆ. ಜನರು ಸಹ ಜಾಗೃತರಾಗಿ ಗುಣಮಟ್ಟದ ಆಹಾರ ಪದಾರ್ಥಗಳನ್ನು ಖರೀದಿಸಲು ಮುಂದಾಗುತ್ತಿದ್ದಾರೆ. ರೈತರ ಆದಾರ ದ್ವಿಗುಣಗೊಳಿಸಲು ಸರಕಾರ ಹಲವಾರು ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿದೆ. ವಿವಿಧ ಯೋಜನೆಗಳಿಗೆ ಕಿರು ಸಾಲ, ತಂತ್ರಜ್ಞಾನಗಳ ಸೌಲಭ್ಯಗಳನ್ನು ಒದಗಿಸುತ್ತಿದೆ ಎಂದರು.


ಪ್ರಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಜಂಟಿ ಕೃಷಿ ನಿದೇಶಕಿ ಡಾ.ಚೇತನಾ ಪಾಟೀಲ ಮಾತನಾಡಿ ರೈತರು ಸಹ ಉದ್ಯಮಿಗಳಾಗಿ ಹೊರಹೊಮ್ಮಬೇಕು. ಶೇಖರಣೆ, ಸಂಸ್ಕರಣೆ ಸಾಧ್ಯವಾಗಿಸಲು ಸರಕಾರ ಕ್ರಮಕೈಗೊಂಡಿದೆ. ಮಾರುಕಟ್ಟೆ ಬಗ್ಗೆ ಪರಿಚಯಿಸಲು ನಗರದ ಎಂಬಿಎ ಕಾಲೇಜಿನ ವಿದ್ಯಾರ್ಥಿಗಳ ಸಹಕಾರ ಪಡೆಯಲಾಗುತ್ತಿದೆ. ಎಂಬಿಎ ವಿದ್ಯಾರ್ಥಿಗಳು ಮುಂದೆ ಉದ್ಯಮಿಗಳಾಗಲಿದ್ದು, ಬೆಲ್ಲವನ್ನು ಬಳಸಿ ಯಾವ ಯಾವ ಉತ್ಪನ್ನಗಳನ್ನು ತಯಾರಿಸುವ ಬಗ್ಗೆ ಪರಿಚಯಿಸು ಕೆಲಸ ಮಾಡುತ್ತಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಜಿ.ಪಂ ಸಿಇಓ ಟಿ.ಭೂಬಾಲನ್, ಬವಿವ ಸಂಘದ ಎಂಬಿಎ ಕಾಲೇಜಿನ ಪ್ರಾಚಾರ್ಯ ಆರ್.ಜಿ.ಅಳ್ಳೊಳ್ಳಿ, ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಮೌನೇಶ್ವರಿ ಕಮ್ಮಾರ, ಎಂ.ಬಿ.ಎ ಕಾಲೇಜಿನ ಅಶೋಕ ಉಟಗಿ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಪಿ.ಕೆ.ಪಾಟೀಲ, ಕೃಷಿ ವಿಜ್ಞಾನಿ ಬಿ.ಎಚ್.ಬಿರಾದಾರ, ಸಂಪನ್ಮೂಲ ವ್ಯಕ್ತಿಗಳಾದ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಯಲ ಹಿರಿಯ ವಿಜ್ಞಾನ ಡಾ.ಬಾಬಾಸಾಹೇಬ ಬೋರಸೆ, ಧಾರವಾಡದ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿ ಡಾ.ಹೇಮಲತಾ ಪೋದ್ದಾರ, ಬಿವಿವ ಸಂಸ್ಥೆಯ ಇಂಜಿನೀಯರಿಂಗ್ ಕಾಲೇಜಿನ ಪ್ರಾದ್ಯಾಪಕ ಹಾಗೂ ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥೆ ಡಾ.ಭಾರತಿ ಮೇಟಿ ಉಪಸ್ಥಿತರಿದ್ದರು.

ಎಂಬಿ.ಎ ವಿದ್ಯಾರ್ಥಿಗಳಿಂದ ಬೆಲ್ಲದ ಉತ್ಪನ್ನಗಳ ಪ್ರದರ್ಶನ.  ವಿದ್ಯಾಗಿರಿಯ ಬೀಮ್ಸ್ ಎಂಬಿಎ ಕಾಲೇಜಿನ ವಿದ್ಯಾರ್ಥಿಗಳು ಬೆಲ್ಲದಿಂದ ಎನೆಲ್ಲ ಉತ್ಪನ್ನಗಳನ್ನು ತಯಾರಿಸಬಹುದೆಂಬುದನ್ನು ಪ್ರದರ್ಶನದ ಮೂಲಕ ತೋರಿಸಿಕೊಟ್ಟರು. ಬೆಲ್ಲದಿಂದ ತಯಾರಿಸಲಾದ ವಿವಿಧ ಉತ್ಪನ್ನಗಳಾದ ಹುಳ್ಳಿ ಸಂಗಟಿ, ಗಸಗಸ ಪಾಯಿಸಾ, ಬೆಲ್ಲದ ಅನ್ನ, ಸಿರಿದಾನ್ಯಗಳ ಲಾಡು, ರಾಗಿ ಲಾಡು, ಬುಟಾ ಕಡಬು, ಶೇಂಗಾ ಚಿಕ್ಕಿ, ಬೆಲ್ಲದ ಗಾರಿಗೆ, ಉದುರು ಸಜ್ಜಕ, ಶೇಂಗಾ ಉಚಿಡಿ, ನವಣೆಯ ಹೋಳಿಗೆ, ಮಾದ್ಲಿ, ವಿಲೇಟ ಬಲ್ವಾ, ಲಡಕಿ ಲಾಡು, ಶೇಂಗಾ ಅಂಟು, ಮಿಠಾಯಿ ಹಾಗೂ ಮುಖದ ಕಾಂತಿಗೆ ಬೆಲ್ಲದ ಫೇಸ್ ಸ್ಕರ್ಬ ಮತ್ತು ಹೇರ್ ಮಾಸ್ಕ ಪ್ರದರ್ಶಿಸಿದರು.

ಜಿಲ್ಲಾ ಮಟ್ಟದ ಕೃಷಿ ಪ್ರಶಸ್ತಿ ಪ್ರಧಾನ ಪ್ರಸಕ್ತ ಸಾಲಿನ ಆತ್ಮ ಯೋಜನೆಯಡಿ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಹಾಗೂ ಕೃಷಿ ಮಹಿಳೆ ಪ್ರಶಸ್ತಿಗೆ ಆಯ್ಕೆಯಾದ ರೈತರನ್ನು ಸನ್ಮಾನಿಸಲಾಯಿತು. ಬಾದಾಮಿ ತಾಲೂಕಿನ ಶಂಕರಗೌಡ ವೀರನಗೌಡ, ಜ್ಞಾನೇಶ್ವರ ವಿಠಲ ಮುಂದಿನಮನಿ, ಬಾಗಲಕೋಟೆಯ ಗೋವಿಂದ ಭಜಂತ್ರಿ, ಬೀಳಗಿಯ ಸುನೀತಾ ಮೇಟಿ, ಯಲ್ಲಪ್ಪ ಹಳ್ಳೂರ, ಜಮಖಂಡಿಯ ಶಶಿಕಾಂತ ಗಲಗಲಿ, ಚಿದಾನಂದ ಹಂದಿಗುಂದ, ಸಂತೋಷ ಮೈಗೂರ, ಮುಧೋಳ ತಾಲೂಕಿನ ಶಂಕರ ಗಣಿ ಅವರನ್ನು ಸನ್ಮಾನಿಸಿ ಪ್ರಶಸ್ತಿ ಪತ್ರ ನೀಡಲಾಯಿತು.

Be the first to comment

Leave a Reply

Your email address will not be published.


*