ರಾಜ್ಯ ಸುದ್ದಿಗಳು
ದೇವನಹಳ್ಳಿ
ತಾಲೂಕಿನ ದಿನ್ನೇ ಸೋಲೂರು ರಸ್ತೆಗೆ ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಸರಕಾರದಲ್ಲಿ ಗ್ರಾಮ ಸಡಕ್ ಯೋಜನೆಯಡಿಯಲ್ಲಿ ಹಾಕಿದ್ದ ಡಾಂಬರೀಕರಣ ಇದೀಗ ಕಿತ್ತುಹೋಗಿ ಗುಂಡಿಗಳಿಂದ ಕೂಡಿದೆ. ಕೂಡಲೇ ರಸ್ತೆಗೆ ಡಾಂಬರೀಕರಣಗೊಳಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.ತಾಲೂಕಿನ ವಿಶ್ವನಾಥಪುರ ಗ್ರಾಪಂ ವ್ಯಾಪ್ತಿಗೆ ಬರುವ ಈ ಗ್ರಾಮದ ರಸ್ತೆಯೂ ದೇವಗಾನಹಳ್ಳಿ-ಕುಂದಾಣ-ಸೋಲೂರು ಗ್ರಾಮದ ಸಂಪರ್ಕ ರಸ್ತೆಯಾಗಿದ್ದು, ದಿನನಿತ್ಯ ಗ್ರಾಮಸ್ಥರು, ರೈತರು, ವಿದ್ಯಾರ್ಥಿಗಳು ಸಂಚರಿಸುವ ರಸ್ತೆ ಆಗಿದೆ. ಮಳೆ ಬಂತೆಂದರೆ ಈ ರಸ್ತೆಯಲ್ಲಿ ಓಡಾಡುವುದೇ ಕಷ್ಟವಾಗಿದೆ. ಇತ್ತೀಚೆಗೆ ಕೆರೆ ಕೋಡಿ ನೀರು ಸಹ ರಸ್ತೆಯಲ್ಲಿ ಹರಿಯುತ್ತಿದ್ದು, ಜಮೀನುಗಳಿಗೆ ನೀರು ಹರಿದಿದೆ. ಈ ರಸ್ತೆ ತೀರ ಹದಗೆಟ್ಟಿರುವುದರಿಂದ ಸಂಚಾರ ಮಾಡಲು ವಾಹನ ಸವಾರರು ಪರದಾಡುವ ಪರಿಸ್ಥಿತಿ ಇದೆ. ದಿನ್ನೇ ಸೋಲೂರು ಗ್ರಾಮದ ಮುಖ್ಯ ರಸ್ತೆಯಲ್ಲಿ ಬಂಡೆ ಕಲ್ಲಿನ ಹಾಸಿಗೆ ಇದ್ದು, ಅಕ್ಕಪಕ್ಕದ ಮನೆಗಳಿಂದ ಹೊರಬರುವ ತ್ಯಾಜ್ಯ ನೀರು ರಸ್ತೆಯಲ್ಲಿ ಹರಿಯುತ್ತಿದ್ದು, ವ್ಯವಸ್ಥಿತವಾದ ಚರಂಡಿ ಇರುವುದಿಲ್ಲ. ಇದರಿಂದ ಕೊಳಚೆ ನೀರಿನಲ್ಲಿಯೇ ವಾಹನ ಸವಾರರು ಮತ್ತು ಪಾದಚಾರಿಗಳು ನಡೆದುಕೊಂಡು ಹೋಗುವ ದುಸ್ಥಿತಿ ಇದೆ. ಆದಷ್ಟು ಶೀಘ್ರವಾಗಿ ಗ್ರಾಮದ ರಸ್ತೆಗೆ ಡಾಂಬರೀಕರಣಗೊಳಿಸಿ ಗ್ರಾಮದ ಜನರ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
Be the first to comment