ರಾಜ್ಯ ಸುದ್ದಿಗಳು
ದೇವನಹಳ್ಳಿ
ತಾಲೂಕಿನ ವಿಶ್ವನಾಥಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿಶ್ವನಾಥಪುರ ಗ್ರಾಮದಲ್ಲಿ ಎರಡು ಪಂಥಿನ ಗ್ರಾಮಸ್ಥರ ವೈಶಮ್ಯದಿಂದಾಗಿ ಸಾರ್ವಜನಿಕ ರಸ್ತೆಗೆ ತೊಂದರೆಯಾಗುವಂತೆ ಮನೆಕಟ್ಟುತ್ತಿರುವುದನ್ನು ಖಂಡಿಸಿ, ಒಂದೇ ಗ್ರಾಮದ ಎರಡೂ ಪಂಥಿನವರ ಮಧ್ಯೆ ಜಟಾಪಟಿ ನಡೆಯಿತು.
ಗ್ರಾಮಸ್ಥರು ಸ್ಥಳದಲ್ಲಿ ಸೇರುತ್ತಿದ್ದಂತೆ, ತಾಪಂ ಇಒ ವಸಂತ್‌ಕುಮಾರ್, ಪಿಡಿಒ ಗಂಗರಾಜು, ಕಾರ್ಯದರ್ಶಿ ಭಾಗ್ಯಮ್ಮ, ಗ್ರಾಪಂ ಅಧ್ಯಕ್ಷೆ ಮಂಗಳ ನಾರಾಯಣಸ್ವಾಮಿ, ಸದಸ್ಯರ ನೇತೃತ್ವದಲ್ಲಿ ಸ್ಥಳ ಪರಿಶೀಲನೆ ನಡೆಸಿ, ಗ್ರಾಮಸ್ಥರೊಂದಿಗೆ ಚರ್ಚಿಸಲಾಯಿತು. ಸ್ವಲ್ಪ ಕಾಲ ಗ್ರಾಮಸ್ಥರ ಮಧ್ಯೆ ಮಾತಿನ ಚಕಮಕಿ ನಡೆಯಿತು. ವಿಶ್ವನಾಥಪುರ ಪೊಲೀಸರು ಗಲಾಟೆಯನ್ನು ತಿಳಿಗೊಳಿಸಿದರು. ನಂತರ ಗ್ರಾಮಸ್ಥರನ್ನು ಸಂದಾಯ ಮಾಡಲು ತಾಪಂ ಇಒ ವಸಂತ್‌ಕುಮಾರ್ ಗ್ರಾಪಂ ಸಭಾಂಗಣದಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲು ಎರಡು ಪಂಥಿನ ಗ್ರಾಮಸ್ಥರಿಗೆ ತಾಕೀತು ಮಾಡಲಾದರೂ ಸಹ ಗ್ರಾಮಸ್ಥರು ಸಂದಾನವಾಗಲಿಲ್ಲ. ಕೊನೆಗೆ ಯಾವ ರೀತಿ ಈ ಸಮಸ್ಯೆಯನ್ನು ಮೇಲಾಧಿಕಾರಿಗಳು ಬಗೆಹರಿಸುತ್ತಾರೆಂಬುವುದನ್ನು ಕಾದುನೋಡಬೇಕಿದೆ.
ಮನೆಯ ಮಾಲೀಕ ಮೋಹನ್ ಮಾತನಾಡಿ, ಇಲ್ಲಿ ಯಾವುದೇ ರಸ್ತೆ ಒತ್ತುವರಿ ಮಾಡಿಕೊಂಡಿಲ್ಲ. ಈ ಹಿಂದೆ ಎಲ್ಲಾ ದಾಖಲೆಗಳನ್ನು ಇಟ್ಟುಕೊಂಡೇ ಮನೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ಮನೆ ನಿರ್ಮಾಣಕ್ಕೆ ಬೇಕೆಂತಲೇ ಅಡ್ಡಿಪಡಿಸುತ್ತಿದ್ದಾರೆ. ಮಹಜರ್ ಕೂಡ ಮಾಡಲಾಗಿದೆ. ಪಿಲ್ಲರ್ ಹಾಕಿದ್ದೇವೆ. ಇದೆಲ್ಲಾ ಆದಮೇಲೆ ಕೆಲವರು ಅಬ್ಜೆಷನ್ ಹಾಕಿದ್ದಾರೆ. ಪಂಚಾಯಿತಿಗೆ ತಿಳಿಸಿಯೇ ಸರ್ವೇ ನಡೆಸಿಯೇ ಮನೆ ಕಟ್ಟಲು ಮುಂದಾಗಿದ್ದೇವೆ. ನಿಮ್ಮ ಜಾಗದಲ್ಲಿ ನೀವು ಕಟ್ಟಿಕೊಳ್ಳಿ ಎಂದು ಪಂಚಾಯಿತಿಯವರು ಹೇಳಿದ್ದರು. ಮತ್ತೇ ಬೇಡವೆಂದು ಹೇಳುತ್ತಿದ್ದಾರೆ. ಈ ಜಾಗಕ್ಕೆ ಸಂಬಂಧಿಸಿದ ಪ್ರತಿಯೊಂದು ಕಾಗದ ಇದೆ. ಮಾನಸಿಕವಾಗಿ ಹಿಂಸೆಯನ್ನು ಕೆಲವರು ಅನಾವಶ್ಯಕವಾಗಿ ತೊಂದರೆ ನೀಡುತ್ತಿದ್ದಾರೆ ಎಂದು ಹೇಳಿದರು.
ಗ್ರಾಮದ ಮುಖಂಡ ಹರಿಪ್ರಕಾಶ್ ಮಾತನಾಡಿ, ಅನಧಿಕೃತವಾಗಿ ಮನೆಯನ್ನು ಕಟ್ಟುತ್ತಿದ್ದಾರೆ. ೨೦ ವರ್ಷದಿಂದ ರಸ್ತೆ ಇದ್ದು, ಡಾಂಬರೀಕರಣ ಸಹ ಹಾಕಲಾಗಿತ್ತು. ಇಷ್ಟು ವರ್ಷ ಏನೀರಲಿಲ್ಲ. ಇದೀಗ ಮನೆಕಟ್ಟುತ್ತಿದ್ದಾರೆ. ದಾಖಲೆಗಳನ್ನು ತೋರಿಸುತ್ತಿದ್ದಾರೆ ಆದರೆ ಅದು ಸರಿಯಾದ ಕ್ರಮದಲ್ಲಿಲ್ಲ. ಸಿಇಒ, ಇಒ ಅವರ ಗಮನಕ್ಕೆ ತಂದಿದ್ದರಿಂದ ಮನೆ ಕಟ್ಟುವುದನ್ನು ತಕ್ಷಣ ನಿಲ್ಲಿಸಿ ಎಂದು ಹೇಳಿದ್ದರು. ಇಷ್ಟೆಲ್ಲಾವಾದರೂ ಸಹ ಕೆಲಸ ಮಾಡುತ್ತಿದ್ದಾರೆ. ಮೊದಲಿದ್ದ ದಾಖಲೆಯೇ ಒಂದು ತರಹ, ಈಗಿರುವ ದಾಖಲೆಯೇ ಒಂದು ತರಹ ಇದೆ. ಏನೇ ಇರಲಿ ಸಾರ್ವಜನಿಕ ರಸ್ತೆಯ ಒತ್ತುವರಿಯನ್ನು ತೆರವುಗೊಳಿಸಿ ಉಳಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ಗ್ರಾಮಸ್ಥರೆಲ್ಲರೂ ಒಗ್ಗೂಡಿ ಧರಣಿ ಕೂರಲಾಗುತ್ತದೆ ಎಂದು ಎಚ್ಚರಿಸಿದರು.ಈ ವೇಳೆಯಲ್ಲಿ ಗ್ರಾಮಸ್ಥರಾದ ಸುಬ್ರಮಣಿ, ವಸಂತ್‌ಕುಮಾರ್, ಗುರುಪ್ರಸಾದ್, ರಾಮಮೂರ್ತಿ, ಗ್ರಾಪಂ ಸದಸ್ಯ ಮುನೇಗೌಡ, ಗ್ರಾಮಸ್ಥರು, ಗ್ರಾಪಂ ಸಿಬ್ಬಂದಿ ಇದ್ದರು.
Be the first to comment