ಜಿಲ್ಲಾ ಸುದ್ದಿಗಳು
ಬಾಗಲಕೋಟೆ: ಹಣಕಾಸು ಸಂಸ್ಥೆಯಲ್ಲಿ ಠೇವಣಿ ಮಾಡುವವರಿಗೆ ಭರವಸೆ ಮತ್ತು ನಂಬಿಕೆ ಬರುವ ಉದ್ದೇಶದಿಂದ ಕೇಂದ್ರ ಸರಕಾರ ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೋರೇಶನ್ (ಡಿಐಸಿಜಿಸಿ) ಜಾರಿಗೆ ತರಲಾಗಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‍ನಲ್ಲಿಂದು ಜಿಲ್ಲಾ ಮಟ್ಟದ ಬ್ಯಾಂಕರ್‍ಗಳ ಸಮಿತಿ ವತಿಯಿಂದ ಪ್ರಧಾನ ಮಂತ್ರಿಗಳು ವಚ್ರ್ಯೂವಲ್ ವೇದಿಕೆ ಮೂಲಕ ಕೋ-ಆಪ್‍ರೇಟಿವ್ ಬ್ಯಾಂಕ್‍ನ ಡೆಪಾಜಿಟ್ ಇನ್ಸೂರೆನ್ಸ್ ಫಲಾನುಭವಿಗಳೊಂದಿಗೆ ಹಮ್ಮಿಕೊಂಡ ಸಭೆಯ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಜೀವನೋಪಾಯಕ್ಕಾಗಿ ಜನ ತಮ್ಮ ತಮ್ಮ ಶಕ್ತಿಗನುಸಾರವಾಗಿ ದುಡಿದ ಹಣದಲ್ಲಿ ಸ್ವಲ್ಪ ಹಣ ಉಳಿಸಿ ಬ್ಯಾಂಕಿನಲ್ಲಿ ಠೇವಣಿ ಮಾಡುತ್ತಿದ್ದಾರೆ. ಅಲ್ಲದೇ ಕೆಲವರು ಜೀವಿತಾವಧಿಯಲ್ಲಿ ದುಡಿದ ಎಲ್ಲ ಹಣವನ್ನು ಠೇವಣಿ ಮಾಡುತ್ತಿದ್ದು, ಠೇವಣಿ ಮಾಡಿದ ಹಣ ಬ್ಯಾಂಕಿನವರ ವಸುಲಾತಿ ವಿಳಂಭನೆ, ಸುವ್ಯವಸ್ಥಿತ ಆಡಳಿತವಿಲ್ಲದೇ ದಿವಾಳುಯಾಗುತ್ತಿವೆ. ಇದರಿಂದ ಠೇವಣಿದಾರರಿಗೆ ಹಣ ಮರಳಿ ಪಡೆಯಲು ಸಾಧ್ಯವಾಗದೇ ತೊಂದರೆ ಅನುಭವಿಸುತ್ತಿದ್ದಾರೆ. ಇಂತಹ ಸಮಸ್ಯೆಗೊಳಗಾದ ಠೇವಣಿದಾರರು ಅನೇಕ ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅಂತಹ ಠೇವಣಿದಾರರ ರಕ್ಷಣೆಗಾಗಿಯೇ ಡಿಐಸಿಜಿಸಿ ಯೋಜನೆಯನ್ನು ಜಾರಿಗೆ ತಂದಿರುವುದಾಗಿ ತಿಳಿಸಿದರು.
ಜನರು ಮನೆಯಲ್ಲಿ ಸಂಗ್ರಹಿಸಿದ ಹಣವನ್ನು ಕಳ್ಳ ಕಾಕರ ಹಾವಳಿಯಿಂದ ರಕ್ಷಿಸಿಕೊಳ್ಳಲು ಬ್ಯಾಂಕುಗಳ ಮೇಲೆ ವಿಶ್ವಾಸವಿಟ್ಟು ಹಣ ಠೇವಣಿ ಮಾಡುತ್ತಿದ್ದಾರೆ. ಆದರೆ ಸರಿಯಾದ ಸಮಯಕ್ಕೆ ಠೇವಣಿ ಹಣ ಬ್ಯಾಂಕನಿಂದ ಬರದೇ ಇದ್ದರೆ ಬ್ಯಾಂಕ್ ಮೇಲೆಯೂ ವಿಶ್ವಾಸ, ನಂಬಿಕೆ ಇಲ್ಲದಂತಾಗುತ್ತದೆ. ಠೇವಣಿದಾರರಿಗೆ ಭರವಸೆ ಹಾಗೂ ನಂಬಿಕೆ ಬರಲಿ ಎಂಬ ಉದ್ದೇಶದಿಂದಲೇ ಡಿಐಸಿಜಿಸಿ ಯೋಜನೆ ಜಾರಿಗೆ ತರಲಾಗಿದೆ. ಈಗಾಗಲೇ ರಾಜ್ಯದ 5 ಬ್ಯಾಂಕುಗಳು ಸೇರಿದಂತೆ ದೇಶದಲ್ಲಿ ಅನೇಕ ಬ್ಯಾಂಕುಗಳ ದಿವಾಳಿಯಾಗಿದ್ದು, 21209 ಠೇವಣಿದಾರರಿಗೆ ಒಟ್ಟು 1300 ಕೋಟಿ ರೂ.ಗಳ ಪೈಕಿ 670 ಕೋಟಿ ರೂ.ಗಳ ರಾಜ್ಯದ ಪಾಲು ಇದೆ ಎಂದರು.
ರಾಜ್ಯದಲ್ಲಿ ದಿವಾಳಿ ಪಡೆದ ಬ್ಯಾಂಕ್‍ಗಳಲ್ಲಿ ಬೆಂಗಳೂರಿನ ಗುರು ರಾಘವೇಂದ್ರ ಸಹಕಾರಿ ಬ್ಯಾಂಕಿನ ಠೇವಣಿದಾರರು ಬಹಳಷ್ಟಿದ್ದಾರೆ. 647 ಕೋಟಿ ರೂ. ಬೆಂಗಳೂರಿಗೆ ಸೀಮಿತವಾಗಿದೆ. ಜಿಲ್ಲೆಯ ಮುಧೋಳ 10.89 ಕೋಟಿ ರೂ.ಗಳನ್ನು ಠೇವಣಿದಾರರಿಗೆ ಕೊಡಲಾಗುತ್ತಿದೆ. ಈ ಬ್ಯಾಂಕಿನಲ್ಲಿ 5 ಲಕ್ಷಕ್ಕಿಂತ ಹೆಚ್ಚು ಠೇವಣಿ ಮಾಡಿದವರು 3 ಜನ ಇದ್ದು, ಒಟ್ಟು 604 ಠೇವಣಿದಾರರನ್ನು ಮಾತ್ರ ಇತ್ಯರ್ಥ ಪಡಿಸಲಾದ ಕ್ಲೈಮ್‍ಗಳಾಗಿವೆ ಎಂದರು.
ಸಂಸದ ಪಿ.ಸಿ.ಗದ್ದಿಗೌಡರ ಮಾತನಾಡಿ ಗ್ರಾಹಕರು ಬ್ಯಾಂಕ್‍ನ ಮೇಲೆ ವಿಶ್ವಾಸಿ ಬರುವ ಹಿನ್ನಲೆಯಲ್ಲಿ ಕೇಂದ್ರ ಸರಕಾರ ಡಿಐಸಿಜಿಸಿ ಯೋಜನೆಯನ್ನು ಜಾರಿಗೆ ತಂದಿದೆ. ಬ್ಯಾಂಕಿನಲ್ಲಿ ಠೇವಣಿ ಮಾಡುವವರಿಗೆ ಯಾವುದೇ ರೀತಿಯ ಭಯ ಬೇಡ. ಈ ಹಿಂದೆ ತಮ್ಮದೇ ಠೇವಣಿ ಹಣದ ವಿಮಾ ಮೊತ್ತವನ್ನು ಪಡೆಯಲು ಹಲವಾರು ವರ್ಷಗಳು ಕಾಯಬೇಕಾಗಿತ್ತು. ಇದರ ಪರಿಣಾಮದಿಂದ ವಿಮಾ ಹಣದ ಗರಿಷ್ಟ ಮಿತಿಯನ್ನು 1 ಲಕ್ಷದಿಂದ 5 ಲಕ್ಷದವರೆಗೆ ಏರಿಸಿದ್ದು, ಇದರ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು.
ರಾಜ್ಯ ಕೈಮಗ್ಗ ಅಭಿವೃದ್ದಿ ನಿಗಮದ ಅಧ್ಯಕ್ಷ ಸಿದ್ದು ಸವದಿ ಮಾತನಾಡಿ ಬ್ಯಾಂಕಿನಲ್ಲಿಟ್ಟ ಠೇವಣಿದಾರರಿಗೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಮಹತ್ವದ ಯೋಜನೆಯನ್ನು ಕೇಂದ್ರ ಸರಕಾರ ಜಾತಿಗೆ ತಂದಿದೆ ಎಂದು ತಿಳಿಸಿದರು. ಶಾಸಕ ವೀರಣ್ಣ ಚರಂತಿಮಠ ಮಾತನಾಡಿ ಠೇವಣಿದಾರರಿಗೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಇನ್ಸೂರೆನ್ಸ್ ಕಂಪನಿ ಹುಟ್ಟಿಹಾಕಿದ್ದು, ಇದರಿಂದ ಠೇವಣಿದಾರರ ಹಣಕ್ಕೆ ವಿಮೆ ಸೌಲಭ್ಯ ಪಡೆಯಬಹುದಾಗಿದೆ. ಈ ಯೋಜನೆಯಲ್ಲಿ ಎಲ್ಲ ಕೋಆಪ್ ಬ್ಯಾಂಕುಗಳು ವಿಮೆಗೆ ಒಳಪಡಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಭಾರತೀಯ ಸ್ಟೇಟ್ ಬ್ಯಾಂಕಿನ ಜನರಲ್ ಮ್ಯಾನೇಜರ್ ಸ್ಯಾಮಸನ್ ಪೇನಸೇ, ಯುನಿಯನ್ ಬ್ಯಾಂಕಿನ ಡೆಪ್ಯೂಟಿ ಜನರಲ್ ಮ್ಯಾನೇಜರ್ ಸಂತೋಷ ಪ್ರಭು, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಚೇರಮನ್ ಪಿ.ಗೋಪಿಕೃಷ್ಣ, ಕೆನರಾ ಬ್ಯಾಂಕ್‍ನ ಕ್ಷೇತ್ರೀಯ ಪ್ರಬಂಧಕ ವೈ.ಸತೀಶಬಾಬು, ಜಿಲ್ಲಾ ಅಗ್ರಣಿ ಬ್ಯಾಂಕನ ವ್ಯವಸ್ಥಾಪಕ ಗೋಪಾಲರೆಡ್ಡಿ, ಎನ್‍ಐಸಿ ಅಧಿಕಾರಿ ಗಿರಿಯಾಚಾರ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಚೇತನಾ ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.
Be the first to comment