ರಾಜ್ಯ ಸುದ್ದಿಗಳು
ಬೆಂಗಳೂರು
ಎಂಎಸ್‌ಜಿಪಿ ತ್ಯಾಜ್ಯ ಘಟಕದ ವಿರುದ್ಧದ ರೈತ ಹೋರಾಟದ ವಿಚಾರದಲ್ಲಿ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ನಡೆದುಕೊಂಡ ದೌರ್ಜನ್ಯದ ನಡೆಯನ್ನು ಖಂಡಿಸಿ, ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಅಹವಾಲು ನೀಡಿ, ಅಧಿವೇಶನದಲ್ಲಿ ಈ ಕುರಿತು ಸಮಗ್ರವಾಗಿ ಚರ್ಚಿಸಬೇಕೆಂದು ವಿನಂತಿಸಲಾಯಿತು.ಬಿಡದಿಯ ಕೇತಗಾನಹಳ್ಳಿಯ ತೋಟದ ಮನೆಯಲ್ಲಿ ಮನವಿ ಸ್ವೀಕರಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, “ತ್ಯಾಜ್ಯ ಘಟಕ ವಿರುದ್ಧದ ಹೋರಾಟದಲ್ಲಿ ತೊಡಗಿದ್ದ ರೈತ ಮುಖಂಡರ ಮೇಲಿನ ದೌರ್ಜನ್ಯ ಖಂಡನೀಯ. ರೈತರನ್ನು ಕೆಣಕಿ ಉಳಿದ ಸರ್ಕಾರ ಇತಿಹಾಸದಲ್ಲಿಯೇ ಇಲ್ಲ. ನಾನೇ ಖುದ್ದು ಪ್ರತಿಭಟನೆಯಲ್ಲಿ ಭಾಗವಹಿಸಿ ರೈತರಿಗೆ ನ್ಯಾಯ ಕೊಡಿಸುತ್ತೇನೆ. ರೈತರ ಹೋರಾಟವನ್ನು ಹೈಜಾಕ್ ಮಾಡಿರುವ ಸ್ಥಳೀಯ ಶಾಸಕರ ನಡೆ ಸಮಂಜಸವಲ್ಲ. ದೌರ್ಜನ್ಯಕ್ಕೊಳಗಾದ ರೈತರ ಜೊತೆಗೆ ನಿಲ್ಲುವುದ ಬಿಟ್ಟು ನಾಟಕೀಯವಾಗಿ ಸಾಂಕೇತಿಕ ಪ್ರತಿಭಟನೆ ನಡೆಸಿರುವುದು ಅನ್ನದಾತನಿಗೆ ಎಸಗಿದ ದ್ರೋಹವಾಗಿದೆ. ರೈತರ ಹೋರಾಟ ಕುರಿತು ಅಧಿವೇಶನದಲ್ಲಿ ಧ್ವನಿ ಎತ್ತುತ್ತೇನೆ. ಸದಾ ರೈತರ ಹಿತ ಕಾಯಲು ಬದ್ಧ” ಎಂದು ಹೇಳಿದರು.
ಮನವಿ ನೀಡಿ ಮಾತನಾಡಿದ ನವ ಬೆಂಗಳೂರು ಹೋರಾಟ ಸಮಿತಿ ಗೌರವಾಧ್ಯಕ್ಷ ಕೆ.ವಿ.ಸತ್ಯಪ್ರಕಾಶ್, ಶಾಂತಿಯುತವಾಗಿ ಯಶಸ್ಸಿನ ಕಡೆಗೆ ನಡೆಯುತ್ತಿದ್ದ ರೈತರ ಹೋರಾಟವನ್ನು ಹತ್ತಿಕ್ಕುವ ಸಲುವಾಗಿ ಯಾರು ಯಾರು ಏನೇನು ಹಕೀಕತ್ತು ನಡೆಸಿದ್ದಾರೆಂಬುದು ತಿಳಿದಿದೆ. ರೈತನಿಗೆ ದ್ರೋಹ ಎಸಗಿದ ಎಲ್ಲರೂ ಶೀಘ್ರದಲ್ಲೇ ಅದರ ಫಲವನ್ನು ಅನುಭವಿಸಲಿದ್ದಾರೆ. ಎಂಎಸ್‌ಜಿಪಿ ಘಟಕ ಮುಚ್ಚುವುದು ಶತಃಸ್ಸಿದ್ಧ. ಕುಮಾರಸ್ವಾಮಿಯವರ ಭಾಗವಹಿಸುವಿಕೆಯಿಂದ ನಮ್ಮ ಹೋರಾಟಕ್ಕೆ ನೂರಾನೆ ಬಲ ಸಿಕ್ಕಂತಾಗಿದೆ. ಈ ಹೋರಾಟದಲ್ಲಿ ಅನ್ನದಾತನಿಗೆ ಖಂಡಿತವಾಗಿಯೂ ನ್ಯಾಯ ಸಿಗುತ್ತದೆ ” ಎಂದರು.ಇದೇ ಸಂದರ್ಭದಲ್ಲಿ ಭಕ್ತರಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಬಿ.ಆರ್.ಸಿದ್ಧಲಿಂಗಯ್ಯ , ನವ ಬೆಂಗಳೂರು ಹೋರಾಟ ಸಮಿತಿ ಮುಖಂಡ ಜಗದೀಶ್ ಚೌಧರಿ ಮತ್ತಿತರರು ಉಪಸ್ಥಿತರಿದ್ದರು.
Be the first to comment