ಜಿಲ್ಲಾ ಸುದ್ದಿಗಳು
ಬಾಗಲಕೋಟೆ: ಪ್ರವಾಸಿ ಗೈಡ್‌ಗಳಿಗೆ ಮಾಸಿಕ ವೇತನ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಪ್ರವಾಸಿ ಮಾರ್ಗದರ್ಶಕರು ಪತ್ರ ಚಳವಳಿ ನಡೆಸಿದರು. ಐಹೊಳೆಯಲ್ಲಿ ಐತಿಹಾಸಿಕ ದುರ್ಗಾ ದೇವಾಲಯದಿಂದ ಅಂಚೆ ಕಚೇರಿಗೆ ತೆರಳಿದ ಪ್ರವಾಸಿ ಮಾರ್ಗದರ್ಶಕರು ಪೋಸ್ಟ್ ಬಾಕ್ಸ್‌ನಲ್ಲಿ ಪತ್ರಗಳನ್ನು ಹಾಕಿ ಸರ್ಕಾರಕ್ಕೆ ರವಾನಿಸಿದರು.
ಜಿಲ್ಲೆಯ ಸುಮಾರು 35 ಜನ ಪ್ರವಾಸಿ ಮಾರ್ಗದರ್ಶಕರು ಸೇರಿ ರಾಜ್ಯದಲಿ ಒಟ್ಟು 350ಕ್ಕೂ ಹೆಚ್ಚು ಜನ ಪ್ರವಾಸಿ ಮಾರ್ಗದರ್ಶಕರು ಕಳೆದ ಹಲವಾರು ವರ್ಷಗಳಿಂದ ಪ್ರವಾಸಿ ತಾಣಗಳಲ್ಲಿ ಗೈಡ್ ವೃತ್ತಿಯನ್ನು ಮಾಡುತ್ತಿದ್ದೇವೆ. ಆದರೆ, ಅದು ಕೂಡಾ ವರ್ಷಪೂರ್ತಿ ಇರುವುದಿಲ್ಲ.
ಇದರಿಂದ ಗೈಡ್ ವೃತ್ತಿಯನ್ನೆ ನೆಚ್ಚಿಕೊಂಡ ಪ್ರವಾಸಿ ಮಾರ್ಗದರ್ಶಕರಿಗೆ ಜೀವನ ನಿರ್ವಹಣೆ ಕಷ್ಟವಾಗಿದೆ. ಆದ್ದರಿಂದ ಸರ್ಕಾರ ಕೂಡಲೇ ಗೈಡ್ ಗಳಿಗೆ ಮಾಸಿಕ ವೇತನ ನೀಡಬೇಕು ಎಂದು ಆಗ್ರಹಿಸಿದರು.
ಸಂಕಷ್ಟದ ಸಂದರ್ಭದಲ್ಲೂ ಕೂಡಾ ಪ್ರವಾಸಿ ಗೈಡ್‌ಗಳಿಗೆ ಸರ್ಕಾರ ಸೌಲಭ್ಯ ಒದಗಿಸಿಲ್ಲ ಇದರಿಂದ ಗೈಡ್ ವೃತ್ತಿಯನ್ನು ನಂಬಿಕೊಂಡು ಬದುಕುತ್ತಿರುವ ಪ್ರವಾಸಿ ಮಾರ್ಗದರ್ಶಕರ ಬದುಕು ಆರ್ಥಿಕವಾಗಿ ತೊಂದರೆಯಿಂದ ಕುಟುಂಬ ನಿರ್ವಹಣೆ,ಮಕ್ಕಳ ಶಿಕ್ಷಣಕ್ಕೆ ತೀವ್ರ ತೊಂದರೆಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಪ್ರವಾಸೋಧ್ಯಮ ಸಚಿವ ಆನಂದ ಸಿಂಗ್ ಅವರಿಗೆ ಪತ್ರದ ಮೂಲಕ ಒತ್ತಾಯಿಸಿದರು.
ಸ್ಥಳದಲ್ಲಿ ಪ್ರವಾಸಿ ಮಾರ್ಗದರ್ಶಿಗಳಾದ ಬಸವರಾಜ ನರಗುಂದ,ಅಶೋಕ ಮಾಯಾಚಾರಿ, ಸಿದ್ದಲಿಂಗಯ್ಯ ನಿಂಬಲಗುಂದಿ,ಕೊಟ್ಟೂರಸ್ವಾಮಿ ಸಾರಂಗಮಠ,ಈರಪ್ಪ ಅಂಗಡಿ,ರಮೇಶ ಭಜಂತ್ರಿ,ಪರಶುರಾಮ ಗೋಡಿ,ಬುಡ್ಡಪ್ಪ ಮಜ್ಜಗಿ,ಜಗದೀಶ ಹೊಸಮನಿ,ಯಮನಪ್ಪ ಮಾದರ ಇದ್ದರು.
Be the first to comment