ರಾಜ್ಯ ಸುದ್ದಿಗಳು
ಮಂಗಳೂರು
ಟೈಲ್ಸ್ ಫ್ಯಾಕ್ಟರಿಯಲ್ಲಿ ಕೆಲಸಕ್ಕಿದ್ದ ಜಾರ್ಖಂಡನ ಕುಟುಂಬದ ಎಂಟು ವರ್ಷದ ಹೆಣ್ಣು ಮಗುವಿನ ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಧ್ಯಪ್ರದೇಶದ ಮೂವರು ಹಾಗೂ ಜಾರ್ಖಂಡ್ ರಾಜ್ಯದ ಒಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇವರೆಲ್ಲರೂ ಅದೇ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ಕಾರ್ಮಿಕರಾಗಿದ್ದು ಬಡ ಕುಟುಂಬದ ಬಾಲಕಿಯ ಮೇಲೆ ಕಣ್ಣಿಟ್ಟಿದ್ದ ಆರೋಪಿಗಳು, ಭಾನುವಾರ (ನ.21) ಮಧ್ಯಾಹ್ನ ಆಟವಾಡುತ್ತಿದ್ದ ಬಾಲಕಿಯನ್ನು ಅದೇ ಕಾರ್ಖಾನೆಯ ಆವರಣದಲ್ಲಿದ್ದ ರೂಂಗೆ ಕರೆದೊಯ್ದಿದ್ದಾರೆ. ನಂತರ ಬಾಲಕಿಯ ಮೇಲೆ ಮೂವರು ಅತ್ಯಾಚಾರ ನಡೆಸಿದ್ದಾರೆ.
ಇದರಿಂದ ಬಾಲಕಿಗೆ ಆಘಾತ ಆಗಿದ್ದು, ತೀವ್ರ ರಕ್ತಸ್ರಾವವಾಗಿದೆ. ಬಾಲಕಿ ಕಿರಚಾಡಲು ಆರಂಭಿಸಿದ್ದು, ಒಬ್ಬ ಆರೋಪಿ ಬಾಲಕಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಕೃತ್ಯದ ಬಳಿಕ ಸಾಕ್ಷ್ಯ ನಾಶ ಮಾಡುವ ಉದ್ದೇಶದಿಂದ ನೀರು ಹರಿಯುವ ಚರಂಡಿಗೆ ಬಾಲಕಿಯ ಶವವನ್ನು ಎಸೆದಿದ್ದಾರೆ.
ಬಾಲಕಿ ಕಾಣಿಸದೇ ಇರುವುದರಿಂದ ಪಾಲಕರು ಹುಡುಕಾಟ ಆರಂಭಿಸಿದ್ದರು. ಟೈಲ್ಸ್ ಫ್ಯಾಕ್ಟರಿಯ ಸ್ವಲ್ಪ ದೂರದಲ್ಲಿರುವ ನೀರು ಹರಿಯುವ ಚರಂಡಿಯಲ್ಲಿ ಸಂಜೆ 6 ಗಂಟೆಗೆ ಬಾಲಕಿಯ ಶವ ಪತ್ತೆಯಾಗಿತ್ತು. ಕೃತ್ಯ ನಡೆದ ದಿನವೇ 10ರಿಂದ 15 ಮಂದಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದರು.ಸೂಕ್ತ ಸಾಕ್ಷಿಗಳನ್ನು ಸಂಗ್ರಹಿಸಿ ಇದೀಗ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ತಿಳಿಸಿದ್ದಾರೆ.
Be the first to comment