ರಾಜ್ಯ ಸುದ್ದಿಗಳು
ಹುಬ್ಬಳ್ಳಿ, ಏಪ್ರಿಲ್ 15:
ಕಾಂಗ್ರೆಸ್ ಅವರು ವಕೀಲರು ಹಾಗೂ ನ್ಯಾಯಮೂರ್ತಿಗಳಾಗುವ ಅವಶ್ಯಕತೆ ಇಲ್ಲ. ಸಂತೋಷ್ ಆತ್ಮಹತ್ಯೆ ಪ್ರಕರಣ ಮುಕ್ತವಾಗಿ ತನಿಖೆಯಾಗಲು ಬಿಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.
ಈಶ್ವರಪ್ಪ ಅವರನ್ನು ಬಂಧಿಸಬೇಕೆಂಬ ವಿರೋಧ ಪಕ್ಷಗಳ ಒತ್ತಾಯದ ಬಗ್ಗೆ ಪ್ರತಿಕ್ರಿಯೆ ನೀಡಿ ಪೊಲೀಸರಿಗೆ ತಮ್ಮ ಕೆಲಸ ಮಾಡಲು ಬಿಡಬೇಕು. ಪೊಲೀಸ್ ಆಗಲಿ ಸಿಬಿಐ ಆಗಲಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಕೆ.ಜೆ.ಜಾರ್ಜ್ ಅವರನ್ನು ಬಂಧಿಸಿರಲಿಲ್ಲ. ಏನು ಅವಶ್ಯಕತೆ ಇದೆ ಇಲ್ಲ ಎನ್ನುವುದನ್ನು ಪೊಲೀಸರು ತೀರ್ಮಾನ ಮಾಡುತ್ತಾರೆ. ಕಾಂಗ್ರೆಸ್ ಅವರು ಯಾಕೆ ಗಾಬರಿಯಾಗುತ್ತಿದ್ದಾರೆ. ಸತ್ಯ ಹೊರಬರಲಿ ಎಂದರು.
ಹಿನ್ನಡೆಯ ಪ್ರಶ್ನೆ ಉದ್ಭವಿಸುವುದಿಲ್ಲ:
ಕೆ.ಎಸ್. ಈಶ್ವರಪ್ಪ ಅವರ ರಾಜೀನಾಮೆ ಘೋಷಣೆಯಿಂದ ಸರ್ಕಾರಕ್ಕೆ ಹಿನ್ನಡೆ ಅಥವಾ ಮುಜುಗರ ತಂದಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ ತನಿಖೆಯಾದ ನಂತರ ಈಶ್ವರಪ್ಪ ಅವರಿಗೆ ಅವರು ಆರೋಪ ಮುಕ್ತರಾಗುವ ಬಗ್ಗೆ ವಿಶ್ವಾಸ ಇದೆ. ಇಲ್ಲಿ ಯಾರದೂ ವೈಯಕ್ತಿಕ ವಿಚಾರವಿಲ್ಲ. ಇಲ್ಲಿ ಹಿನ್ನಡೆ, ಮುನ್ನಡೆ ಪ್ರಶ್ನೆ ಬರುವುದಿಲ್ಲ ಎಂದರು.
ಸಚಿವ ಕೆ.ಎಸ್.ಈಶ್ವರಪ್ಪ ಅವರು ಇಂದು ಸಂಜೆ ರಾಜೀನಾಮೆ ನೀಡಲಿದ್ದಾರೆ. ತಮ್ಮ ನಿಲುವಿನ ಬಗ್ಗೆ ಅವರಿಗೆ ಸ್ಪಷ್ಟತೆ ಇದೆ ಎಂದರು.
ಪ್ರಕರಣ ಒಂದು ಷಡ್ಯಂತರವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಯಲಿದ್ದು, ತನಿಖೆಯಲ್ಲಿ ಸತ್ಯಾಂಶ ಹೊರಬೀಳಲಿದೆ ಎಂದರು.
Be the first to comment