ರಾಜ್ಯ ಸುದ್ದಿಗಳು
ಶಿರಸಿ
ಉಡುಪಿಯ ಪೇಜಾವರ ಶ್ರೀ ಅವರಿಗೆ ಅವಹೇಳನ ಮಾಡುವ ಮೂಲಕ ಕರ್ನಾಟಕದ ಕೋಟ್ಯಂತರ ಜನರ ಧಾರ್ಮಿಕ, ಸಾಮಾಜಿಕ ಭಾವನೆಗೆ ಧಕ್ಕೆ ತಂದ ಸಂಗೀತ ನಿರ್ದೇಶಕ ಹಂಸಲೇಖ ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಸಿಪಿಐ ಶಿರಸಿ ಅವರಿಗೆ ಮನವಿ ಸಲ್ಲಿಸಲಾಯಿತು.ಬ್ರಾಹ್ಮಣ ಸಮುದಾಯದ ಪರವಾಗಿ ರವೀಶ ಹೆಗಡೆ ಅಜ್ಜೀಬಳ ಎಂಬುವರು ಗುರುವಾರ ನಗರದ ಸಿಪಿಐ ಕಚೇರಿಗೆ ಮನವಿ ಸಲ್ಲಿಸಿದರು. ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಉಡುಪಿಯ ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಸ್ವಾಮೀಜಿ ಅವರ ಕುರಿತು ನೀಡಿದ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಬ್ರಾಹ್ಮಣರೂ ಸೇರಿದಂತೆ ಸಮಾಜದ ವಿವಿಧ ಸಮುದಾಯದ ಜನರ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತ ಹೇಳಿಕೆಯನ್ನು ಅವರು ನೀಡಿದ್ದಾರೆ ಎಂದು ಆರೋಪಿಸಿದರು.
ದಲಿತರ ಮನೆಗೆ ಪೇಜಾವರಶ್ರೀ ಭೇಟಿ ನೀಡಿದ ವಿಚಾರ ಪ್ರಸ್ತಾಪಿಸುತ್ತ ಅವರು ಕೇವಲ ಮನೆಗೆ ಭೇಟಿ ನೀಡುತ್ತಾರೆ ವಿನಃ ದಲಿತರು ಕೋಳಿಮಾಂಸ, ಕುರಿಮಾಂಸ ಕೊಟ್ಟರೆ ತಿನ್ನುತ್ತಾರೆಯೆ ಎಂದು ಪ್ರಶ್ನಿಸಿದ್ದಾರೆ. ಪೂಜ್ಯ ಪೇಜಾವರ ಸ್ವಾಮೀಜಿಯವರು ಕೋಟ್ಯಂತರ ಅನುಯಾಯಿಗಳನ್ನು, ಅಸಂಖ್ಯ ಭಕ್ತವೃಂದವನ್ನು ಹೊಂದಿದ್ದಾರೆ. ಅವರಂತಹ ಪೂಜ್ಯರ ವಿರುದ್ಧ ಅವಹೇಳನವಾಗಿ ಮಾತನಾಡುವ ಮೂಲಕ ಹಂಸಲೇಖ ಭಾವನೆಗಳಿಗೆ ಘಾಸಿ ಮಾಡಿದ್ದಾರೆ. ಅಲ್ಲದೆ ಆಹಾರ ಪದ್ಧತಿ ಅಣಕಿಸುವ ಮತ್ತು ಒಂದು ವಿಧದ ಆಹಾರ ಪದ್ಧತಿಯನ್ನು ಒತ್ತಾಯಪೂರ್ವಕವಾಗಿ ಹೇರುವ ಪ್ರಯತ್ನವೂ ಇದ್ದಂತಿದೆ. ಆದ ಕಾರಣ ಜವಾಬ್ದಾರಿಯುತ ವ್ಯಕ್ತಿಯಾಗಿರುವ ಹಂಸಲೇಖ ಮಾತನಾಡಿರುವ ರೀತಿ ಸಾಮಾಜಿಕ ಸ್ವಾಸ್ಥ್ಯ ಹದಗೆಡಲು ಕಾರಣವಾಗಿದೆ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಾಗಿ ಮನವಿಯ ಮೂಲಕ ಆಗ್ರಹಿಸಿದರು.
Be the first to comment