ರಾಜ್ಯ ಸುದ್ದಿಗಳು
ದೇವನಹಳ್ಳಿ
ದೇವನಹಳ್ಳಿ ಪ್ರವಾಸಿ ತಾಣಕ್ಕೆ ಹೆಸರುವಾಸಿಯಾಗಿದ್ದ ಐತಿಹಾಸಿಕ ದೇವನಹಳ್ಳಿ ಕೋಟೆಯ ಒಳಭಾಗದಲ್ಲಿ ಕಲ್ಲಿನಿಂದ ಮರು ನಿರ್ಮಾಣ ಮಾಡಿದ್ದ ಗೋಡೆ ಕುಸಿದು ಮಾಸುವ ಮುನ್ನವೇ ಕೋಟೆಯ ಹೊರಭಾಗದ ಕೋಟೆ ಉಬ್ಬು (ಬಸರಿ ಕೋಟೆ) ಸತತ ಮಳೆಯಿಂದಾಗಿ ಸಂಪೂರ್ಣವಾಗಿ ಧರೆಗುರುಳಿದೆ.
ಇದೀಗ ಕೋಟೆಯ ಒಂದು ಉಬ್ಬು ಕಲ್ಲುಗಳು ಕುಸಿದಿದ್ದರಿಂದ ಆಮೆಯಾಕೃತಿಯಲ್ಲಿದ್ದ ಕೋಟೆಯ ಸೌಂದರ್ಯಕ್ಕೆ ದಕ್ಕೆಯನ್ನುಂಟು ಮಾಡಿದೆ. ಐತಿಹಾಸಿಕ ಕೋಟೆಯ ಸಂರಕ್ಷಣೆಗೆ ಹಲವಾರು ಬಾರಿ ಪ್ರವಾಸೋದ್ಯಮ ಇಲಾಖೆ ಮತ್ತು ಪುರಾತತ್ವ ಇಲಾಖೆಗಳ ಗಮನಕ್ಕೆ ತಂದಿದ್ದರೂ ಸಹ ಯಾವುದೇ ಅಭಿವೃದ್ಧಿ ಕಾಣದ ಕೋಟೆ ಇದೀಗ ಅನಾಥವಾಗುವುದರಲ್ಲಿ ಸಂದೇಹವೇ ಇಲ್ಲದಂತೆ ಆಗಿದೆ. ಕುಸಿದಿರುವ ಕೋಟೆಯ ಉಬ್ಬಿಗೆ ತನ್ನದೇ ಆದ ಕಥೆಯೂ ಸಹ ಇದೆ. ಈ ಜಾಗದಲ್ಲಿ ಕೋಟೆ ಕಟ್ಟಲು ಬಸರಿಯಾಗಿದ್ದ ಹೆಂಗಸನ್ನು ಬಲಿಕೊಟ್ಟು ಕೋಟೆ ನಿಲ್ಲಿಸಲಾಗಿತ್ತು ಅದ್ದರಿಂದ ಈ ಕೋಟೆಗೆ ಬಸರಿ ಕೋಟೆ ಎಂದು ಹೆಸರುವಾಸಿಯಾಗಿದೆ ಎಂದು ಪೂರ್ವಜರು ಹೇಳಿರುವ ಕಥೆಯನ್ನು ಮೆಲುಕುಹಾಕುತ್ತದೆ. ನಂತರದ ಬೆಳವಣಿಗೆಯಲ್ಲಿ ಹೈದರಾಲಿಯ ಸೈನ್ಯ ಮಣ್ಣಿನ ಕೋಟೆಯನ್ನು ಕಲ್ಲಿನ ಕೋಟೆಯಿಂದ ಭದ್ರಪಡಿಸಿದ್ದಾರೆ ಎಂದೂ ಸಹ ಹೇಳುವುದುಂಟು. ಇಂತಹ ಚರಿತ್ರೆಯ ಕೋಟೆ ಇದೀಗ ಮೂಲೆಗುಂಪಾಗತೊಡಗಿರುವುದು ವಿಪರ್ಯಾಸವಾಗಿದೆ.
ಕೋಟೆ ಕುಸಿಯುತ್ತಿರುವ ಸುದ್ದಿ ತಿಳಿಯುತ್ತಿದ್ದಂತೆ ನಾಗರೀಕರು ಜಮಾವಣೆಗೊಂಡು ಕೋಟೆ ಕುಸಿದಿರುವುದನ್ನು ನೋಡಿ ಬೇಸರ ವ್ಯಕ್ತಪಡಿಸಿದ್ದು ಕಂಡುಬಂದಿದೆ. ಇದೇ ರೀತಿ ಉಳಿದಿರುವ ಅವಶೇಷಗಳ ಕೋಟೆಯನ್ನು ಸಂರಕ್ಷಿಸದಿದ್ದರೆ ಮುಂದಿನ ದಿನಗಳಲ್ಲಿ ಇತಿಹಾಸ ಹೊಂದಿರುವ ಕೋಟೆ ಇಲ್ಲಿ ಇತ್ತು ಎಂದು ಮುಂದಿನ ಪೀಳಿಗೆಗೆ ಹೇಳುವ ಪರಿಸ್ಥಿತಿ ಎದುರಾಗಬಹುದು. ಕೂಡಲೇ ಸಂಬಂಧಪಟ್ಟ ಇಲಾಖೆ ಇಂತಹ ಪ್ರವಾಸಿ ತಾಣಗಳ ಸಂರಕ್ಷಣೆಗೆ ಸರಕಾರದ ಗಮನಕ್ಕೆ ತಂದು ಅಭಿವೃದ್ಧಿಗೊಳಿಸಿ ಉಳಿದಿರುವ ಕೋಟೆಯ ಅವಶೇಷವನ್ನು ಸಂರಕ್ಷಿಸಬೇಕು ಎಂದು ನಾಗರೀಕರು ಒತ್ತಾಯಿಸಿದ್ದಾರೆ.
Be the first to comment