ಜಿಲ್ಲಾ ಸುದ್ದಿಗಳು
ಮಕ್ಕಳಿಂದ ವೇಷಭೂಷಣ, ಮಾದರಿ ಪ್ರದರ್ಶನ
ಮಕ್ಕಳ ದಿನಾಚರಣೆ ಅಂಗವಾಗಿ ತರಕಾರಿ, ದವಸ ಧಾನ್ಯಗಳ ಮೂಲಕ ರಚಿಸಿದ ಭಾರತ ಮಾತೆಯ ಚಿತ್ರ ಎಲ್ಲರನ್ನು ಆಕರ್ಷಿಸಿತು. ಅದಲ್ಲದೇ ಮಕ್ಕಳು ವಿಜ್ಣಾನ, ಗಣಿತ ಹಾಗೂ ಸಮಾಜ ವಿಜ್ಞಾನ ಪಠ್ಯಪುಸ್ತದಲ್ಲಿರುವ ಮಾದರಿಗಳನ್ನು ಹಾಗೂ ತೆಗೆದ ರಂಗೋಲಿ ಚಿತ್ತಗಳ ಪ್ರದರ್ಶನ ಎಲ್ಲರ ಗಮನ ಸೆಳೆದವು.
ಬಾಗಲಕೋಟೆ :ಇಂದಿನ ಮಕ್ಕಳೇ ನಾಳಿನ ಉತ್ತಮ ಪ್ರಜೆಗಳಾಗಿ ದೇಶಕ್ಕೆ ಸೇವೆ ಸಲ್ಲಿಸುವ ಮಕ್ಕಳಲ್ಲಿ ಕಾನೂನು ಅರಿವು ಮೂಡಿಸುವದು ಅಗತ್ಯವಾಗಿದೆ ಎಂದು ೨ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಂತೋಷ ಸಿ.ಬಿ ತಿಳಿಸಿದರು.
ನಗರದ ಬಿಟಿಡಿಎ ಆವರಣದಲ್ಲಿರುವ ಸರಕಾರಿ ಪ್ರೌಢಶಾಲೆಯಲ್ಲಿ ರವಿವಾರ ಕರ್ನಾಟಕ ರಾಜ್ಯ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಪೊಲೀಸ್ ಇಲಾಖೆ, ಜಿಲ್ಲಾ ವಕೀಲರ ಸಂಘ,
ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಮಕ್ಕಳ ದಿನಾಚರಣೆ ಹಾಗೂ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಆಯೋಜಿಸಲಾದ ಕಾರ್ಯಕ್ರಮಗಳ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂವಿಧಾನದ ಬಗ್ಗೆ ಪಠ್ಯಪುಸ್ತಕದಲ್ಲಿ ಮೂಲಭೂತ ಹಕ್ಕುಗಳನ್ನು ಉಲ್ಲೇಖಿಸಲಾಗಿದ್ದು, ಅವುಗಳ ಪ್ರಯೋಜನ ಜನರಿಗೆ ತಲುಪಬೇಕು. ಮೂಲಭೂತ ಸೌಲಭ್ಯಗಳನ್ನು ದೊರಕಿಸುವ ನಿಟ್ಟಿನಲ್ಲಿ ಪ್ರಾಧಿಕಾರದ ಮೂಲಕ ಜನರಲ್ಲಿ ಕಾನೂನು ಅರಿವು ಮೂಡಿಸುವ ಕಾರ್ಯ ಮಾಡಲಾಗುತ್ತಿದೆ. ಇಂದಿನ ಶಾಲಾ ಮಕ್ಕಳು ನಾಳಿನ ಪ್ರಜೆಗಳಾಗಿರುವದರಿಂದ ಮಕ್ಕಳಲ್ಲಿ ಕಾನೂನು ಅರಿವು ಅಗತ್ಯವಾಗಿದೆ ಎಂದರು.
ವೇದಿಕೆಯಲ್ಲಿ ಮಕ್ಕಳು ತಮ್ಮ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿದ್ದಾರೆ. ನಿಮ್ಮಲ್ಲಿಯೇ ಒಬ್ಬರು ಒನಕೆ ಓಬವ್ವ, ಸಂಗೊಳ್ಳಿ ರಾಯಣ್ಣ, ಅಬ್ದುಲ್ ಕಲಾಂ ನಂತಹ ವ್ಯಕ್ತಿ ಕಂಡಿತವಾಗಿಯೂ ನಿಮ್ಮಲ್ಲಿ ಇದ್ದಾರೆ. ನಾಳೆ ನಿವೇಲ್ಲರೂ ಉನ್ನತ ಪ್ರಜೆಗಳಾಗಿ ದೇಶಕ್ಕೆ ಸೇವೆ ಸಲ್ಲಿಸುವಿರಿ ಎಂಬ ವಿಸ್ವಾಸ ನಮ್ಮಲಿದೆ ಎಂದರು. ಬಡ ಹಾಗೂ ದುರ್ಬಲ ವರ್ಗದವರಿಗೆ ಹಕ್ಕು ಮತ್ತು ಸೌಲಭ್ಯ ದೊರಕಿಸುವುದು ಕಾನೂನು ಸೇವಾ ಪ್ರಾಧಿಕಾರದ ಮುಖ್ಯ ಉದ್ದೇಶವಾಗಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ಮಾತನಾಡಿ ದೇಶದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯು ಕಾನೂನಿನಡಿಯಲ್ಲಿ ಬದುಕುತ್ತಿದ್ದು, ಅದರ ಬೆಲೆ, ಪ್ರಯೋಜನವಾಗುವುದು ಕಾನೂನಿನ ಅರಿವಿದ್ದಾಗ ಮಾತ್ರ. ಇಲ್ಲವಾದರೆ ಅದು ಪುಸ್ತಕಕ್ಕೆ ಸೀಮಿತವಾಗಿರುತ್ತದೆ. ಕಾನೂನು ಮೂಡಿಸುವಲ್ಲಿ ಕಾನೂನು ಸೇವಾ ಪ್ರಾಧಿಕಾರ ಪ್ರಮುಖ ಪಾತ್ರವಹಿಸುತ್ತಿದೆ ಎಂದರು.
ಜಿಲ್ಲಾ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೇಮಲತಾ ಹುಲ್ಲೂರ ಮಾತವಾಡಿ ಅಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲೆಯಾದ್ಯಂತ ಕಾನೂನು ಅರಿವು ನೆರವು ಕಾರ್ಯಕ್ರಮಗಳನ್ನು ಆಯೋಜಿಸಿ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಲಾಗಿದೆ. ಈ ಕಾರ್ಯಕ್ಕೆ ಜಿಲ್ಲಾಡಳಿತ, ಜಿ.ಪಂ, ಪೊಲೀಸ್ ಇಲಾಖೆ ಸೇರಿದಂತೆ ಇತರೆ ಇಲಾಖೆಗಳು ಸಂಪೂರ್ಣ ಸಹಕಾರ ನೀಡಿದ್ದು, ಇದೇ ಸಂದರ್ಬದಲ್ಲಿ ಅಭಿನಂದನೆ ಸಲ್ಲಿಸಿದರು.
ಶಿಶು ಅಭಿವೃದ್ದಿ ಯೋಜನಾಧಿಕಾರಿ ಶಿಲ್ಪಾ ಹಿರೇಮಠ ಮಕ್ಕಳ ಹಕ್ಕುಗಳ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಸಂಗೀತಾ ಕಟ್ಟಿಮನಿ, ತಹಶೀಲ್ದಾರ ಜಿ.ಎಸ್.ಹಿರೇಮಠ, ಶಿಕ್ಷಣ ಇಲಾಖೆಯ ಯೋಜನಾ ಉಪ ಸಮನ್ವಯಾಧಿಕಾರಿ ಜಾಸ್ಮೀನ್ ಕಿಲ್ಲೇದಾರ, ಜಿಲ್ಲಾ ಕಾರ್ಮಿಕ ಅಧಿಕಾರಿ ಬಿ.ಆರ್.ಜಾದವ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ವಿ.ಬಿ.ದಾದ್ಮಿ, ವಕೀಲರ ಸಂಘದ ಉಪ ಕಾರ್ಯದರ್ಶಿ ಶಿವಾನಂದ ಉಳ್ಳಾಗಡ್ಡಿ, ಪ್ರಾಚಾರ್ಯ ಪಿ.ಎಸ್.ಬಳಲೂಮಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಕಿತ್ತೂರ ರಾಣಿ ಚನ್ನಮ್ಮ, ಒನಕೆ ಓಬವ್ವ, ನೆಹರು, ಅಬ್ದುಲ್‌ಕಲಾಂ, ಗಂಗೂಬಾಯಿ ಹಾನಗಲ್ಲರ ವೇಷಭೂಷಣ ತೊಟ್ಟು ಪ್ರದರ್ಶಿಸಿದರು. ಕೋವಿಡ್ ಜಾಗೃತಿಯ ಕಿರು ನಾಟಕ ಪ್ರದರ್ಶಿಸಲಾಯಿತು.
Be the first to comment