ಜಿಲ್ಲಾ ಸುದ್ದಿಗಳು
ಕುಮಟಾ
ನವೆಂಬರ್ 20ರಂದು ದೆಹಲಿಯ ವಿಜ್ಞಾನ ಭವನದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ರಾಷ್ಟ್ರ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಸ್ವಚ್ಛ ಭಾರತ ಅಭಿಯಾನದ ನಿರ್ದೇಶಕಿ ರೂಪಾ ಮಿಶ್ರಾ ಅವರು ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ. ಸ್ವಚ್ಛ ಭಾರತ ಅಭಿಯಾನ’ದಡಿ ಸ್ವಚ್ಛ ಸರ್ವೇಕ್ಷಣ ಕಾರ್ಯಕ್ರಮ ಯಶಸ್ವಿಗೊಳಿಸಿದ್ದಕ್ಕೆ ಕುಮಟಾ ಪುರಸಭೆಗೆ ಕೇಂದ್ರದ ವಸತಿ ಹಾಗೂ ನಗರ ವ್ಯವಹಾರ ಸಚಿವಾಲಯವು ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಲಿದೆ
ಕುಮಟಾ ಪುರಸಭೆಗೆ ಎರಡು ತಿಂಗಳ ಹಿಂದೆಯಷ್ಟೇ ಈ ಸಾಧನೆಗೆ ರಾಜ್ಯ ಪ್ರಶಸ್ತಿ ಕೂಡ ಲಭಿಸಿತ್ತು. 2016ರಿಂದ ಕುಮಟಾ ಪುರಸಭೆಯಲ್ಲಿ ಮನೆಗಳಿಂದ ಹಸಿ-ಒಣ ಕಸ ಪ್ರತ್ಯೇಕಿಸಿ ಸಂಗ್ರಹಿಸುವ ಬಗ್ಗೆ ಪರಿಣಾಮಕಾರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಪುರಸಭೆಯ ಸಹಾಯಧನದೊಂದಿಗೆ ಪಟ್ಟಣದಲ್ಲಿ ಸಾರ್ವಜನಿಕರಿಗೆ ಸಾವಿರ ಶೌಚಾಲಯಗಳನ್ನು ನಿರ್ಮಿಸಿ ಬಳಕೆ ಮಾಡುವ ಬಗ್ಗೆ ಮನವೊಲಿಸುವ ಕೆಲಸ ಮಾಡಲಾಗಿತ್ತು. ಇದಕ್ಕೆ ಸಾರ್ವಜನಿಕರು ಸ್ಪಂದಿಸುವಂತೆ ಜನಪ್ರತಿನಿಧಿಗಳು, ಪುರಸಭೆ ಸಿಬ್ಬಂದಿಗಳು ಶ್ರಮಿಸಿದ್ದಾರೆ.ಸ್ವಚ್ಛ ಭಾರತ ಮಿಶನ್ ಪರಶೀಲನಾ ತಂಡ ಈ ಎಲ್ಲ ಅಂಶಗಳನ್ನು ಪರಿಗಣಿಸಿದ್ದರಿಂದ ಕುಮಟಾ ಪುರಸಭೆಗೆ ಸ್ವಚ್ಛ ಸರ್ವೇಕ್ಷಣದ ರಾಷ್ಟ್ರ ಮಟ್ಟದ ಪ್ರಶಸ್ತಿ ಸಿಗಲು ಸಾಧ್ಯವಾಗಿದೆ’ ಎಂದು ಮುಖ್ಯಾಧಿಕಾರಿ ಎಂ.ಕೆ.ಸುರೇಶ ತಿಳಿಸಿದರು.
ಪುರಸಭೆ ಹಮ್ಮಿಕೊಂಡ ಕಾರ್ಯಕ್ರಮಗಳಿಗೆ ಸಹಕಾರ ನೀಡಿ ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಪಟ್ಟಣದ ಸಾರ್ವಜನಿಕರು ಸಹಕಾರ ನೀಡಿದ್ದಾರೆ.ಕುಮಟಾ ಪಟ್ಟಣದಲ್ಲಿ ಸ್ವಚ್ಛತೆ ನೆಲೆಸುವಂತೆ ಮಾಡಲು ಹಿಂದೆ ಪರಿಸರ ಎಂಜಿನಿಯರ್ ಆಗಿದ್ದ ನಾಗೇಂದ್ರ ಗಾಂವ್ಕರ್ ಅವರ ಪ್ರಯತ್ನವೂ ಕಾರಣ.ಎಲ್ಲ ಜನಪ್ರತಿನಿಧಿಗಳು ತಂತಮ್ಮ ವಾರ್ಡ್‌ಗಳಲ್ಲಿ ಶುಚಿ ಕಾರ್ಯಕ್ರಮ ನಡೆಯುವಲ್ಲಿ ಮುತುವರ್ಜಿ ವಹಿಸಿರುವುದು ಪ್ರಶಸ್ತಿಗೆ ಕಾರಣವಾಗಿದೆ. ಕುಮಟಾದಲ್ಲಿ ಕಸ ವಿಲೇವಾರಿ ಘಟಕಕ್ಕೆ ನಿಗದಿತ ಸ್ಥಳ ಇಲ್ಲದಿದ್ದರೂ ಉತ್ತಮ ಸಾಧನೆ ಮಾಡುವ ಮೂಲಕ ಮಾದರಿಯಾಗಿದೆ’ ಎಂದು ಪುರಸಭೆ ಅಧ್ಯಕ್ಷೆ ಮೋಹಿನಿ ಗೌಡ ಸಂತಸ ವ್ಯಕ್ತಪಡಿಸಿದರು.
Be the first to comment