ರಾಜ್ಯ ಸುದ್ದಿಗಳು
ಲಿಂಗಸ್ಗೂರು
ನಂದವಾಡಗಿ ಏತ ನೀರಾವರಿ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ಈ ಬಗ್ಗೆ ಸಚಿವರಿಗೆ, ಅಧೀನ ಕಾರ್ಯದರ್ಶಿ ಹಾಗೂ ಮುಖ್ಯ ಇಂಜಿನೀಯರು ಹಾಗೂ ಲೋಕಾಯುಕ್ತರಿಗೆ ದೂರು ದಾಖಲಿಸಲಾಗಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಹೆಚ್. ಬಿ ಮುರಾರಿ ಹೇಳಿದರು.ಪಟ್ಟಣದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ನೂರಾರು ಜನ ಮುಖಂಡರು, ಸ್ವಾತಂತ್ರ್ಯ ಹೋರಾಟಗಾರರು, ರೈತರ ಹೋರಾಟದ ಫಲವಾಗಿ ನಂದವಾಡಗಿ ಏತ ನೀರಾವರಿ ಯೋಜನೆ ಜಾರಿಯಾಗಿದೆ. ಆದರೆ ಕೆಲ ರಾಜಕೀಯ ಮುಖಂಡರು ತಾವು ನಂದವಾಡಗಿ ಏತ ನೀರಾವರಿ ಯೋಜನೆಯ ರುವಾರಿಗಲೆಂದು ಪೋಸ್ ನೀಡುತ್ತಿರುವುದು ಹಾಸ್ಯಾಸ್ಪದವಾಗಿದೆ.ಸರ್ಕಾರ ಸಾವಿರಾರು ಕೋಟಿ ವೆಚ್ಚದಲ್ಲಿ ಯೋಜನೆ ಜಾರಿಗೆಗೆ ಮುಂದಾಗಿದೆ. ಆದರೆ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ಭ್ರಷ್ಟತೆಯಿಂದಾಗಿ ನಂದವಾಡಗಿ ಏತ ನೀರಾವರಿ ಕಾಮಗಾರಿ ಕಳಪೆಯಾಗಿದೆ.
ಇದರಲ್ಲಿ ವಿಶೇಷವಾಗಿ ಮೂರನೇ ಪ್ಯಾಕೇಜ್ ಗುತ್ತಿಗೆ ಪಡೆದಿರುವ ಎನ್. ಡಿ ವಡ್ಡರ್ ಕಂಪನಿ ಕಾಮಗಾರಿ ನಿರ್ವಹಿಸಲು ಅರ್ಹತೆ ಇಲ್ಲದಿದ್ದರೂ ನೀಡುವ ಮೂಲಕ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ.ಟೆಂಡರ್ ನಿಯಮದ ಪ್ರಕಾರ ಐಎಸ್ಐ ಮುದ್ರೆ ಉಳ್ಳ 10 ಮೀಟರ್ ಅಳತೆ ಪೈಪ್ ಗಳನ್ನು ಅಳವಡಿಸಬೇಕು. ಆದರೆ ಎನ್ ಡಿ ವಡ್ಡರ್ ಕಂಪನಿ 3 ಮೀಟರ್ ಉದ್ದದ ತಗಡಿನ ಪೈಪ್ ಗಳನ್ನು ಅಳವಡಿಸಿ ನೂರಾರು ಕೋಟಿ ಹಣ ನುಂಗುತ್ತಿದೆ. ಇದರಿಂದ ರೈತರ ಹೊಲಗಳಿಗೆ ನೀರು ಹರಿಯುವ ಬದಲಾಗಿ ಗುತ್ತಿಗೆದಾರರ ಮನೆಗೆ ಹಣದ ಹೊಳೆ ಹರಿಯುತ್ತಿದೆ.
ಕ್ಷೇತ್ರದಲ್ಲಿ ಹಾಲಿ-ಮಾಜಿ ಶಾಸಕರು ತಮ್ಮ ಉದ್ಯಮವನ್ನು ಬಲಪಡಿಸುವ ಉದ್ದೇಶದಿಂದ ಉದ್ಯಮಿಗಳ ಒಡಂಬಡಿಕೆ ಮಾಡಿಕೊಂಡಿದ್ದಾರೆ. ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ಕ್ಷೇತ್ರದ ಅಭಿವೃದ್ಧಿಯನ್ನು ಮರೆತು ತಮ್ಮ ಅಭಿವೃದ್ಧಿಯನ್ನು ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಸಾವಿರಾರು ಎಕರೆಗೆ ನೀರು ಹರಿದು ರೈತರ ಭೂಮಿಗೆ ನೀರು ಬರುತ್ತದೆ ಎಂದು ರೈತರು ಬಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಆದರೆ ಗುತ್ತಿಗೆದಾರರು ಅಧಿಕಾರಿಗಳು ಶಾಮೀಲಾಗಿ ಸಾವಿರಾರು ಕೋಟಿ ಭ್ರಷ್ಟಾಚಾರದಲ್ಲಿ ತೊಡಗಿ ಕೊಂಡಿದ್ದಾರೆ. ಇದರಿಂದಾಗಿ ನಂದವಾಡಗಿ ಏತ ನೀರಾವರಿ ಕಾಮಗಾರಿ ಮೂಲ ಉದ್ದೇಶ ಮರೆಯಾಗಿದೆ. ಇಂತಹ ಭ್ರಷ್ಟಾಚಾರಿಗಳ ವಿರುದ್ಧ ಹಾಗೂ ಕಳಪೆ ಕಾಮಗಾರಿಯ ಬಗ್ಗೆ ದೂರು ಸಲ್ಲಿಸಲಾಗಿದೆ.
ಇದಕ್ಕೆ ಸ್ಪಂದಿಸಿರುವ ಸಚಿವರು ಹಾಗೂ ಮುಖ್ಯ ಇಂಜಿನೀಯರುಗಳು ಕಾಮಗಾರಿಯನ್ನು ಕೂಲಂಕುಶವಾಗಿ ಪರಿಶೀಲಿಸಿ ವರದಿ ನೀಡಲು ಆದೇಶಿಸಿದ್ದಾರೆ. ಕಾರಣ ನಂದವಾಡಗಿ ಏತ ನೀರಾವರಿ ಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ನಿರಂತರವಾಗಿ ಹೋರಾಟ ಮಾಡುತ್ತೇನೆ. ಅಲ್ಲದೆ ಸಮಗ್ರ ನೀರಾವರಿ ಹಕ್ಕು ರಕ್ಷಣಾ ಸಮಿತಿ ನಡೆಸುತ್ತಿರುವ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಜನಪರ ಹೋರಾಟಕ್ಕೆ ಸದಾ ಬೆಂಬಲ ನೀಡುತ್ತೇನೆ. ಭ್ರಷ್ಟರಿಗೆ ಬುದ್ದಿಕಲಿಸಿ ರೈತರಿಗೆ ನ್ಯಾಯ ದೊರಕಿಸಿಕೊಡಲು ಬದ್ಧನಾಗಿದ್ದೇನೆ ಎಂದು ಹೇಳಿದರು.
Be the first to comment