ರಾಜ್ಯ ಸುದ್ದಿಗಳು
ದೇವನಹಳ್ಳಿ
ಕಳೆದ ಎರಡು ವರ್ಷಗಳಿಂದ ಕೊರೊನಾ ಹೆಮ್ಮಾರಿಯಿಂದಾಗಿ ಶಾಲೆಗಳು ಮುಚ್ಚಿದ್ದ ಕಾರಣ ಮಕ್ಕಳ ಹಕ್ಕುಗಳಿಗೆ ಸಾಕಷ್ಟು ಹೊಡೆತ ಬಿದ್ದಿರುತ್ತದೆ. ಈ ಹಿನ್ನಲೆಯಲ್ಲಿ ಪ್ರತಿ ವರ್ಷ ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಪ್ರತಿ ಗ್ರಾಪಂ ಮಟ್ಟದಲ್ಲಿ ಮಕ್ಕಳ ಗ್ರಾಮಸಭೆಗಳನ್ನು ಆಯೋಜಿಸಿ ಮಕ್ಕಳ ಆತ್ಮಸ್ಥೈರ್ಯ ವೃದ್ಧಿಗೆ ಸರಕಾರ ಮಕ್ಕಳ ಗ್ರಾಮ ಸಭೆಗಳನ್ನು ನಡೆಸಲು ಆದೇಶ ಹೊರಡಿಸಿರುತ್ತದೆ. ಮಕ್ಕಳ ಹಕ್ಕುಗಳ ವಿಶೇಷ ಗ್ರಾಮ ಸಭೆಗಳನ್ನು ಗ್ರಾಪಂಗಳು ಮತ್ತು ವಿಕಾಸ ಸಾಮಾಜಿಕ ಮತ್ತು ಶೈಕ್ಷಣಿಕಾಭಿವೃದ್ಧಿ ಸಂಸ್ಥೆಯು ಜಂಟಿಯಾಗಿ ಮಕ್ಕಳ ವಿಶೇಷ ಗ್ರಾಮ ಸಭೆಗಳನ್ನು ಈ ವರ್ಷ ಎಲ್ಲಾ ಗ್ರಾಪಂಗಳಲ್ಲಿ ಕಡ್ಡಾಯವಾಗಿ ನಡೆಸಲು ಈಗಾಗಲೇ ಸುತ್ತೋಲೆಯನ್ನು ಹೊರಡಿಸಿದೆ. ಕಳೆದ 8 ವರ್ಷಗಳಿಂದ ಜಿಲ್ಲೆಯ ಎಲ್ಲಾ ಗ್ರಾಪಂಗಳಲ್ಲಿ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮ ಸಭೆಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿರುವ ಅನುಭವವನ್ನು ಹೊಂದಿವೆ. ಕಳೆದ ಎರಡು ವರ್ಷಗಳಿಂದ ಕೊರೊನಾದಿಂದಾಗಿ ಅಡ್ಡಿಯಾಗಿದ್ದ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆಗಳಿಗೆ ಪ್ರಸಕ್ತ ಸಾಲಿಗೆ ಶುಕ್ರದೆಸೆ ಕೂಡಿ ಬಂದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ 101 ಗ್ರಾಪಂಗಳಲ್ಲಿ ಮಕ್ಕಳ ವಿಶೇಷ ಗ್ರಾಮ ಸಭೆಗಳನ್ನು ಕಡ್ಡಾಯವಾಗಿ ನಡೆಸಲು ಆದೇಶವಿದ್ದು, ಈ ಹಿಂದಿನ ಸಾಲಿನಲ್ಲಿ ಗ್ರಾಮಸಭೆ ನಡೆದಿರದ ಕಾರಣ ಈ ಬಾರಿ ಮಕ್ಕಳ ಸಮಸ್ಯೆಗಳಿಗೆ ಪರಿಹಾರ ಸಿಗುವ ಹಾಗೂ ಗ್ರಾಮ ಸಭೆಗಳು ಮುಂದುವರೆಸಿಕೊಂಡು ಹೋಗುವ ನಿರೀಕ್ಷೆ ಇದೆ.ರಾಜ್ಯ ಸರಕಾರವು ಮಕ್ಕಳ ಹಕ್ಕುಗಳ ರಕ್ಷಣೆ ಹಾಗೂ ಮಕ್ಕಳ ಭಾಗವಹಿಸುವಿಕೆ ಹಕ್ಕು ಹಿನ್ನಲೆಯಲ್ಲಿ ಗ್ರಾಪಂಗಳಿಂದ ಮಕ್ಕಳ ಹಕ್ಕುಗಳ ಗ್ರಾಮ ಸಭೆಯನ್ನು ನಡೆಸಲು 2006ರಲ್ಲಿ ಪ್ರಮುಖ ನಿಲುವನ್ನು ತೆಗೆಕೊಂಡು ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆ 1989, ಭಾರತದ ಸಂವಿಧಾನದಲ್ಲಿ ಮಕ್ಕಳಿಗಿರುವ ಹಕ್ಕುಗಳನ್ನು ಮಾನ್ಯ ಮಾಡುವುದರಲ್ಲಿ ಮಹತ್ತರವಾದ ಹೆಜ್ಜೆಯನ್ನು ಇರಿಸಿದೆ. ಗ್ರಾಮೀಣ ಭಾಗದ ಮಕ್ಕಳ ಶೈಕ್ಷಣಿಕ ಹಿತಾಸಕ್ತಿಗೆ ಮಕ್ಕಳ ಭಾಗವಹಿಸುವಿಕೆಗೆ ಅವಕಾಶ ಕಲ್ಪಿಸಲಾಗಿದೆ. 2006ರಿಂದ ಪ್ರತಿ ವರ್ಷವೂ ಮಕ್ಕಳ ಹಕ್ಕುಗಳ ಗ್ರಾಮ ಸಭೆಯನ್ನು ನಡೆಸಿಕೊಂಡು ಬರಲಾಗಿದೆ. ಪ್ರಸ್ತುತ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ನ.14 ರಿಂದ ಜ.24ರವೆಗೆ 10 ವಾರಗಳ ಕಾಲ ಮಕ್ಕಳ ಸ್ನೇಹಿ ಗ್ರಾಪಂ ಅಭಿಯಾನ ಮತ್ತು ಮಕ್ಕಳ ಹಕ್ಕುಗಳ ಗ್ರಾಮ ಸಭೆಯನ್ನು ನಡೆಸಲು ಆದೇಶ ಹೊರಡಿಸಿದೆ.
***ಮಕ್ಕಳ ಸ್ನೇಹಿ ಗ್ರಾಪಂ ಅಭಿಯಾನದಲ್ಲಿ ಏನಿರುತ್ತೇ?***
ಮಕ್ಕಳ ಜನನ ನೊಂದಣಿ ಮತ್ತು ಜನನ ಪ್ರಮಾಣ ಪತ್ರಗಳ ವಿತರಣೆ
ಪೌಷ್ಠಿಕ ಆಹಾರ ಕುರಿತು ಮಾರ್ಗದರ್ಶನ ಹಾಗೂ ಜಾಗೃತಿ
ಮಕ್ಕಳಿಗೆ ಚುಚ್ಚುಮದ್ದು ಪ್ರಾಮುಖ್ಯತೆ
ಮಕ್ಕಳ ಕ್ರೀಡಾಕೂಟ, ಸಾಂಸ್ಕೃತಿಕ ಮತ್ತು ಸ್ಥಳೀಯ ಸಾಂಪ್ರದಾಯಿಕ ಚಟುವಟಿಕೆಗಳು
ಮಕ್ಕಳ ಕಥೆ ಹೇಳುವುದು, ಜನಪದ ಗೀತೆಗಳು ಮತ್ತು ರಂಗಭೂಮಿ ಕಾರ್ಯಕ್ರಮಗಳು
ಮಾನಸಿಕ ಆರೋಗ್ಯ ಸಂಬಂಧಿತ ಕಾರ್ಯಕ್ರಮಗಳು
ಶೈಕ್ಷಣಿಕ ಮತ್ತು ವೃತ್ತಿಪರ ಮಾರ್ಗದರ್ಶನ ಕಾರ್ಯಕ್ರಮ
ಚಿತ್ರಕಲೆ ಕಾರ್ಯಕ್ರಮ
ಮಕ್ಕಳ ವಿಶೇಷ ಗ್ರಾಪಂ ಸಭೆಯಲ್ಲಿ ಏನಿರುತ್ತೇ?
ಗ್ರಾಪಂ ಮಕ್ಕಳ ಹಕ್ಕುಗಳ ರಕ್ಷಣೆ ಫೇಸ್‌ಬುಕ್ ಪೇಜ್
ಮಕ್ಕಳ ಸಮಸ್ಯೆಗಳ, ಬೇಡಿಕೆಗಳ, ಪ್ರಶ್ನೆಗಳ ಮಕ್ಕಳ ಧನಿ (ಸಹಾಯವಾಣಿ 1098)ಪೆಟ್ಟಿಗೆ
ಜನನ ನೊಂದಣಿ ಪ್ರಮಾಣ ಪತ್ರ, ಪೌಷ್ಠಿಕ ಆಹಾರ, ಚುಚ್ಚುಮದ್ದು, ಶಾಲಾ ದಾಖಲಾತಿ, ಬಾಲ್ಯ ವಿವಾಹ ಪ್ರಕರಣ
ಹೆಣ್ಣು ಮಕ್ಕಳಿಗೆ ಶಿಕ್ಷಣ, ಮಕ್ಕಳ ಜೀತ ಪದ್ಧತಿ ಮುಕ್ತತೆ, ಮಕ್ಕಳ ಸುರಕ್ಷತೆ, ಶಿಶುಮರಣ ಪ್ರಮಾಣ ತಗ್ಗಿಸುವ ಜಾಗೃತಿ ಕಾರ್ಯಕ್ರಮಗಳು
ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಪ್ರತಿ ಗ್ರಾಪಂಗಳಲ್ಲಿ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮ ಸಭೆಯನ್ನು ಮಾಡಲಾಗುತ್ತದೆ. ಗ್ರಾಪಂ ಹಂತದಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದು. ಅವರ ಸಮಸ್ಯೆಗಳಿಗೆ, ಶಾಲೆಗಳಲ್ಲಿ ದೌರ್ಜನ್ಯ, ಪೋಷಕರ ಹಿನ್ನಲೆ, ಹೀಗೆ ಹಲವಾರು ರೀತಿಯ ಸಮಸ್ಯೆಗಳಿಗೆ ಧನಿಗೂಡಿಸಿ ಪರಿಹಾರ ಕೊಡಿಸುವ ಸರಕಾರದ ಮಹತ್ವದ ಕಾರ್ಯಕ್ರಮ ಇದಾಗಿದೆ. ಜಿಲ್ಲೆಯಾದ್ಯಂತ ಮತ್ತು ತಾಲೂಕಿನಾದ್ಯಂತ ನ.14ರಿಂದ ಪ್ರತಿ ಗ್ರಾಪಂಗಳಲ್ಲಿ ಕಡ್ಡಾಯವಾಗಿ ಮಾಡಲು ಆದೇಶ ಇರುತ್ತದೆ. – ಎಚ್.ಡಿ.ವಸಂತ್‌ಕುಮಾರ್ | ತಾಪಂ ಇಒ, ದೇವನಹಳ್ಳಿ
Be the first to comment