ರಾಜ್ಯ ಸುದ್ದಿಗಳು
ದೇವನಹಳ್ಳಿ
ಪ್ರತಿಯೊಬ್ಬ ಸಮುದಾಯದವರು ಕನ್ನಡ ಭಾಷೆ, ನೆಲ-ಜಲ, ಸಂಸ್ಕೃತಿಯನ್ನು ಎತ್ತಿಹಿಡಿಯುವಂತಾಗಬೇಕು. ಕನ್ನಡ ನಾಡು ನುಡಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕೊಯಿರ ಗ್ರಾಪಂ ಅಧ್ಯಕ್ಷೆ ರಮ್ಯ.ವಿ.ಶ್ರೀನಿವಾಸ್ ತಿಳಿಸಿದರು.
ದೇವನಹಳ್ಳಿ ತಾಲೂಕಿನ ಕೊಯಿರ ಗ್ರಾಪಂಯಲ್ಲಿ ಹಮ್ಮಿಕೊಂಡಿದ್ದ ೬೬ನೇ ಕನ್ನಡರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಧ್ವಜವನ್ನು ಹಾರಿಸುವುದರ ಮೂಲಕ ಮಾತನಾಡಿದರು. ಕನ್ನಡ ತೇರನ್ನು ಎಳೆಯುವುದು ಪ್ರತಿ ಕನ್ನಡಿಗರ ಕರ್ತವ್ಯವಾಗಿದೆ. ಕನ್ನಡ ಭಾಷೆಗೆ ತನ್ನದೇ ಆದ ಮಹತ್ವವನ್ನು ಶಾಲಾ ಹಂತದಲ್ಲಿ ಮಕ್ಕಳಿಗೆ ಶಿಕ್ಷಕರು ತಿಳಿಸಿಕೊಡುತ್ತಾರೆ. ಅದರಂತೆ ಪೋಷಕರು ಸಹ ತಮ್ಮ ಮಕ್ಕಳಿಗೆ ಕನ್ನಡದ ಕಿಚ್ಚನ್ನು ತುಂಬಬೇಕು. ಕನ್ನಡ ಭಾಷೆಗೆ ಹೋರಾಡಿದ ಮಹಾನ್ ಪುರುಷರು, ಕವಿಗಳನ್ನು ಸ್ಮರಿಸುವ ಕೆಲಸ ಮಾಡಬೇಕು ಎಂದರು.
ಪ್ರಭಾರ ಪಿಡಿಒ ಪದ್ಮಮ್ಮ ಮಾತನಾಡಿ, ಗ್ರಾಮೀಣ ಭಾಗದ ಪ್ರತಿ ಹಳ್ಳಿಯಲ್ಲೂ ಕನ್ನಡ ಭಾಷಾಭಿಮಾನ ಬೆಳೆಸಬೇಕು. ಏನೇ ಕೆಲಸಗಳು ಇದ್ದರೂ ಕನ್ನಡದಲ್ಲಿಯೇ ವ್ಯವಹರಿಸುವಂತಾಗಬೇಕು. ಆಂಗ್ಲ ಭಾಷೆಯನ್ನು ಕೇವಲ ಒಂದು ಪ್ರಮುಖ ಭಾಷೆಯನ್ನಾಗಿಸಬೇಕು. ಮಾತೃ ಭಾಷೆ ಕನ್ನಡವನ್ನು ಹೃದಯದಲ್ಲಿಟ್ಟುಕೊಂಡು ಪ್ರತಿಯೊಬ್ಬರು ರಾಜ್ಯೋತ್ಸವವನ್ನು ಉತ್ತಮ ರೀತಿಯಲ್ಲಿ ಅರ್ಥಪೂರ್ಣವಾಗಿ ಆಚರಿಸುವಂತಾಗಬೇಕು. ಕನ್ನಡ ಭಾಷೆಗೆ ದಕ್ಕೆಯಾದರೆ ಧ್ವನಿಯೆತ್ತುವ ಕೆಲಸ ಪ್ರತಿ ಕನ್ನಡಿಗರು ಮಾಡಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವರನಟ ಡಾ.ರಾಜ್‌ಕುಮಾರ್ ಅವರ ಕಿರಿಯ ಪುತ್ರ ಪುನೀತ್ ರಾಜ್‌ಕುಮಾರ್ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ಕನ್ನಡ ರಾಜ್ಯೋತ್ಸವ ಅಂಗವಾಗಿ ಡಾ.ಕೆ.ಎಸ್.ನಿಸಾರ್‌ಅಹಮದ್ ಅವರ ಜೋಗದ ಸಿರಿ ಬೆಳಕಿನಲ್ಲಿ ಗೀತೆಯನ್ನು ಸಾಮೂಹಿಕವಾಗಿ ಹಾಡಲಾಯಿತು. ಈ ವೇಳೆಯಲ್ಲಿ ಗ್ರಾಪಂ ಸದಸ್ಯರು, ಸಿಬ್ಬಂದಿಗಳು ಇದ್ದರು.
Be the first to comment