ಜಿಲ್ಲಾ ಸುದ್ದಿಗಳು
ಬಾಗಲಕೋಟೆ : ಪ್ರಸಕ್ತ ಹಂಗಾಮಿಗೆ ಕಬ್ಬಿನ ಬೆಲೆ ನಿಗಧಿ ಕುರಿತಂತೆ ರೈತರು ಮತ್ತು ಸಕ್ಕರೆ ಕಾರ್ಖಾನೆ ಮಾಲಿಕರು ಸೂಕ್ತ ನಿರ್ಧಾರಕ್ಕೆ ಬಾರದ ಹಿನ್ನಲೆಯಲ್ಲಿ ಸದರಿ ಸಭೆಯನ್ನು ಅಕ್ಟೋಬರ 31ಕ್ಕೆ ಮುಂದೂಡಲಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಜರುಗಿದ ಸಕ್ಕರೆ ಕಾರ್ಖಾನೆ ಮಾಲಿಕರ ಹಾಗೂ ರೈತರ ಜೊತೆಗಿನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ರೈತರಿಗೆ ನೀಡಬೇಕಾದ ಬಾಕಿ ಹಣ ಪಾವತಿ ಚರ್ಚೆ ನಡೆಸಲಾಯಿತು. 2018-19 ಮತ್ತು 2019-20ನೇ ಸಾಲಿನ ಹೆಚ್ಚುವರಿ ಬಾಕಿ ಹಣ ಕಾರ್ಖಾನೆಗಳು ಉಳಿಸಿಕೊಂಡಿದ್ದು, ಪಾವತಿಗೆ ಕಾಲಾವಕಾಶ ಕೇಳಿದರು. ಅಲ್ಲದೇ ಪ್ರಸಕ್ತ ಹಂಗಾಮಿಗೆ ಕಾರ್ಖಾನೆ ಪ್ರಾರಂಭಿಸಲು ಬೆಲೆ ನಿರ್ಧಾರ ಕುರಿತು ಮಾತುಕತೆ ನಡೆಸಲಾಯಿತು.
ರೈತರ ಹಿತದೃಷ್ಠಿಯಿಂದ ಪ್ರಸಕ್ತ ಹಂಗಾಮಿನ ಬೆಲೆ ನಿರ್ಧರಿಸುವ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಲು ಅಕ್ಟೋಬರ 31 ರಂದು ಮತ್ತೊಮ್ಮೆ ಸಭೆ ನಡೆಸಲು ನಿರ್ಧರಿಸಲಾಯಿತು. ಸದರಿ ಸಭೆಗೆ ಕಾರ್ಖಾನೆಯ ಮಾಲಿಕರು ಹಾಗೂ ರೈತರು ಸೂಕ್ತ ನಿರ್ಧಾರ ತೆಗೆದುಕೊಂಡ ಬರಬೇಕು. ಬಾಕಿ ಉಳಿಸಿಕೊಂಡ ಕಾರ್ಖಾನೆಯವರು ತಾವು ಕೇಳಿದ ಕಾಲಾವಕಾಶದ ಮುಂಚೆನೆ ರೈತರಿಗೆ ಬಾಕಿ ಹಣ ಪಾವತಿಯಾಗಬೇಕು. ಮುಂದೆಯೂ ಸಹ ಸರಿಯಾದ ಸಮಯಕ್ಕೆ ರೈತರಿಗೆ ಹಣ ಪಾವತಿಸುವ ಕೆಲಸವಾಗಬೇಕು ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ಮಾತನಾಡಿ ಕಾನೂನು ಸುವ್ಯವಸ್ಥೆಗೆ ದಕ್ಕೆಯಾಗದಂತೆ ರೈತರು ನಡೆಸುವ ಪ್ರತಿಭಟನೆ, ಹೋರಾಟಗಳು ಆಯಾ ಕಾರ್ಖಾನೆಗಳಿಗೆ ಸೀಮಿತವಾಗಿರಬೇಕು. ಇತರರಿಗೆ ತೊಂದರೆಯಾಗದ ರೀತಿಯಲ್ಲಿ ಸಾಂಕೇತಿಕವಾಗಿ ನಡೆಸಬೇಕು. ಅಲ್ಲದೇ ತಮ್ಮ ಬಾಕಿ ಹಣ ಪಾವತಿಗೆ ಸೀಮಿತವಾಗಿ ಕಾರ್ಖಾನೆಗಳ ಪ್ರಾಂಗಣಗಳಲ್ಲಿ ಹೋರಾಟ ನಡೆಸುವಂತೆ ರೈತರಲ್ಲಿ ಮನವಿ ಮಾಡಿಕೊಂಡರು.
ಸಭೆಯಲ್ಲಿ ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ, ಜಮಖಂಡಿ ಉಪವಿಭಾಗಾಧಿಕಾರಿ ಸಿದ್ದು ಹುಲ್ಲೊಳ್ಳಿ, ಆಹಾರ ಇಲಾಖೆಯ ಲೆಕ್ಕಾಧಿಕಾರಿ ಆರ್.ಎಸ್.ಚೌದರಿ, ವಿವಿಧ ಕಾರ್ಖಾನೆಯ ಪ್ರತಿನಿಧಿಗಳಾದ ಬಾಲಚಂದ್ರ ಭಕ್ಷಿ, ಸತೀಶ ಕಣಬೂರ, ಸಂಗಮೇಶ ನಿರಾಣಿ, ರೈತ ಮುಖಂಡರಾದ ಬಸವಂತಪ್ಪ ಕಾಂಬಳೆ, ಕೆ.ಟಿ.ಪಾಟೀಲ, ವಿಶ್ವನಾಥ ಊದಗಟ್ಟಿ, ಸುಭಾಷ ಕೋರಡ್ಡಿ, ರಾಚಪ್ಪ ಕಲ್ಲೊಳ್ಳಿ, ಯಂಕಪ್ಪ ಮಳಲಿ, ರಾಮನಗೌಡ ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.
Be the first to comment