ಜಿಲ್ಲಾ ಸುದ್ದಿಗಳು
ಬಾಗಲಕೋಟೆ: ಇಳಕಲ್ಲ ತಾಲೂಕಿನ ಕೆಲೂರ ಗ್ರಾಮದಲ್ಲಿ ತಾಲೂಕಾ ಕಾನೂನು ಸೇವಾ ಸಮಿತಿ ಹುನಗುಂದ ಹಾಗೂ ವಕೀಲರ ಸಂಘ ಹುನಗುಂದ, ತಾಲೂಕಾ ಆಡಳಿತ ಮತ್ತು ತಾಲೂಕಾ ಪಂಚಾಯತಿ ಹುನಗುಂದ ಇವರುಗಳ ಸಂಯುಕ್ತ ಆಶ್ರಯದಲ್ಲಿ ಸಾಯಂಕಾಲ 5 ಗಂಟೆಗೆ ಗ್ರಾಮದ ಮಹಾಂತೇಶ ಮಠದಲ್ಲಿ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಬಾಲ ಕಾರ್ಮಿಕ ಪದ್ದತಿ ತಡೆಗೆ ಬಾಲಕಾರ್ಮಿಕ (ತಡೆ ಮತ್ತು ನಿಯಂತ್ರಣ )ಕಾಯ್ದೆ 1986 ನ್ನು ಜಾರಿಗೆ ತರಲಾಯಿತು. ಈ ಕಾಯ್ದೆಯಡಿ 14 ವರ್ಷದ ಒಳಗಿನ ಮಕ್ಕಳನ್ನು ದುಡಿಸಿಕೊಳ್ಳುವಂತಿಲ್ಲ. ಈ ಕಾಯ್ದೆಯ ಮೂರನೇ ಪರಿಚ್ಛೇದ, ಮಕ್ಕಳು ದುಡಿಯಬಾರದ 18 ಅಪಾಯಕಾರಿ ವೃತ್ತಿಗಳು ಮತ್ತು 65 ಸಂಸ್ಕರಣಾ ಘಟಕಗಳನ್ನು ಗುರುತಿಸಿದೆ. ಕಾಯ್ದೆ ಉಲ್ಲಂಘಿಸಿ ಬಾಲ ಕಾರ್ಮಿಕರನ್ನು ನಿಯೋಜಿಸಿಕೊಳ್ಳುವ ವ್ಯಕ್ತಿಗಳಿಗೆ 3 ತಿಂಗಳಿನಿಂದ ಒಂದು ವರ್ಷದವರೆಗೆ ಜೈಲು ಶಿಕ್ಷೆ, ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿದೆ.
ಬಾಲ್ಯವಿವಾಹವನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಗ್ರಾಮ, ತಾಲೂಕು, ಜಿಲ್ಲಾ, ರಾಜ್ಯಮಟ್ಟದಲ್ಲಿ ಸಮಿತಿಗಳನ್ನು ರಚಿಸಲಾಗಿದೆ. ಗ್ರಾಮ ಪಂಚಾಯಿತಿಯಲ್ಲಿರುವ ಸಮಿತಿ 2 ತಿಂಗಳಿಗೊಮ್ಮೆ, ತಾಲೂಕು ಮತ್ತು ಜಿಲ್ಲಾ ಮಟ್ಟದ ಸಮಿತಿ 3 ತಿಂಗಳಿಗೊಮ್ಮೆ ಹಾಗೂ ರಾಜ್ಯಮಟ್ಟದ ಸಮಿತಿ ಪ್ರತಿ 6 ತಿಂಗಳಿಗೊಮ್ಮೆ ಸಭೆ ನಡೆಸಿ, ಬಾಲ್ಯ ವಿವಾಹ ತಡೆಗೆ ನಿರ್ದಿಷ್ಟ ಕ್ರಮಗಳನ್ನು ಅನುಷ್ಠಾನ ಮಾಡಬೇಕು ಎಂದು ವಕೀಲರಾದ ಶ್ರೀಮತಿ ವಿ.ಎನ್.ಹಿರೇಮಠ ತಿಳಿಸಿದರು.
ಕಾನೂನುಗಳ ಅರಿವು ಮೂಡಿಸುವುದೇ ನಮ್ಮ ಉದ್ದೇಶವಾಗಿದ್ದು ಮೋಟಾರವಾಹನ ಕಾಯ್ದೆಗಳ ಬಗ್ಗೆ ಮಾಹಿತಿ ನೀಡುತ್ತ ಪ್ರತಿಯೊಬ್ಬರು ವಾಹನಕ್ಕೆ ವೀಮೆ ಮಾಡಿಸಬೇಕು ವಿಮೆ ಇಲ್ಲದೆ ವಾಹನಗಳ ಓಡಾಟ ಮಾಡಕೂಡದು ಎಂದು ವಕೀಲರ ಸಂಘದ ಅಧ್ಯಕ್ಷರಾದ ಎಮ್.ಬಿ.ದೇಶಪಾಂಡೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪ್ರಧಾನ ದಿವಾಣಿ ನ್ಯಾಯಾಧೀಶರು ಹಾಗೂ ಜೆ.ಎಮ್.ಎಫ್.ಸಿ ಹಾಗೂ ಸದಸ್ಯ ಕಾರ್ಯದರ್ಶಿ ತಾಲೂಕಾ ಕಾನೂನು ಸೇವಾ ಸಮಿತಿ ಹುನಗುಂದ ಇವರು ಉದ್ಘಾಟಕರಾಗಿ ಆಗಮಿಸಿದ್ದರು.ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಹಾಲಿಂಗೇಶ ನಾಡಗೌಡರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ ಮಲ್ಲವ್ವ ಗೌಡರ, ವಕೀಲರಾದ ಎಸ.ಪಿ.ಹೂಲಗೇರಿ,ಕೆ.ಎ.ಹಿರೇಮಠ, ಎನ್.ಜಿ. ಮಡಿಕಾರ, ಹಿರಿಯರಾದ ಬಾಳಾಸಾಹೇಬ ನಾಡಗೌಡರ, ನಿವೃತ್ತ ಶಿಕ್ಷಕರಾದ ಎಸ್.ಎಮ್. ಬೆಲ್ಲದ, ಗ್ರಾಮ ಪಂಚಾಯತಿ ಸದಸ್ಯರಾದ ರಮೇಶ ಕೊಪ್ಪದ,ಹನಮಂತ ವಡ್ಡರ,ರೇಣುಕಾ ಕಮತರ, ಹುಲಗೆವ್ವ ದಿಡ್ಡಿಬಾಗಿಲ, ಭೀಮವ್ವ ತೋಟಗೇರ, ಗಿರಿಜಾ ಅಧಿಕಾರಿ ಹಾಗೂ ಇತರೆ ಸದಸ್ಯರು ಉಪಸ್ಥಿತರಿದ್ದರು.ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಪಿ.ಬಿ.ಮುಳ್ಳೂರ ನಿರೂಪಿಸಿ ವಂದಿಸಿದರು.
Be the first to comment