ರಾಜ್ಯ ಸುದ್ದಿಗಳು
ಅಂಕೋಲಾ
ತಾಲೂಕಿನ ಮೂಲದ ಸದ್ಯ ಬೆಂಗಳೂರಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಇದ್ದ ಯುವತಿಯೋರ್ವಳು ಅಲ್ಲೇ ಪರಿಚಿತನಾಗಿದ್ದ ಯುವಕನೋರ್ವ ತನ್ನನ್ನು ಮದುವೆಯಾಗುವಂತೆ ನೀಡಿದ್ದ ಪ್ರಸ್ತಾಪ ತಿರಸ್ಕರಿಸಿದ್ದಕ್ಕೆ ಹತ್ಯೆಯಾದ ಧಾರುಣ ಘಟನೆಗೆ ಸಂಬಧಿಸಿದಂತೆ ಸ್ವಲ್ಪ ತಡವಾಗಿ ಪ್ರಕರಣ ದಾಖಲಾಗಿದೆ.ಅಂಕೋಲಾ ತಾಲೂಕಿನ ಬೆಳಂಬಾರ ಗ್ರಾಮದ ಉಷಾ ಸುಕ್ರು ಗೌಡ (26) ಮೃತಳಾದ ದುರ್ದೈವಿಯಾಗಿದ್ದು , ತಾನು ಕಲಿತ ಬಿಇಡ್ ಶಿಕ್ಷಣಕ್ಕೆ ತಕ್ಕ ನೌಕರಿ ಸಿಗುವುದು ಕಷ್ಟ-ಸಾಧ್ಯ ಎಂದು ಅರಿತು, ಉದ್ಯೋಗವನ್ನರಸಿ ಬೆಂಗಳೂರಿಗೆ ಬಂದು, ಅಲ್ಲಿಯೇ ಖಾಸಗಿ ಕಂಪನಿಯೊಂದರಲ್ಲಿ ಕೆಲಸಕ್ಕೆ ಇದ್ದಳಲ್ಲದೇ, ಕೆಲ ತಿಂಗಳುಗಳ ಹಿಂದೆ ತನ್ನ ಅಣ್ಣನನ್ನು ಬೆಂಗಳೂರಿಗೆ ಕರೆಯಿಸಿಕೊಂಡು, ಆತನಿಗೂ ಉದ್ಯೋಗ ಕೊಡಿಸಿ, ಅಣ್ಣ-ತಂಗಿ ಇಬ್ಬರೂ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು.
ಉಷಾ ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಪರಿಚಿತನಾದ ಯುವಕ ನೋರ್ವ ಹೆಚ್ಚಿನ ಆತ್ಮೀಯತೆ ಬೆಳಿಸಿಕೊಂಡಿದ್ದಲ್ಲದೇ ಅದೇ ಸಲುಗೆಯಲ್ಲಿ ಆಗಾಗ ಇವರ ಬಾಡಿಗೆ ಮನೆಗೂ ಬಂದು ಹೋಗುತ್ತಿದ್ದ ಎನ್ನಲಾಗಿದೆ. ತನ್ನನ್ನು ಮದುವೆಯಾಗುವಂತೆ ಪದೇ ಪದೇ ಒತ್ತಾಯಿಸುತ್ತಿದ್ದ, ಮತ್ತು ಆ ಕುರಿತು ಪೀಡಿಸಿ ಮದುವೆಯಾಗಲು ಒಪ್ಪದಿದ್ದರೆ ಕೊಲೆ ಮಾಡುವ ಬೆದರಿಕೆ ಹಾಕಿದ್ದ ಎನ್ನಲಾಗಿದೆ.ಮದುವೆ ಪ್ರಸ್ತಾಪ ನೆರವೇರದಿರುವುದಕ್ಕೆ ನಿರಾಸೆಗೊಂಡು ಹತ್ಯೆ ಮಾಡಿದಂತಿದ್ದು, ಅವಳ ಮೊಬೈಲ್ ನ್ನು ಒಯ್ದಿರುವ ಕುರಿತು ಸಂಶಯಿಸಿ, ಮೃತ ಉಷಾ ಗೌಡಳ ಸಹೋದರ ಸಂದೀಪ ಗೌಡ ಪೊಲೀಸ್ ದೂರಿನಲ್ಲಿ ತಿಳಿಸಿದಂತಿದೆ.ಉಷಾಳ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಪೋಲೀಸರು ಮೃತ ದೇಹವನ್ನು ಕುಟುಂಬಸ್ಥರಿಗೆ ಒಪ್ಪಿಸಲಿದ್ದಾರೆ. ಸಮಯಾವಕಾಶ ಮತ್ತಿತರ ಅನುಕೂಲತೆ ನೋಡಿಕೊಂಡು ಮೃತಳ ಅಂತ್ಯಕ್ರಿಯೆ ಬೆಂಗಳೂರಿನಲ್ಲಿಯೇ ಅಥವಾ ಅಂಕೋಲಾಕ್ಕೆ ತಂದು ಮಾಡಲು, ಉಷಾಳ ತಂದೆ ಹಾಗೂ ಕುಟುಂಬ ಸಂಬಂಧಿಗಳು ಯೋಚಿಸಿ ಕಾರ್ಯಪ್ರವೃತ್ತವಾಗಿದ್ದಾರೆ.
ಘಟನಾ ಸ್ಥಳದ ಪೊಲೀಸ್ ಅಧಿಕಾರಿ ಕೆಂಪೇಗೌಡ, ಹಿಂದೆ ಅಂಕೋಲಾದಲ್ಲಿ ಕರ್ತವ್ಯ ನಿರ್ವಹಿಸಿ ಸದ್ಯ ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಜಯರಾಜ ಎಚ್,ಅಂಕೋಲಾ ಪಿಎಸ್ಐ ಪ್ರವೀಣ್ ಕುಮಾರ್ ಸೇರಿದಂತೆ ಪೊಲೀಸ್ ಇಲಾಖೆ ಇತರೆ ಹಿರಿಕಿರಿ ಅಧಿಕಾರಿಗಳು ತಮ್ಮ ಕರ್ತವ್ಯ ಜವಾಬ್ದಾರಿ ಜೊತೆಯಲ್ಲಿ ನೊಂದ ಬಡಕುಟುಂಬಕ್ಕೆ ಮಾನವೀಯ ನೆಲೆಯಲ್ಲಿ ಸಹಕಾರ – ಧೈರ್ಯ ತುಂಬುವ ಪ್ರಯತ್ನ ಮಾಡುತ್ತಿದ್ದು,,ಶಾಸಕಿ ರೂಪಾಲಿ ನಾಯ್ಕ ಸಹ ತನ್ನ ವೈಯಕ್ತಿಕ ನೆಲೆಯಲ್ಲಿ ವಿಶೇಷ ಕಾಳಜಿ ತೋರ್ಪಡಿಸಿದ್ದಾರೆ.
ಬೆಳಂಬರ ಗ್ರಾಮದ ಸ್ಥಳೀಯ ಮುಖಂಡ ಮಾದೇವಗೌಡ ಹಾಗೂ ಹಾಲಕ್ಕಿ ಸಮಾಜದ ಇತರೆ ಪ್ರಮುಖರು ಸಹ ತಮ್ಮ ತಮ್ಮ ನೆಲೆಯಲ್ಲಿ ದುಃಖಕ್ಕೆ ಸ್ಪಂದಿಸುತ್ತಿದ್ದು,ಇತರ ಅನೇಕರು ಎಲೆಮರೆಯ ಕಾಯಿಯಂತೆ ಟಿವಿ ಸಲ್ಲಿಸುತ್ತಿರುವುದು ಶ್ಲಾಘನೀಯ. ಒಟ್ಟಿನಲ್ಲಿ ಗ್ರಾಮೀಣ ವ್ಯಾಪ್ತಿಯ ಬೆಳಂಬರದಿಂದ ರಾಜಧಾನಿ ಬೆಂಗಳೂರಿಗೆ ಹೋಗಿ ,ತನ್ನದೇ ಕನಸು ಕಟ್ಟಿಕೊಂಡಿದ್ದ ಯುವತಿಯ ಉಸಿರು ಇನ್ನಿಲ್ಲದಂತೆ ಮಾಡಿದ ಹತಾಶ ಮತ್ತು ಹೃದಯ ಹೀನ ಪ್ರೇಮಿಯ ಉಸಿರಿನ ಜೊತೆ ಬೆರೆತು ಪ್ರಕೃತಿಯಲ್ಲಿ ಲೀನವಾಗುವಂತಾಗಿದೆ.
Be the first to comment