ರಾಜ್ಯ ಸುದ್ದಿಗಳು
ದೇವನಹಳ್ಳಿ
ತಾಲೂಕಿನ ಜಾಲಿಗೆ ಗ್ರಾಪಂ ವ್ಯಾಪ್ತಿಯ ಗಡಿಯಲ್ಲಿರುವ ಜುಟ್ಟನಹಳ್ಳಿ ಗ್ರಾಮದಲ್ಲಿ ಕೆರೆ ಕೋಡಿ ಹರಿದಿದ್ದರಿಂದ ಕೆರೆಗೆ ವಿಭಿನ್ನ ರೀತಿಯಲ್ಲಿ ಗ್ರಾಮಸ್ಥರು ಬಾಗಿನ ಸಮರ್ಪಿಸಿದರು.ಜುಟ್ಟನಹಳ್ಳಿ ಗ್ರಾಮಸ್ಥರು, ಮಹಿಳೆಯರು ಹಾಗು ಮಕ್ಕಳು ಸೇರಿದಂತೆ ಜಾಲಿಗೆ ಗ್ರಾಪಂ ಅಧ್ಯಕ್ಷೆ ದೀಪ್ತಿವಿಜಯ್‌ಕುಮಾರ್, ಉಪಾಧ್ಯಕ್ಷ ಎಚ್.ಬಾಲಸುಬ್ರಮಣ್ಯ, ಸದಸ್ಯರ ಸಮ್ಮುಖದಲ್ಲಿ ಸಾಂಪ್ರದಾಯಿಕವಾಗಿ ಕೆರೆಗೆ ಪೂಜೆ ಸಲ್ಲಿಸಿ, ವಿಭಿನ್ನ ರೀತಿಯಲ್ಲಿ ಬಾಗಿನ ಅರ್ಪಿಸಿದ್ದು ಗಮನಸೆಳೆಯಿತು. ಗ್ರಾಮದ ಹಿರಿಯ ಮುಖಂಡ ತಮ್ಮಯ್ಯ ಮಾತನಾಡಿ, ಈ ಹಿಂದೆ ಸುಮಾರು ೮-೧೦ ವರ್ಷಗಳ ನಂತರ ಕೆರೆ ತುಂಬಿತ್ತು. ವರುಣನ ಕೃಪೆಯಿಂದಾಗಿ ನಮ್ಮ ಊರಿನ ಕೆರೆ ತುಂಬಲು ದೇವರಲ್ಲಿ ಹರಕೆ ಮಾಡಿಕೊಳ್ಳುತ್ತಿದ್ದೇವು. ದೇವರು ಕರುಣೆ ತೋರಿ ಕೆರೆ ಕೋಡಿ ಹೋಗುವಂತೆ ಆಗಿದೆ. ಬೆಲ್ಲದಾರತಿ ಮತ್ತು ದೀಪಾರತಿಗಳನ್ನು ಬೆಳಗುವುದರ ಮೂಲಕ ಗ್ರಾಮದಲ್ಲಿ ಹಬ್ಬದಂತೆ ಬಾಗಿನ ಅರ್ಪಿಸುವ ಕಾರ್ಯವನ್ನು ನೆರವೇರಿಸುತ್ತಿದ್ದೇವೆ. ಈ ಹಿಂದಿನ ಪೂರ್ವಜರು ಮಾಡುತ್ತಿದ್ದ ಹಾಗೆ ಮಾಡಲಾಗುತ್ತಿದೆ ಎಂದು ಹೇಳಿದರು.
ಗ್ರಾಪಂ ಅಧ್ಯಕ್ಷೆ ದೀಪ್ತಿ ವಿಜಯ್‌ಕುಮಾರ್ ಮಾತನಾಡಿ, ಕೆರೆ ಕೋಡಿ ಹರಿದಿದ್ದರಿಂದ ಈ ಭಾಗದಲ್ಲಿರುವ ರೈತಾಪಿ ವರ್ಗದವರಿಗೆ ನೀರಿನ ಅಭಾವ ತಲೆತೂರುವುದಿಲ್ಲ. ಕೆರೆ ತುಂಬಿರುವುದು ಸುಮಾರು ವರ್ಷಗಳೇ ಕಳೆದಿದೆ. ಕೆರೆಯಲ್ಲಿ ನೀರು ತುಂಬಿ ಹರಿಯುತ್ತಿರುವುದರಿಂದ ಗ್ರಾಮೀಣ ಭಾಗದ ಜುಟ್ಟನಹಳ್ಳಿ ಗ್ರಾಮದ ಜನರು ಮತ್ತು ಗ್ರಾಪಂ ಸದಸ್ಯರೆಲ್ಲರೂ ಒಟ್ಟಾಗಿ ಸೇರಿ ಸಾಂಪ್ರದಾಯಿಕವಾಗಿ ಪೂಜಾ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದರು.
ಗ್ರಾಪಂ ಉಪಾಧ್ಯಕ್ಷ ಎಚ್.ಬಾಲಸುಬ್ರಮಣ್ಯ ಮಾತನಾಡಿ, ಸುಮಾರು ೨೫ ಎಕರೆ ವಿಸ್ತಾರವಾಗಿರುವ ಜುಟ್ಟನಹಳ್ಳಿ ಕೆರೆಯಲ್ಲಿ ಇದೀಗ ನೀರು ತುಂಬಿರುವುದು ಸಂತಸ ತಂದಿದೆ. ಕೆರೆ ಕೋಡಿ ಹರಿದಿರುವುದು ನಮ್ಮೆಲ್ಲರ ಪುಣ್ಯವಾಗಿದೆ. ಸತತ ಮಳೆರಾಯನ ಕೃಪೆಯಿಂದ ಈ ಭಾಗದ ಕೆರೆಗಳಲ್ಲಿ ನೀರು ತುಂಬಿದೆ. ತಿಂಡ್ಲು ಕೆರೆ ಕೋರಿ ಹರಿದು, ಜುಟ್ಟನಹಳ್ಳಿ ಕೆರೆಗೆ ಬಂದಿದ್ದರಿಂದ ಕೆರೆ ತುಂಬಿದೆ. ಇಲ್ಲಿಂದ ಕೆರೆ ಕೋಡಿ ಹರಿದು ಅರದೇಶನಹಳ್ಳಿ ಕೆರೆಗೆ ಹರಿಯುತ್ತದೆ ಎಂದು ಹೇಳಿದರು.
ಈವೇಳೆಯಲ್ಲಿ ಜಾಲಿಗೆ ಗ್ರಾಪಂ ಸದಸ್ಯರಾದ ಸಿ.ಎಂ.ಆನಂದ್, ಸುಚಿತ್ರ ಗೋಪಿನಾಥ್, ಮುನಿರತ್ನಮ್ಮ, ರಾಧಮ್ಮ, ಭವ್ಯ, ಕೆಂಪರಾಜು, ಸುಬ್ರಮಣ್ಯ, ಮಹೇಶ್‌ಕುಮಾರ್, ಮಂಜುಳಾ, ಶೋಭಾ ಆನಂದ್, ಶಿವಲಿಂಗಮ್ಮ, ಅಶ್ವಿನಿ, ಅಪ್ಪಯ್ಯ, ಮುನಿಯಪ್ಪ, ಊರಿನ ಮುಖಂಡರಾದ ತಮ್ಮಣ್ಣಪ್ಪ, ಆಂಜಿನಪ್ಪ, ಬಚ್ಚಪ್ಪ, ತಮ್ಮಯ್ಯ, ಆಂಜಿನಪ್ಪ, ಊರಿನ ಗ್ರಾಮಸ್ಥರು, ಮಹಿಳೆಯರು, ಮಕ್ಕಳು ಇದ್ದರು.
Be the first to comment