ಜಿಲ್ಲಾ ಪಂಚಾಯತ ಮಾಸಿಕ ಕೆಡಿಪಿ ಸಭೆ:1 ಲಕ್ಷ ಕೋವಿಡ್ ಲಸಿಕೆ ಹಾಕುವ ಗುರಿ : ಶಿವಯೋಗಿ ಕಳಸದ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ : ಕೋವಿಡ್ ಲಸಿಕಾಕರಣವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಅಕ್ಟೋಬರ 22 ರಂದು ನಡೆಯಲಿರುವ ಲಸಿಕಾ ಅಭಿಯಾನದಲ್ಲಿ ಜಿಲ್ಲೆಗೆ 1 ಲಕ್ಷ ಲಸಿಕೆ ಹಾಕುವ ಗುರಿ ನೀಡಲಾಗಿದ್ದು, ಗುರಿ ಮೀರಿ ಸಾಧನೆ ಮಾಡುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಆಗಿರುವ ಜಿ.ಪಂ ಆಡಳಿತ ಅಧಿಕಾರಿ ಶಿವಯೋಗಿ ಕಳಸದ ಅಧಿಕಾರಿಗಳಿಗೆ ತಿಳಿಸಿದರು.

ಜಿಲ್ಲಾ ಪಂಚಾಯತ ಸಭಾಭವನದಲ್ಲಿಂದು ಜರುಗಿದ ಜಿ.ಪಂ ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕೋವಿಡ್ ಲಸಿಕಾಕರಣದಲ್ಲಿ ಜಿಲ್ಲೆಯು ಈಗಾಗಲೇ ಶೇ.81 ರಷ್ಟು ಪ್ರಗತಿ ಸಾಧಿಸಿದ್ದು, ಲಸಿಕೆ ಪಡೆಯದವರಿಗೆ ಮನವೊಲಿಸುವ ಮೂಲಕ ಶೇ.100 ರಷ್ಟು ಲಸಿಕಾರಣವನ್ನು ಯಶಸ್ವಿಗೊಳಿಸಲು ತಿಳಿಸಿದರು. ಲಸಿಕಾಕರಣ ಪ್ರಗತಿಗೆ ಗ್ರಾಮೀಣ ಭಾಗದಲ್ಲಿ ಇರುವ ಎಸ್‍ಎಚ್‍ಜಿಗಳ ಬಳಕೆ ಮಾಡಿಕೊಳ್ಳಲು ತಿಳಿಸಿದರು.

ಕೋವಿಡ್‍ನಿಂದ ಮರಣ ಹೊಂದಿದ ಬಿಪಿಎಲ್ ಕುಟುಂಬಕ್ಕೆ 1 ಲಕ್ಷ ರೂ ಹಾಗೂ ಇತರೆ ಕುಟುಂಬಗಳಿಗೆ 50 ಸಾವಿರ ರೂ.ಗಳ ಪರಿಹಾರಧನ ನೀಡಲಾಗುತ್ತಿದ್ದು, ಅದಕ್ಕಾಗಿ ಆನ್‍ಲೈನ್ ಮೂಲಕ ಅರ್ಜಿ ಪಡೆಯಲಾಗುತ್ತಿದ್ದು, ಜಿಲ್ಲೆಯಲ್ಲಿ ಕೋವಿಡ್‍ನಿಂದ ಮೃತಪಟ್ಟ 336 ಪೈಕಿ 202 ಮಾತ್ರ್ರ ಅರ್ಜಿಗಳನ್ನು ಸಲ್ಲಿಸಿದ ಬಗ್ಗೆ ಮಾಹಿತಿ ಪಡೆದ ಕಳಸದ ಅವರು ಅನುದಾನ ಬಿಡುಗೆಯಾದಲ್ಲಿ ಪರಿಹಾರಧನ ಜಮಾ ಮಾಡಲು ಕ್ರಮವಹಿಸಲು ತಿಳಿಸಿದರು.

ನಂತರ ವಿವಿಧ ಕೃಷಿ, ತೋಟಗಾರಿಕೆ, ರೇಷ್ಮೆ, ಅರಣ್ಯ, ನರೇಗಾ ಸೇರಿದಂತೆ ವಿವಿಧ ಇಲಾಖೆಯ ಪ್ರಗತಿ ಪರಿಶೀಲನೆ ಮಾಡಿದರು. ಕೃಷಿ ಇಲಾಖೆಗೆ ಸಂಬಂಧಿಸಿದಂತೆ ಮುಂಗಾರು ಬೆಳೆಗಳ ಸರ್ವೆ ಕಾರ್ಯ ಪೂರ್ಣಗೊಂಡಿದ್ದು, ಹಿಂಗಾರು ಮಾತ್ರ ಬಾಕಿ ಉಳಿದಿದೆ. ರಸಗೊಬ್ಬರಗಳ ದುರುಪಯೋಗವಾಗದಂತೆ ಕ್ರಮವಹಿಸಲಾಗುತ್ತಿದ್ದು, ಅಂತಹ ವ್ಯಾಪಾರಸ್ಥರಿಗೆ ನೋಟಿಸ್ ಕೊಟ್ಟು ನಂತರ ಲೈಸನ್ಸ್ ರದ್ದತಿಗೆ ಕ್ರಮವಹಿಸಲಾಗುತ್ತಿದೆ. ಈ ಬಗ್ಗೆ ಜಿಲ್ಲೆಯಲ್ಲಿ 48 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ಸಭೆಗೆ ತಿಳಿಸಿದರು.

ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ರಾಹುಲಕುಮಾರ ಬಾವಿದಡ್ಡಿ ಮಾತನಾಡಿ ಸಮಗ್ರ ತೋಟಗಾರಿಕೆ ಅಭಿವೃದ್ದಿಯಡಿ ಶೇ.54 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಸಭೆಗೆ ತಿಳಿಸಿದಾಗ ತೋವಿವಿಯಲ್ಲಿ ಸಂಶೋಧನೆ ಪಡಿಸಲಾದ ಹೊಸ ಹೊಸ ತಳಿಗಳ ಬಗ್ಗೆ ರೈತರಿಗೆ ಮಾಹಿತಿ ನೀಡುವ ಕೆಲಸವಾಗಬೇಕು ಎಂದು ಕಳಸದ ತಿಳಿಸಿದರು. ಅರಣ್ಯ ಇಲಾಖೆಯವರು ಆರ್‍ಸಿ ಸೆಂಟರಗಳಲ್ಲಿ ಸಸಿಗಳನ್ನು ನೆಡುವ ಕಾರ್ಯವಾಗಬೇಕು. ರೇಷ್ಮೆ ಬೆಳೆಯಿಂದ ಅಧಿಕ ಲಾಭವಿದ್ದು, ಜಿಲ್ಲೆಯಲ್ಲಿ ರೇಷ್ಮೆ ಬೆಳೆ ಏರಿಯಾ ಹೆಚ್ಚಾಗಲು ಕ್ರಮವಹಿಸಲು ಸೂಚಿಸಿದರು.

ಜಿ.ಪಂ ಉಪಕಾರ್ಯದರ್ಶಿ ಅಮರೇಶ ನಾಯಕ ಮಾತನಾಡಿ ಉದ್ಯೋಗ ಖಾತರಿ ಯೋಜನೆಯಡಿ ಜಿಲ್ಲೆಗೆ 50 ಲಕ್ಷ ವಾರ್ಷಿಕ ಗುರಿ ಇದ್ದು, 40.91 ಲಕ್ಷ ಮಾನವ ದಿನಗಳನ್ನು ಸೃಜಿಸುವ ಮೂಲಕ ಅಕ್ಟೋಬರ ಅಂತ್ಯಕ್ಕೆ ಶೇ.81.82 ರಷ್ಟು ಸಾಧನೆ ಮಾಡಲಾಗಿದೆ. ಕೆರೆ ಅಭಿವೃದ್ದಿ ಕುರಿತಂತೆ ಸಭೆಯಲ್ಲಿ ಕೇಳಿದಾಗ ಈಗಾಗಲೇ ಮುಚಖಂಡಿ ಕೆರೆ ಸೇರಿದಂತೆ ಇತರೆ ಕೆರೆಗಳನ್ನು ಅಭಿವೃದ್ದಿ ಪಡಿಸಲು ಕ್ರಮವಹಿಸಲಾಗುತ್ತಿದೆ ಎಂದು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ದಿ ಇಲಾಖೆ ಅಧಿಕಾರಿಗಳು ಸಭೆಗೆ ತಿಳಿಸಿದರು. ನಂತರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು.

ಸಭೆಯಲ್ಲಿ ಜಿ.ಪಂ ಸಿಇಓ ಟಿ.ಭೂಬಾಲನ್, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಿ.ಪಂ ಉಪಕಾರ್ಯದರ್ಶಿ ಶಿವಯೋಗಿ ಕಳಸದ, ಉಪವಿಭಾಗಾಧಿಕಾರಿಗಳಾದ ಎಂ.ಗಂಗಪ್ಪ, ಸಿದ್ದು ಹುಲ್ಲೊಳ್ಳಿ, ಜಿ.ಪಂ ಮುಖ್ಯ ಯೋಜನಾಧಿಕಾರಿ ಪ್ರಭು ಮಾನೆ, ಯೋಜನಾಧಿಕಾರಿ ಚಳಗೇರಿ, ಮುಖ್ಯ ಲೆಕ್ಕಾಧಿಕಾರಿ ಸಿದ್ದರಾಮೇಶ್ವರ ಉಕ್ಕಲಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಆಯಾ ತಾಲೂಕಿನ ತಹಶೀಲ್ದಾರ, ಕಾರ್ಯನಿರ್ವಾಹಕ ಅಧಿಕಾರಿಗಳು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*