ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ಶ್ರದ್ದಾಂಜಲಿ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ : ದೇಶದಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಹಾಗೂ ರಕ್ಷಣೆ ಸಂದರ್ಭದಲ್ಲಿ ಬಲಿಯಾದ ಪೊಲೀಸ್ ಹುತಾತ್ಮರಿಗೆ ನವನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಗುರುವಾರ ಭಾವಪೂರ್ಣ ಶ್ರದ್ದಾಂಜಲಿ ಅರ್ಪಿಸಲಾಯಿತು.

ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಂಡ ಪೊಲೀಸ್ ಹುತಾತ್ಮರ ದಿನಾಚರಣೆ ಅಂಗವಾಗಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ದೇಶಪಾಂಡೆ ಜಿ.ಎಸ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೇಮಲತಾ ಹುಲ್ಲೂರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ಸೇರಿದಂತೆ ಪೊಲೀಸ್ ಇಲಾಖೆಯ ವಿವಿಧ ಅಧಿಕಾರಿಗಳು, ಸಿಬ್ಬಂದಿಗಳು, ಹುತಾತ್ಮರ ಕುಟುಂಬಸ್ಥರು ಹಾಗೂ ಪತ್ರಕರ್ತರು ಹುತಾತ್ಮ ಪೊಲೀಸ್ ಸ್ಮಾರಕಕ್ಕೆ ಹೂಗುಚ್ಛ ಅರ್ಪಿಸಿ ಗೌರ ನಮನ ಸಲ್ಲಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ದೇಶಪಾಂಡೆ ಜಿ.ಎಸ್ ಮಾತನಾಡಿ ದೇಶದ ರಕ್ಷಕರಾದ ಪೊಲೀಸ್ ಸಿಬ್ಬಂದಿಗಳು ಕರ್ತವ್ಯದಲ್ಲಿ ತೊಡಗಿ ಕಾನೂನು ಮತ್ತು ಸುವ್ಯವಸ್ಥೆ ಪಾಲನೆ, ನಾಗರಿಕ ಆಸ್ತಿಪಾಸ್ತಿ ರಕ್ಷಣೆ, ಅಪರಾಧ ತಡೆ ಮತ್ತು ಹಲವು ಕರ್ತವ್ಯ ಪಾಲನೆಗಳಲ್ಲಿ ಸದಾ ನಿರತವಾಗಿ ಸಮಾಜದ ಸುರಕ್ಷತೆಗಾಗಿ ಪ್ರಾಣತ್ಯಾಗ ಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ಅವರ ನೆನಪು ಮಾಡಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.

ಪೊಲೀಸ್ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಮಾಡುವಾಗ ತಮ್ಮ ಜೀವನವನ್ನೆ ಮುಡುಪಾಗಿಟ್ಟಿರುತ್ತಾರೆ. ಸಮಾಜದಲ್ಲಿ ಅನೇಕ ಅಪರಾಧ ಚಟುವಟಿಕೆಗಳು, ಸಂಘರ್ಷಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕರ್ತವ್ಯನಿರತ ಪೊಲೀಸ್‍ರಿಗೆ ಸೂಕ್ತ ರಕ್ಷಣೆಯ ಅವಶ್ಯವಾಗಿರುತ್ತದೆ. ಪೊಲೀಸ್‍ರ ಜೀವನ ಕಷ್ಟಕರವಾದರೂ ಕೆಲವೊಮ್ಮೆ ಜೀವ ಲೆಕ್ಕಿಸದೇ ರಕ್ಷಣೆ ಮಾಡುವ ಸಂದರ್ಭಗಳು ಒದಗಿ ಬರುತ್ತವೆ. ತೀವ್ರ ಅಪಾಯದ ಸಂದರ್ಭದಲ್ಲಿಯೂ ಪೊಲೀಸರು ಕರ್ತವ್ಯ ನಿರ್ವಹಿಸುತ್ತಾರೆ ಎಂದರು.

ವಿವಿಧ ಪ್ರಕರಣಗಳಲ್ಲಿ ಅಪರಾಧಿಗಳನ್ನು ದಸ್ತಗಿರಿ ಮಾಡುವ ಮತ್ತು ಕರೆತರುವ ಸಂದರ್ಭದಲ್ಲಿ ಹೆಚ್ಚಿನ ಎಚ್ಚರ ವಹಿಸಬೇಕಾಗುತ್ತದೆ. ಪೊಲೀಸರು ಅವರ ಕುಟುಂಬಗಳನ್ನು ಮರೆತು ಬಿಡುತ್ತಾರೆ. ತಮ್ಮ ಆರೋಗ್ಯದ ಕಡೆ ಗಮನ ಕೊಡುವುದಿಲ್ಲ. ಎಂತಹ ಕಷ್ಟಕರ ಪರಿಸ್ಥಿತಿಯಲ್ಲೂ ಪೊಲೀಸರು ಕರ್ತವ್ಯದಲ್ಲಿ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಾರೆ. ದೇಶದ ರಕ್ಷಣೆಯಲ್ಲಿ ಕರ್ತವ್ಯನಿರತರಾಗಿದ್ದಾಗಲೇ ಎಷ್ಟೋ ಜನ ಪೊಲೀಸರು ಪ್ರಾಣತ್ಯಾಗ ಮಾಡಿ ಹುತಾತ್ಮರಾಗಿದ್ದು, ಅವರ ನೆನಪು ಮಾಡಿಕೊಳ್ಳುವುದು ಅಗತ್ಯವಾಗಿದೆ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ಅವರು ಸೆಪ್ಟೆಂಬರ 1, 2020 ರಿಂದ ಆಗಸ್ಟ 31, 2021 ವರೆಗೆ ಭಾರತ ದೇಶದಲ್ಲಿ ಒಟ್ಟು 377 ಜನ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡ ಹುತಾತ್ಮರಾಗಿರುವವರ ಹೆಸರುಗಳನ್ನು ಸ್ಮರಣೆ ಮಾಡುವ ಮೂಲಕ ಶ್ರದ್ದಾಂಜಲಿ ಅರ್ಪಿಸಿದರು. ಪರೇಡ ಕಮಾಂಡರ ಎಸ್.ಎಂ.ಜೇವರಗಿ ಪಡೆಯಿಂದ ಕುಶಾಲತೋಪು ಹಾರಿಸಿ ಗೌರವ ಅರ್ಪಿಸುವದರ ಜೊತೆಗೆ 2 ನಿಮಿಷ ಮೌನ ಆಚರಿಸಲಾಯಿತು.

Be the first to comment

Leave a Reply

Your email address will not be published.


*