5 ಕೋಟಿ ವೆಚ್ಚದ ರಸ್ತೆ ಸುಧಾರಣಾ ಕಾಮಗಾರಿಗೆ ಚರಂತಿಮಠ ಚಾಲನೆ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ : ಯುಕೆಪಿಯ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಯೋಜನೆಯಡಿ ಒಟ್ಟು 5 ಕೋಟಿ ರೂ.ಗಳ ವೆಚ್ಚದಲ್ಲಿ ಮುಗುಳೊಳ್ಳಿ ಎಲ್‍ಟಿ-1 ರಿಂದ ಬೆಣ್ಣೂರ ಪುನರ್ವಸತಿ ಕೇಂದ್ರದವರೆಗೆ ಒಟ್ಟು 2.50 ಕಿ.ಮೀ ವರೆಗಿನ ರಸ್ತೆ ಸುಧಾರಣಾ ಕಾಮಗಾರಿಗೆ ಶಾಸಕ ವೀರಣ್ಣ ಚರಂತಿಮಠ ಬುಧವಾರ ಚಾಲನೆ ನೀಡಿದರು.

ಬೆಣ್ಣೂರ ಪುನರ್ವಸತಿ ಕೇಂದ್ರದಲ್ಲಿ ಹಮ್ಮಿಕೊಂಡ ರಸ್ತೆ ಕಾಮಗಾರಿ ಭೂಮಿ ಪೂಜಾ ಕಾರ್ಯಕ್ರಮವನ್ನು ನೆರವೇರಿ ನಂತರ ಮಾತನಾಡಿದ ಅವರು ಬೆಣ್ಣೂರ ಗ್ರಾಮದ ಹಿನ್ನೀರಿನಿಂದ ಮುಳುಗಡೆಹೊಂದಿ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಗೊಂಡಿದ್ದರಿಂದ ಅಲ್ಲಿಂದ ಬಾಗಲಕೋಟೆಗೆ ಬರಲು ಅಚನೂರ ಮಾರ್ಗವಾಗಿ ಅಂದಾಜು 40 ಕಿ.ಮೀ ದೂರ ಹಾಗೂ ಸಮಯ ವ್ಯರ್ಥವಾಗುತ್ತಿತ್ತು. ಅದನ್ನು ತಪ್ಪಿಸಲು ಮುಗಳೊಳ್ಳಿ ತಾಂಡಾದ ವರೆಗೆ ರಸ್ತೆ ನಿರ್ಮಿಸಿ ಅಲ್ಲಿಂದ 52 ಪುಟ್ ಗುಡ್ಡ ಕೊರೆದು ಸಮತಟ್ಟಾಗಿ ರಸ್ತೆ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.

ಮಧ್ಯ ಬರುವ ಸೇತುವೆಯನ್ನು ಎತ್ತರಿಸಿ ರಸ್ತೆ ನಿರ್ಮಿಸಲಾಗುವುದು. ಮುಂಬರುವ ದಿನಗಳಲ್ಲಿ ಮುಗಳೊಳ್ಳಿಯಲ್ಲಿ ಹಾಯ್ದು ಹೋದ ರೈಲ್ವೆ ದ್ವಿಪಥವಾಗಲಿರುವ ಕಾರಣ ಸಂಚಾರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ರೈಲ್ವೆ ಪಕ್ಕದಲ್ಲಿ ಹಾದು ಹೋಗುವಂತೆ ರಸ್ತೆ ನಿರ್ಮಿಸಲಾಗುತ್ತದೆ. ಇದರ ಜೊತೆಗೆ ಮುಗಳೊಳ್ಳಿ ತಾಂಡಾದವರೆಗೆ ರಸ್ತೆ ಮಾಡಿ ಮುಂದಿನ ಸೇತುವೆಯನ್ನು ಎತ್ತರಿಸುವ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದರು.

ರಸ್ತೆ ಕಾಮಗಾರಿಯಲ್ಲಿ 1260 ಮೀಟರ್‍ನಲ್ಲಿ ಸುಮಾರು 17.87 ಮೀಟರದಷ್ಟು ಅಗೆದು ರಸ್ತೆಯ ಅಗತ್ಯಕ್ಕೆ ಅನುಗುಣವಾಗಿ ಗ್ರೇಡಿಯಂಟ್ ಸರಿಪಡಿಸಿ ರಸ್ತೆ ನಿರ್ಮಿಸಲಾಗುತ್ತಿದೆ. ಈ ಕಾಮಗಾರಿಯ ಅವಧಿ 9 ತಿಂಗಳದ್ದಾಗಿದ್ದು, ಅವಧಿ ನೋಡದೇ ಮಳೆಗಾಲ ಪ್ರಾರಂಭವಾಗುವ ಪೂರ್ವದಲ್ಲಿಯೇ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರ ವೀರೇಶಕುಮಾರ ಹೆಬ್ಬಾಳ ಅವರಿಗೆ ಸೂಚಿಸಿದರು. ಅಲ್ಲದೇ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಗ್ರಾಮಸ್ಥರ ವಿವಿಧ ಬೇಡಿಕೆಗಳ ಮನವಿಗಳನ್ನು ಶಾಸಕರು ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಬೆಣ್ಣೂರ ಗ್ರಾಮ ಪಂಚಾಯತ ಉಪಾಧ್ಯಕ್ಷ ಸಿದ್ರಾಮಗೌಡ ಪಾಟೀಲ, ಯುಕೆಪಿಯ ಅಧೀಕ್ಷಕ ಅಭಿಯಂತರ ಹನಮಂತ ದಾಸರ, ಕಾರ್ಯನಿರ್ವಾಹಕ ಅಭಿಯಂತರ ಎಸ್.ಎಲ್. ಚಿನ್ನಣ್ಣವರ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಬಿ.ಎಚ್.ಪೂಜಾರ, ಯಲ್ಲಪ್ಪ ಪಾತ್ರೋಟ, ಗ್ರಾಮಸ್ಥ ಸಂಗಣ್ಣ ಕಲಾದಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*