ಜಿಲ್ಲಾ ಸುದ್ದಿಗಳು
ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ
ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ 2021ನೇ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ದ್ವಿತೀಯ ವರ್ಷದಲ್ಲಿ ಜಿಲ್ಲೆಗೆ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಅಲ್ಲದೇ ಅಂತರ್ಜಾತಿ ವಿವಾಹ ದಂಪತಿಗಳಿಗೆ ಪ್ರೋತ್ಸಾಹಧನದ ಚೆಕ್‍ಗಳನ್ನು ಶಾಸಕ ವೀರಣ್ಣ ಚರಂತಿಮಠ ವಿತರಿಸಿದರು.
ಬಾಗಲಕೋಟೆ : ನವನಗರದಲ್ಲಿ 5 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗಿರುವ ಮಹರ್ಷಿ ವಾಲ್ಮೀಕಿ ಭವನವನ್ನು ಜನವರಿ ಮಾಹೆಯಲ್ಲಿ ಲೋಕಾರ್ಪಣೆ ಮಾಡಲಾಗುತ್ತಿದ್ದು, ಉದ್ಘಾಟನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಆಹ್ವಾನಿಸಲಾಗುತ್ತಿದೆ ಎಂದು ಶಾಸಕ ವೀರಣ್ಣ ಚರಂತಿಮಠ ತಿಳಿಸಿದರು.
ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜಿಲ್ಲಾ ಪಂಚಾಯತ ನೂತನ ಸಭಾಭವನದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ಮಹರ್ಷಿ ವಾಲ್ಮೀಕಿ ಸಮಾಜ ಮತ್ತು ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ನವನಗರದಲ್ಲಿ ನಿರ್ಮಿಸಲಾಗುತ್ತಿರುವ ವಾಲ್ಮೀಕಿ ಭವನವದ ಕಟ್ಟಡ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಪೂರ್ಣಗೊಳಿಸಿ, ಲೋಕಾರ್ಪಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಶಿಕ್ಷಣದಿಂದ ಮಾತ್ರ ದೇಶ ಸುಧಾರಿಸಲು ಸಾಧ್ಯವಾಗುತ್ತಿದ್ದು, ಪ್ರತಿಯೊಂದು ಸಮುದಾಯದವರು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ಮಹಾತ್ಮರು ಒಂದೇ ಜಾತಿಗೆ ಸೀಮಿತರಾದವರಲ್ಲ. ಸಮಾಜದ ಸುಧಾರಣೆ ಶ್ರಮಿಸಿದವರಾಗಿದ್ದು, ಅವರ ಆದರ್ಶ ಮತ್ತು ತತ್ವಗಳನ್ನು ನೆನಪಿಸಿ ಮುಂದಿನ ಪೀಳಿಗೆಗೆ ತಿಳಿಸುವ ದೃಷ್ಠಿಯಿಂದ ಮಹಾತ್ಮರ ಜಯಂತಿಗಳನ್ನು ಆಚರಿಸಲಾಗುತ್ತದೆ. ಮಹಾನ್ ಗ್ರಂಥ ರಾಮಾಯಣ ಕಾವ್ಯ ರಚಿಸಿದ ಮಹರ್ಷಿ ವಾಲ್ಮೀಕಿಯವರು ನಮಗೆಲ್ಲ ಪ್ರೇರಣೆ ಎಂದರು.
ಜಿಲ್ಲೆಯಲ್ಲಿರುವ 54 ವಸತಿ ಶಾಲೆಗಳಲ್ಲಿ ಪರಿಶಿಷ್ಟ ಪಂಗಡದ 49168 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು, 5107 ವಿದ್ಯಾರ್ಥಿಗಳಿಗೆ 201 ಕೋಟಿ ರೂ.ಗಳಷ್ಟು ಶಿಷ್ಯವೇತನ ನೀಡಲಾಗುತ್ತಿದೆ. ಶೇ.90 ಸಹಾಯಧನದಲ್ಲಿ ಸಾಲ ನೀಡಲಾಗುತ್ತಿದೆ. ವಿವಿಧ ಉದ್ಯೋಗ ಚಟುವಟಿಕೆಗಳನ್ನು ಕೈಗೊಳ್ಳಲು ನೇರ ಸಾಲ ಯೋಜನೆಯಡಿ ನೆರವು ನೀಡಲಾಗುತ್ತಿದೆ. ಇವುಗಳ ಸದುಯೋಗ ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕು. ಶಿಕ್ಷವನ್ನು ಕೊಡಿಸುವ ಮೂಲಕ ಪ್ರತಿಭಾವಂತರನ್ನಾಗಿ ಮಾಡಿ ಭಾರತದ ಏಕತೆ, ಸಮಗ್ರತೆ ಎತ್ತಿ ಹಿಡಿಯುವ ಕೆಲಸವಾಗಬೇಕು ಎಂದರು.
ಅತಿಥಿ ಉಪನ್ಯಾಸಕರಾಗಿ ಆಗಮಿಸಿದ್ದ ಅಮೀನಗಡ ಸಂಗಮೇಶ್ವರ ಪದವಿ ಪೂರ್ವ ಕಾಲೇಜಿನ ಉಪ ಪ್ರಾಚಾರ್ಯ ಆರ್.ಜಿ.ಸನ್ನಿ ಮಾತನಾಡಿ ನಮ್ಮ ಭಾರತೀಯ ಸಂಸ್ಕøತಿಯನ್ನು ಎತ್ತಿ ಹಿಡಿಯುವ ಮೂಲಕ ದೇಶ ವಿದೇಶಗಳಲ್ಲಿ ಪ್ರಸರಿಸಿದ ಗ್ರಂಥ ರಾಮಾಯಣವಾಗಿದ್ದು, ಆದಿ ಕವಿ ಮಹರ್ಷಿಯವರು ಈ ಗ್ರಂಥವನ್ನು ರಚಿಸಿದ್ದಾರೆ. ವಾಲ್ಮೀಕಿಯವರು ರಾಮಾಯಣ ಬರೆಯಲು ಪ್ರೇರಣೆಯಾದ ಸನ್ನಿವೇಶಗಳ ಬಗ್ಗೆ ವಿವರಿಸಿದರು. ಇದೇ ಸಂದರ್ಭದಲ್ಲಿ ಏಕಲವ್ಯ ವಸತಿ ಶಾಲೆ ಪ್ರಾರಂಭಿಸಲು ಸರಕಾರದ ಗಮನಕ್ಕೆ ತರಲು ಮನವಿ ಮಾಡಿಕೊಂಡರು.
ಕಾರ್ಯಕ್ರಮದಲ್ಲಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಸವಲಿಂಗಪ್ಪ ನಾವಲಗಿ, ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿ.ಭೂಬಾಲನ, ಪೋಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ವಾಲ್ಮೀಕಿ ಸಮುದಾಯದ ಮುಖಂಡರಾದ ದ್ಯಾಮಣ್ಣ ಗಾಳಿ, ಶಂಭುಗೌಡ ಪಾಟೀಲ, ರಾಜು ನಾಯ್ಕರ, ಯಲ್ಲಪ್ಪ ಕ್ಯಾದಿಗ್ಗೇರಿ, ಹನಮಂತ ಡೋಣಿ, ಮಲ್ಲಿಕಾರ್ಜುನ ಸುರಪೂರ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಹೇಶ ಪೋತದಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.
Be the first to comment