ಗ್ರಾಪಂಗೆ ಸೇರಿರುವ ಅರದೇಶನಹಳ್ಳಿ ಗ್ರಾಮದ ಹಳೇ ಕಟ್ಟಡ ಶಿಥಿಲ! _3 ಇಲಾಖೆ ಕಾರ್ಯ ನಿರ್ವಹಣೆ_ | _ಸುಸ್ಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಗ್ರಾಮಸ್ಥರ ಒತ್ತಾಯ

ವರದಿ: ಹೈದರ್ ಸಾಬ್, ಕುಂದಾಣ

ರಾಜ್ಯ ಸುದ್ದಿಗಳು 

ದೇವನಹಳ್ಳಿ

ಸುಮಾರು ವರ್ಷಗಳಿಂದ ಮಂಡಲ ಪಂಚಾಯಿತಿವಿದ್ದಾಗ ಕಟ್ಟಿರುವ 1962ರ ಹಳೇ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದ್ದು, ಜನಪ್ರತಿನಿಧಿಗಳು ಹಾಗು ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಅಭಿವೃದ್ಧಿ ಕಾಣದೆ ನೆನೆಗುದ್ದಿಗೆ ಬಿದ್ದಿದೆ.ಈ ಹಳೇ ಕಟ್ಟಡವು ದೇವನಹಳ್ಳಿ ತಾಲೂಕಿನ ಜಾಲಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರದೇಶನಹಳ್ಳಿ ಗ್ರಾಮದಲ್ಲಿದ್ದು, ಕಟ್ಟಡದ ಮೇಲ್ಚಾವಣಿ ಕಲ್ಲು ಚಪ್ಪಡಿಯಿಂದ ಕೂಡಿದ್ದು, ಸುಮಾರು ವರ್ಷಗಳಿಂದ ಯಾವುದೇ ರೀತಿಯಲ್ಲಿ ಅಭಿವೃದ್ಧಿಗೊಳ್ಳದೆ ಸುಮಾರು ೫೬ವರ್ಷಗಳಿಂದ ಹಾಗೆಯೇ ಉಳಿದುಕೊಂಡು ಬಂದಿದೆ.

CHETAN KENDULI

ಈ ಕಟ್ಟಡದಲ್ಲಿ 3 ಇಲಾಖೆಗಳು ಕಾರ್ಯನಿರ್ವಹಿಸುತ್ತಿದ್ದು, ಅಂಚೆ ಕಚೇರಿ, ಸರಕಾರಿ ನ್ಯಾಯಬೆಲೆ ಅಂಗಡಿ, ಗ್ರಾಮ ಲೆಕ್ಕಿಗರ ಕಚೇರಿಯನ್ನು ಹೊಂದಿರುತ್ತದೆ. ಕಟ್ಟಡವು ಸಂಪೂರ್ಣವಾಗಿ ಶಿಥಿಲಾವಸ್ಥೆಗೆ ತಲುಪಿದ್ದು, ಈಗೋ ಹಾಗೋ ಬೀಳುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿದೆ. ಅಂಚೆಕಚೇರಿ, ಆರ್‌ಐ ಕಚೇರಿ ಹಾಗೂ ರೇಷನ್ ಅಂಗಡಿಗೆ ದಿನನಿತ್ಯ ಕೆಲಸಕ್ಕೆ ಬರುವ ಅಧಿಕಾರಿಗಳು, ಸಿಬ್ಬಂದಿಗಳು ಭಯದ ವಾತಾವರಣದಲ್ಲಿ ಕರ್ತವ್ಯ ನಿರ್ವಹಿಸುವಂತಾಗಿದೆ. 1985ರಿಂದ ಅಂಚೆ ಕಚೇರಿ ಈ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. 1993ರಲ್ಲಿ ಗ್ರಾಪಂ ಅಸ್ತಿತ್ವಕ್ಕೆ ಬಂದ ನಂತರ ಕಟ್ಟಡವು ಗ್ರಾಪಂಗೆ ಒಳಪಟ್ಟಿರುತ್ತದೆ. ಕಟ್ಟಡದ ತಳಭಾಗದಲ್ಲಿ ಬಿರುಕು ಮತ್ತು ಸಿಮೆಂಟ್ ಕಿತ್ತು ಹೋಗಿದ್ದು, ಮೇಲ್ಚಾವಣಿಯಲ್ಲಿ ಗಿಡಗಳು ಮರವಾಗುತ್ತಿದೆ. ಮಳೆ ಬಂದರೆ ಕೊಠಡಿಯೊಳಗೆ ನೀರು ಸೋರುತ್ತಿದೆ. ಕಟ್ಟಡದ ಹಿಂಬದಿಯಲ್ಲಿ ಗಿಡಗಂಟೆಗಳು ಯತೇಚ್ಛವಾಗಿ ಬೆಳೆದು ನಿಂತಿದೆ. ಕಟ್ಟಡ ಯಾವ ಸಮಯದಲ್ಲಾದರೂ ಬೀಳುತ್ತದೆ. ಈ ಬಗ್ಗೆ ಸಂಬಂಧಪಟ್ಟ ಗ್ರಾಪಂ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಂಚೆ ಕಚೇರಿ ಸಿಬ್ಬಂದಿಗಳು ಹೇಳುತ್ತಿದ್ದಾರೆ. 

ಯಾವುದೇ ಕಟ್ಟಡ 50 ವರ್ಷ ಕಳೆದ ನಂತರ ಅದನ್ನು ತೆರವುಗೊಳಿಸಿ ನೂತನ ಕಟ್ಟಡ ಕಟ್ಟಬೇಕಾಗುತ್ತದೆ. ಆದರೆ ಈ ಕಟ್ಟಡ 50 ವರ್ಷ ಕಳೆದು ಆರೇಳು ವರ್ಷಗಳು ಕಳೆದರೂ ಇತ್ತ ಗಮನಹರಿಸುತ್ತಿಲ್ಲ. ಈಭಾಗದಲ್ಲಿ ಸುತ್ತಮುತ್ತಲಿನ ಹಳ್ಳಿಗಳವರು ಅಂಚೆ ಕಚೇರಿಗೆ ಬರುತ್ತಿರುತ್ತಾರೆ. ಕಟ್ಟಡವು ಸಂಪೂರ್ಣವಾಗಿ ಶಿಥಿಲಗೊಂಡಿದ್ದರಿಂದ ಹೊಸ ಕಟ್ಟಡದ ನಿರೀಕ್ಷೆಯಲ್ಲಿ ಸಾರ್ವಜನಿಕರು ಇದ್ದಾರೆ.ಹೇಳಿ ಕೇಳಿ ಅರದೇಶನಹಳ್ಳಿ ಗ್ರಾಮವು ದೊಡ್ಡಬಳ್ಳಾಪುರಕ್ಕೆ ಸಂಪರ್ಕ ಕಲ್ಪಿಸುತ್ತದೆ. ಕಟ್ಟಡದ ಗೋಡೆಗಳು ಬಿರುಕುಗೊಂಡಿದೆ. ಬೀಳುವ ಹಂತ ತಲುಪುವ ಮುನ್ನಾ ಗ್ರಾಪಂನವರು ಇತ್ತ ಗಮನಹರಿಸಿ ಆ ಜಾಗದಲ್ಲಿ ಉತ್ತಮ ಸುಸ್ಸಜ್ಜಿತ ಗ್ರಂಥಾಲಯ, ಸಮುದಾಯ ಭವನ ಅಥವಾ ಇತರೆ ಮಳಿಗೆಗಳನ್ನು ಕಟ್ಟಿದರೆ ಗ್ರಾಪಂಗೂ ಆದಾಯ ಬರುತ್ತದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. 

ಕಟ್ಟಡ ಶಿಥಿಲಾವಸ್ಥೆಗೆ ತಲುಪಿರುವ ಬಗ್ಗೆ ಈಗಾಗಲೇ ಗಮನಕ್ಕೆ ಬಂದಿದೆ. ಗ್ರಾಮಸ್ಥರು ಗ್ರಾಪಂಗೆ ಮನವಿ ಸಲ್ಲಿಸಿದರೆ, ಮುಂದಿನ ಸರ್ವ ಸದಸ್ಯರ ಸಭೆಯಲ್ಲಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಲಾಗುವುದು.– ದೀಪ್ತಿ ವಿಜಯ್‌ಕುಮಾರ್ | ಅಧ್ಯಕ್ಷರು, ಜಾಲಿಗೆ ಗ್ರಾಪಂಕಟ್ಟಡ ಶಿಥಿಲಾವಸ್ಥೆಯ ಬಗ್ಗೆ ಗಮನಕ್ಕೆ ಬಂದಿಲ್ಲ. ಸ್ಥಳ ಪರಿಶೀಲಿಸಿ, ತಾಪಂ, ಜಿಪಂಗೆ ಕಟ್ಟಡ ತೆರವುಗೊಳಿಸಲು ಮನವಿ ಪತ್ರ ಬರೆಯಲಾಗುತ್ತದೆ. ಗ್ರಾಪಂಯಲ್ಲಿ ಸರ್ವ ಸದಸ್ಯರ ಸಭೆಯಲ್ಲಿ ಅನುಮತಿ ಪಡೆದು ಕ್ರಿಯಾಯೋಜನೆ ರೂಪಿಸಿ, ಸದಸ್ಯರುಗಳ ಸೂಕ್ತ ತೀರ್ಮಾನದಂತೆ ಕ್ರಮ ಕೈಗೊಳ್ಳಲಾಗುತ್ತದೆ. – ಉಷಾ | ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಜಾಲಿಗೆ ಗ್ರಾಪಂ

Be the first to comment

Leave a Reply

Your email address will not be published.


*