ಜಿಲ್ಲಾ ಸುದ್ದಿಗಳು
ಭಟ್ಕಳ್
ಭಟ್ಕಳ ತಾಲೂಕಿನ ಮಾರುಕೇರಿ ಗ್ರಾಮ ಪಂಚಾಯತ ವ್ಯಾಪ್ತಿಯ ಕಿತ್ರೆ ಭಾಗದಲ್ಲಿ ಕೆಂಪು ಕಲ್ಲು ಕ್ವಾರಿಗಳಿಂದಾಗಿ ಜನಜೀವನದ ಮೇಲೆ ಪರಿಣಾಮ ಬೀರುತ್ತಿದ್ದು, ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಅಲ್ಲಿನ ಗ್ರಾಮಸ್ಥರು ಭಟ್ಕಳ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
ಕಿತ್ಸೆ ಗ್ರಾಮದ ಮಕ್ಕಿಹಿತ್ತಲು ರಾಮಬಾಳದಿಂದ ಕೊರ್ಕೋಡು ಹೋಗುವ ರಸ್ತೆಯ ಪಕ್ಕದಲ್ಲಿ ಕಳೆದ ಕೆಲವು ದಿನಗಳಿಂದ ಕೆಂಪು ಕಲ್ಲಿನ ಕ್ವಾರಿಯನ್ನು ಸ್ಥಾಪಿಸಿ ಕಲ್ಲನ್ನು ತೆಗೆಯಲಾಗುತ್ತಿದ್ದು, ಅದನ್ನು ಊರಿನ ಸಂಪರ್ಕ ರಸ್ತೆಯಲ್ಲಿ ನಿರಂತರವಾಗಿ ಸಾಗಾಟ ಮಾಡಲಾಗುತ್ತಿದೆ. ಇದರಿಂದ ರಸ್ತೆಯು ಸಂಪೂರ್ಣ ಹಾಳಾಗುತ್ತಿದೆ. ಅಲ್ಲದೇ ಊರಿನಲ್ಲಿ ಕಲ್ಲು ಕೊರೆಯುವ ಯಂತ್ರದ ಕರ್ಕಶ ಶಬ್ದ ಪರಿಸರವನ್ನು ಹಾಳು ಮಾಡುತ್ತಿದೆ. ಕಲ್ಲಿನ ಕ್ವಾರಿಯಿಂದ ಹೊರ ಬರುವ ಧೂಳು ಜನರ ಉಸಿರಾಟಕ್ಕೂ ತೊಂದರೆಯನ್ನು ಉಂಟು ಮಾಡುತ್ತಿದೆ, ದನ, ಕರು, ಎಮ್ಮೆಗಳಿಗೂ ಕಲ್ಲು ಕ್ವಾರಿಗಳ ಹೊಂಡಗಳು ಸಂಚಕಾರ ತಂದಿವೆ, ಆದ್ದರಿಂದ ಅಧಿಕಾರಿಗಳು ಈ ಕೂಡಲೇ ಪ್ರಾಣಿ, ಪಕ್ಷಿಗಳ ಹಿತದೃಷ್ಟಿಯಿಂದ ಕಲ್ಲು ಕ್ವಾರಿಗಳ ಸ್ಥಗಿತಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ತಹಸೀಲ್ದಾರ ಎಸ್.ರವಿಚಂದ್ರ ಮನವಿ ಪತ್ರವನ್ನು ಸ್ವೀಕರಿಸಿದರು. ಶ್ರೀಪಾದ ಹೆಬ್ಬಾರ, ಸದಾಶಿವ ಹೆಬ್ಬಾರ, ಕರಿಯಾ ಗೊಂಡ, ಜಗದೀಶ ಗೊಂಡ, ತಿಮ್ಮಪ್ಪ ಗೊಂಡ, ಕೃಷ್ಣ ಗೊಂಡ ಮೊದಲಾದವರು ಉಪಸ್ಥಿತರಿದ್ದರು.
Be the first to comment