ಆಡಳಿತದಲ್ಲಿ ಪಾರದರ್ಶಕತೆ ಅಗತ್ಯ : ಎಡಿಸಿ ಮುರಗಿ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ : ಆಡಳಿತದಲ್ಲಿ ಮುಕ್ತತೆ, ಪಾರದರ್ಶಕತೆ ಹಾಗೂ ಹೊಣೆಗಾರಿಕೆ ತರುವುದು ಅಗತ್ಯವಾಗಿದೆ ಎಂದು ಅಪರ ಜಿಲ್ಲಾಧಿಕಾರಿಗಳು ಹಾಗೂ ಯುಕೆಪಿಯ ಉಪ ಮಹಾವ್ಯವಸ್ಥಾಪಕ ಮಹಾದೇವ ಮುರಗಿ ತಿಳಿಸಿದರು.

ಯುಕೆಪಿಯ ಸಂಗಮ ಸಭಾಂಗಣದಲ್ಲಿ ಜಿಲ್ಲಾ ತರಬೇತಿ ಸಂಸ್ಥೆ, ಮಹಾ ವ್ಯವಸ್ಥಾಪಕರು, ಪುನರ್ ವಸತಿ & ಪುನರ್ ನಿರ್ಮಾಣ, ಕ್ರಷ್ಣಾ ಮೇಲ್ದಂಡೆ ಯೋಜನೆ ಸಹಯೋಗದಲ್ಲಿ ಮಾಹಿತಿ ಹಕ್ಕು ಅಧಿನಿಯಮ-2005 ಕುರಿತು ಹಮ್ಮಿಕೊಂಡ ಒಂದು ದಿನದ ಬಾಗಿಲು ಮಟ್ಟದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಭಾರತ ಸಾಕ್ಷ್ಯ ಅಧಿನಿಯಮ-1832 ರ ಪ್ರಕರಣ 76 ರಲ್ಲಿ ಸಾರ್ವಜನಿಕ ದಾಖಲೆಯನ್ನು ಅಧಿಕೃತವಾಗಿ ಪರೀಕ್ಷಿಸುವ ಹಕ್ಕನ್ನು ಹೊಂದಿರುವ ವ್ಯಕ್ತಿಯು ಅಂತಹ ದಾಖಲೆಗಳ ದೃಢೀಕೃತ ನಕಲುಗಳನ್ನು ಪಡೆಯುವ ಅಧಿಕಾರ ಹೊಂದಿರುವುದರಿಂದ, ಆಡಳಿತದಲ್ಲಿ ಮುಕ್ತತೆ, ಪಾರದರ್ಶಕತೆ ಮತ್ತು ಹೊಣೆಗಾರಿಕೆ ತರುವುದು ಅಗತ್ಯವಾಗಿದೆ ಎಂದರು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಬೆಳಗಾವಿ ಜಾಗೃತ ಕೋಶದ ಉಪ ಕೃಷಿ ನಿರ್ದೇಶಕ ವೆಂಕಟರವಣಪ್ಪ. ಬಿ. ಅವರು ಮಾತನಾಡಿ 1990 ರಲ್ಲಿ ರಾಜಸ್ಥಾನದಲ್ಲಿ ಮಜದೂರ ಕಿಸಾನ್ ಶಕ್ತಿ ಸಂಘಟಣೆಯವರು ಚಳುವಳಿ ಮಾಡಿದ ಪರಿಣಾಮವಾಗಿ ಮಾಹಿತಿ ಹಕ್ಕು ಅಧಿನಿಯಮ ಜಾರಿಗೆ ಬಂದಿದೆ. ಪ್ರಜಾಪ್ರಭುತ್ವದಲ್ಲಿ ನಾಗರಿಕನಿಗೆ ಮಾಹಿತಿ ಪಡೆಯುವುದು ಅಗತ್ಯವಾಗಿದೆ. ಈ ಕಾಯ್ದೆಯು 2000ನೇ ಇಸ್ವಿಯಲ್ಲಿ ಕರ್ನಾಟಕದಲ್ಲಿ ಜಾರಿಯಲ್ಲಿ ಇತ್ತು. ಆದರೆ ರಾಷ್ಟ್ರಮಟ್ಟದಲ್ಲಿ ಏಕರೂಪ ಕಾಯ್ದೆ ಇರಬೇಕು ಎಂಬ ದೃಷ್ಠಿಯಿಂದ ಭಾರತ ಸರ್ಕಾರವು 2005 ಜೂನ್ 15 ರಿಂದ ಎಲ್ಲಾ ರಾಜ್ಯಗಳಲ್ಲಿ ಏಕರೂಪವಾಗಿ ಅಧೀಕೃತವಾಗಿ ಜಾರಿಗೆ ಬಂದಿತು. ಇವತ್ತಿನ 20 ರಾಷ್ಟ್ರಗಳ ಅಗ್ರ ಪಂಕ್ತಿಗೆ ಭಾರತವು ಈ ಕಾನೂನು ಜಾರಿ ಮಾಡುವುದರಲ್ಲಿ ಸೇರಿಕೊಂಡಿದೆ ಎಂದರು.

ಮಾಹಿತಿ ಎಂದರೆ ತತ್ಕಾಲದಲ್ಲಿ ಇರುವ ಇತರೆ ಕಾನೂನಿನ ಅಡಿಯಲ್ಲಿ ಸಾರ್ವಜನಿಕ ಪ್ರಾಧಿಕಾರದಿಂದ ಪಡೆಯಬಹುದಾದ ದಾಖಲೆಗಳು, ದಸ್ತಾವೇಜುಗಳು, ಇ-ಮೇಲ್‍ಗಳು, ಅಭಿಪ್ರಾಯಗಳು, ಸಲಹೆಗಳು, ಪತ್ರಿಕಾ ಹೇಳಿಕೆಗಳು, ಸುತ್ತೋಲೆಗಳು, ಆದೇಶಗಳು, ಲಾಗ್ ಪುಸ್ತಕಗಳು, ಕರಾರುಗಳು, ವರದಿಗಳು, ಕಾಗದ ಪತ್ರಗಳು, ನಮೂನೆಗಳು, ಮಾದರಿಗಳು ಯಾವುದೇ ವಿದ್ಯುನ್ಮಾನ ರೂಪದಲ್ಲಿ ಹೊಂದಿರುವ ದತ್ತಾಂಶ ಮತ್ತು ಯಾವುದೇ ಖಾಸಗಿ ವಿಷಯಕ್ಕೆ ಸಂಬಂಧಿಸಿದ ಮಾಹಿತಿ ಒಳಗೊಂಡಂತೆ ಯಾವುದೇ ರೂಪದಲ್ಲಿರುವ ಯಾವುದೇ ವಿಷಯ ಸಾಮಗ್ರಿಗಳು ಒಳಗೊಂಡಿರುತ್ತವೆ. ಕಲಂ 4(1)(ಎ) ರಡಿ ಪ್ರತಿಯೋಂದು ಸಾರ್ವಜನಿಕ ಪ್ರಾಧಿಕಾರವು ಈ ಅಧಿನಿಯದಡಿಯಲ್ಲಿ ಮಾಹಿತಿ ಹಕ್ಕಿಗಾಗಿ ಅನುಕೂಲ ಮಾಡಿಕೊಡುವ ರೀತಿಯಲ್ಲಿ ಮತ್ತು ನಮೂನೆಯಲ್ಲಿ ಕ್ರಮಬದ್ಧ ಸೂಚಿಪಟ್ಟಿ ಮತ್ತು ಅದರ ಎಲ್ಲಾ ದಾಖಲೆಗಳ ನಿರ್ವಹಿಸುವ ಬಗ್ಗೆ ಹಾಗೂ ಕಲಂ 4 (1)(ಬಿ) ರಡಿ ಕಛೇರಿಯ ರಚನೆ ಸಿಬ್ಬಂದಿ ಇತ್ಯಾದಿ ವಿವರಗಳ 17 ಅಂಶಗಳ ಮಾಹಿತಿಯನ್ನು ಒಳಗೊಂಡಂತೆ ಹಲವಾರು ವಿಷಯಗಳನ್ನು ತರಬೇತಿ ಮೂಲಕ ತಿಳಿಸಿಕೊಟ್ಟರು.

ಪ್ರಾರಂಭದಲ್ಲಿ ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಗಂಗಾಧರ ದಿವಟರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಉಪ ಪ್ರಾಚಾರ್ಯ ಮಲ್ಲಿಕಾರ್ಜುನ ಗುಡೂರ ಕಾರ್ಯಾಗಾರಕ್ಕೆ ಆಗಮಿಸಿದ ಎಲ್ಲ ಪ್ರಶಿಕ್ಷಣಾರ್ಥಿಗಳಿಂದ ಅನಿಸಿಕೆ ಮತ್ತು ಅಭಿಪ್ರಾಯವನ್ನು ಪಡೆದು ಕ್ರೂಢೀಕರಿಸಿ ಮೌಲ್ಯಮಾಪನ ಕಾರ್ಯವನ್ನು ನೆಡೆಸಿಕೊಟ್ಟರು. ಬೋಧಕರಾದ ಸುಲೋಚನಾ ಹೊಸಟ್ಟಿ ಕಾರ್ಯಾಗಾರದ ಸಮನ್ವಯಾಧಿಕಾರಿಯಾಗಿ ಕೆಲಸ ನಿರ್ವಹಿಸಿದರು.

ಕಾರ್ಯಾಗಾರದಲ್ಲಿ ವಿಶೇಷ ಜಿಲ್ಲಾಧಿಕಾರಿಗಳಾದ ಸೋಮಲಿಂಗ ಗೆಣ್ಣೂರ, ಅಧೀಕ್ಷಕ ಅಭಿಯಂತರ ಹೆಚ್.ಜಿ.ದಾಸರ, ಮುಖ್ಯ ಲೆಕ್ಕಾಧಿಕಾರಿ ಶಾಂತಾ ಕಡಿ, ಕಾರ್ಯ ನಿರ್ವಾಹಕ ಅಭಿಯಂತರರಾದ ಎಸ್.ಎಲ್.ಚಿಣ್ಣನ್‍ವರ್, ಎಸ್.ಎಸ್.ಕಲ್ಯಾಣಿ, ಸುರೇಶ ಆಯ್ ಹಾಗೂ ವ್ಹಿ.ಎ.ಹಿರೇಮಠ ಸೇರಿದಂತೆ 74 ಜನ ಅಧಿಕಾರಿ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

Be the first to comment

Leave a Reply

Your email address will not be published.


*