ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ:ಗ್ರಾಮ ವಾಸ್ತವ್ಯದ ಸದುಪಯೋಗಕ್ಕೆ ಚರಂತಿಮಠ ಕರೆ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಗ್ರಾಮ ಸಂಚರಿಸಿದ ಜಿಲ್ಲಾಧಿಕಾರಿ

ಮಲ್ಲಾಪೂರ ಗ್ರಾಮಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಅವರನ್ನು ಬೇವಿನಮಟ್ಟಿ ಗ್ರಾ.ಪಂ ಅಧ್ಯಕ್ಷೆ ಯಲ್ಲವ್ವ ದೊಡಮನಿ ಸ್ವಾಗತಿಸಿದರು. ದುಡದುಂಡೇಶ್ವರ ಮಠಕ್ಕೆ ತೆರಳಿ ದರ್ಶನ ಪಡೆದ ನಂತರ ಅಂಗನವಾಡಿ ಕೇಂದ್ರ 2ಕ್ಕೆ ತೆರಳಿ ಅಲ್ಲಿರುವ ವ್ಯವಸ್ಥೆಯನ್ನು ಪರಿಶೀಲನೆ ನಡೆಸಿದರು. ಮಕ್ಕಳಿಗೆ ನೀಡಲಾಗುತ್ತಿರುವ ಆಹಾರದಾನ್ಯಗಳನ್ನು ಪ್ರತಿ ತಿಂಗಳು ವಿತರಿಸಿದ ಬಗ್ಗೆ ದಾಖಲಾತಿ ಪರಿಶೀಲನೆ ನಡೆಸಿದರು. ನಂತರ ಶುದ್ದ ಕುಡಿಯುವ ನೀರಿನ ಘಟಕ, ಹಾಲಿನ ಡೈರಿ, ಸಮುದಾಯ ಭವನ, ಪಶು ಆಸ್ಪತ್ರೆ, ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಾಗಲಕೋಟೆ : ಮೂಲಭೂತ ಸೌಕರ್ಯಗಳನ್ನು ಪಡೆದುಕೊಳ್ಳಲು ಕಚೇರಿಗೆ ಅಲೆದಾಡುವದನ್ನು ತಪ್ಪಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗುತ್ತಿರುವ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಶಾಸಕ ವೀರಣ್ಣ ಚರಂತಿಮಠ ಕರೆ ನೀಡಿದರು.


ತಾಲೂಕಿನ ಮಲ್ಲಾಪೂರ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ತಾಲೂಕಾ ಆಡಳಿತ, ತಾಲೂಕಾ ಪಂಚಾಯತ ಸಹಯೋಗದಲ್ಲಿ ಹಮ್ಮಿಕೊಂಡ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಗ್ರಾಮವಾಸ್ತವ್ಯ ಕಾರ್ಯಕ್ರಮಕ್ಕೆ ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಮೂಲಕ ಜಿಲ್ಲಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮತ್ತು ತಾಲೂಕಾ ಮಟ್ಟದ ಅಧಿಕಾರಿಗಳು ವಾಸ್ತವ್ಯ ಹೂಡಿ ಗ್ರಾಮದ ಹಾಗೂ ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂಧಿಸಲಿದ್ದು, ಇದರ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು.

ಜಿಲ್ಲಾಧಿಕಾರಿಗಳ ನೇತೃತ್ವದ ತಂಡ ಇಡೀ ದಿನ ಗ್ರಾಮದಲ್ಲಿ ವಾಸ್ತವ್ಯ ಹೂಡಿ ಗ್ರಾಮದಲ್ಲಿರುವ ಸಮಸ್ಯೆಗಳೇನು? ಏನು ಕೆಲಸವಾಗಬೇಕು, ಏನು ಆಗಿಲ್ಲ ಎಂಬುದರ ಬಗ್ಗೆ ತಿಳಿಸಬೇಕು. ಅವುಗಳೆಲ್ಲವನ್ನು ಅಧಿಕಾರಿಗಳು ಪರಿಶೀಲನೆ ನಡೆಸಿ ಸ್ಥಳದಲ್ಲಿಯೇ ಬಗೆಹರಿಸಬಹುದಾದ ಸಮಸ್ಯೆಯನ್ನು ಪರಿಹರಿಸುವದರ ಜೊತೆಗೆ ಕಾರ್ಯವೈಖರಿ ಪರಿಶೀಲನೆ ಮಾಡಲಿದ್ದಾರೆ. ಗ್ರಾಮದಲ್ಲಿ ಕೋವಿಡ್ ಲಸಿಕೆ ಪಡೆಯದವರು 21 ಜನ ಬಾಕಿ ಇದ್ದು, ಅವರುಗಳ ಮನೆಗೆ ತೆರಳಿ ಲಸಿಕೆ ಹಾಕಲಾಗುತ್ತಿದೆ. ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ವಿದ್ಯುತ್, ರಸ್ತೆ ಬಗ್ಗೆ ಸಮಸ್ಯೆಗಳಿದ್ದಲ್ಲಿ ಬಗೆಹರಿಸಿಕೊಳ್ಳಲು ತಿಳಿಸಿದರು.

ಗುಂಡನಪಲ್ಲೆ, ಲಿಂಗಾಪೂರ ಮತ್ತು ಚಿನಿವಾಲಕೊಪ್ಪ ಮೂರು ಹಳ್ಳಿ ಸೇರಿ ಒಂದು ಆರ್‍ಸಿ ಸೆಂಟರ್ ಇದ್ದು, ಮೂಲಭೂತ ಸೌಲಭ್ಯಗಳನ್ನು ಒದಗಿಸಲದೇ ಗ್ರಾ.ಪಂಗೆ ಹಸ್ತಾಂತರಿಸಿದ್ದರಿಂದ ಇಲ್ಲಿ ಅಭಿವೃದ್ದಿ ಆಗಬೇಕಾದ ಕಾರ್ಯಗಳು ಆಗಿರುವದಿಲ್ಲ. ರಸ್ತೆ ನಿರ್ಮಾಣಕ್ಕೆ ಗ್ರಾಮ ಪಂಚಾಯತಿಗಳಲ್ಲಿ ಅನುದಾನದ ಕೊರತೆ ಇದ್ದು, ಆರ್ & ಆರ್ ದವರು ಸಂಪೂರ್ಣ ಅಭಿವೃದ್ದಿ ಪಡಿಸುವಂತೆ ಯುಕೆಪಿಯ ವಿಶೇಷ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು. ಇದೇ ಸಂದರ್ಭದಲ್ಲಿ ಗ್ರಾಮಸ್ತರ ನೀಡಿದ ಸಮಸ್ಯೆಗಳು ಹಾಗೂ ಆಗಬೇಕಾದ ಕೆಲಸದ ಪಟ್ಟಿಯನ್ನು ಪರಿಸುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.

ಇದೇ ಸಂದರ್ಭದಲ್ಲಿ ಸೈನದಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾದ ಗ್ರಾಮದ 3 ಜನ ಮಾಜಿ ಸೈನಿಕರನ್ನು ಹಾಗೂ ಸಿಇಟಿ ಪರೀಕ್ಷೆಯ ರ್ಯಾಂಕ್‍ನಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಅಭಿಷೇಕ ಹಳ್ಳೂರ ಹಾಗೂ ಎಂಎಂಎಸ್ ವತಿಯಿಂದ ವಿದ್ಯಾರ್ಥಿ ವೇತನಕ್ಕಾಗಿ ನಡೆದ ಪರೀಕ್ಷೆಯಲ್ಲಿ ಗ್ರಾಮದ 3 ಜನ ವಿದ್ಯಾರ್ಥಿಗಳು ಆಯ್ಕೆಯಾದವರನ್ನು ಪುರಸ್ಕರಿಸಲಾಯಿತು.

ಜಿಲ್ಲಾಧಿಕಾರಿ ಡಾ.ಕೆ.ರಾಜೇಂದ್ರ ಮಾತನಾಡಿ ಗ್ರಾಮಸ್ಥರಿಂದ ಒಟ್ಟು 86 ಅರ್ಜಿಗಳು ಸ್ವೀಕೃತಗೊಂಡಿದ್ದು, ಅದರಲ್ಲಿ 45 ಮಾಶಾಸನಕ್ಕೆ ಸಂಬಂಧಿಸಿದಿದ್ದರೆ, 10 ಆಧಾರ ಸೀಡಿಂಗ್ ಹಾಗೂ ಇತರೆ ವಿಷಯಕ್ಕೆ ಸಂಬಂಧಿಸಿದ್ದವು, ಅವುಗಳನ್ನು ಸಾಧ್ಯವಾದಷ್ಟು ಬಗೆಹರಿಸಲಾಗುವುದೆಂದು ತಿಳಿಸಿದರು. ಅಲ್ಲದೇ ಶಾಲಾ ದುರಸ್ಥಿ, ಕಂಪೌಂಡ್ ನಿರ್ಮಾಣ, ಶೌಚಾಲಯಗಳನ್ನು ನರೇಗಾದಡಿ ಕಾಮಗಾರಿ ಕೈಗೊಳ್ಳಲು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿದರು. ಜೆಜೆಎಂದಡಿ ಮಲ್ಲಾಪೂರ ಗ್ರಾಮವನ್ನು ತೆಗೆದುಕೊಳ್ಳಲಾಗಿದ್ದು, ಸಮರ್ಪಕವಾಗಿ ನೀರು ಪೂರೈಸುವ ಕೆಲಸವಾಗಬೇಕೆಂದು ಜೆಜೆಎಂ ಇಂಜಿನೀಯರರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಕಾರ್ಯಕ್ರಮದಲ್ಲಿ ಬೇವಿನಮಟ್ಟಿ ಗ್ರಾ.ಪಂ ಅಧ್ಯಕ್ಷೆ ಯಲ್ಲವ್ವ ದೊಡಮನಿ, ಉಪಾಧ್ಯಕ್ಷೆ ಸಿದ್ದವ್ವ ಮಲ್ಲಾಡದ, ಸದಸ್ಯರಾದ ಮಲ್ಲನಗೌಡ ಗೌಡ್ರ, ಯಲ್ಲಪ್ಪ ಕೊಣ್ಣೂರ, ರೇಣುಖಾ ಗದಿಗೆನ್ನವರ, ರೇಖಾ ತಳವಾರ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಕೃಷಿ ಜಂಟಿ ನಿರ್ದೇಶಕಿ ಚೇತನಾ ಪಾಟೀಲ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ, ತಹಶೀಲ್ದಾರ ಗುರುಸಿದ್ದಯ್ಯ ಹಿರೇಮಠ, ತಾ.ಪಂ ಇಓ ಶಿವಾನಂದ ಕಲ್ಲಾಪೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*