ಜಿಲ್ಲಾ ಸುದ್ದಿಗಳು
ಉತ್ತರ ಕನ್ನಡ
ಕೂರ್ಮಗಡ, ದೇವಘಡ, ಶಿಮ್ಸಿಗುಡ್ಡ, ಕರ್ಕಲ್ ಗುಡ್ಡ, ಅಂಜುದೀವ್, ಸನಸೆಗುಂಜಿ ನಡುಗಡ್ಡೆ, ಕನಿಗುಡ್ಡ, ಮದಲಿಗಡ ಸೇರಿದಂತೆ 12 ನಡುಗಡ್ಡೆಗಳು, ಉತ್ತರ ಕನ್ನಡ ಜಿಲ್ಲೆಯ ಅರಬ್ಬೀ ಸಮುದ್ರದ ವ್ಯಾಪ್ತಿಗೆ ಒಳಪಟ್ಟಿವೆ.ದಾಖಲೆಗಳ ಪ್ರಕಾರ ಈ 12 ನಡುಗಡ್ಡೆಗಳು ಇಂದಿಗೂ ಗೋವಾ ರಾಜ್ಯದ ಹೆಸರಿನಲ್ಲಿವೆ ಎಂಬ ಮಾಹಿತಿ ಕೇಂದ್ರ ಗೃಹ ಇಲಾಖೆ ಹಾಗೂ ರಾಜ್ಯ ಆಂತರಿಕ ಭದ್ರತಾ ವಿಭಾಗದಿಂದ ಹೊರಬಿದ್ದಿದೆ.ಈ ಬಗ್ಗೆ ಸ್ಪಷ್ಟ ಮಾಹಿತಿ ಒದಗಿಸುವಂತೆ ರಾಜ್ಯ ಆಂತರಿಕ ಭದ್ರತಾ ಪಡೆ ಉತ್ತರ ಕನ್ನಡ ಜಿಲ್ಲಾಡಳಿತವನ್ನು ಕೇಳಿತ್ತು. ಈ ಬಗ್ಗೆ ಪರಿಶೀಲಿಸಿದ ಜಿಲ್ಲಾಡಳಿತ, ನಡುಗಡ್ಡೆಗಳ ಲಾಂಗಿಟ್ಯೂಡ್ ಹಾಗೂ ಲ್ಯಾಟಿಟ್ಯೂಡ್ ಪರಿಶೀಲಿಸಿ ಇವುಗಳು ಕರ್ನಾಟಕದ್ದೇ ಎಂದು ವರದಿ ಕಳುಹಿಸಿದೆ.
ಸ್ವಾತಂತ್ರ್ಯ ಪೂರ್ವದಲ್ಲಿ ಪೋರ್ಚುಗೀಸ್ ರು ಕರ್ನಾಟಕ ರಾಜ್ಯದ ವ್ಯಾಪ್ತಿಯ ಹಲವು ದ್ವೀಪಗಳನ್ನು ತಮ್ಮ ಸುಪರ್ದಿಯಲ್ಲಿ ಇರಿಸಿಕೊಂಡಿದ್ದರು.ಬೌಗೋಳಿಕವಾಗಿ ಕರ್ನಾಟಕ ರಾಜ್ಯದ ವ್ಯಾಪ್ತಿಗೆ ಒಳಪಡುವ ಈ ನಡುಗಡ್ಡೆಗಳು, ಕರ್ನಾಟಕ ರಾಜ್ಯದ ವ್ಯಾಪ್ತಿಯಿಂದ 12 ರಿಂದ 15 ನಾಟಿಕಲ್ ದೂರದಲ್ಲಿವೆ.ಸ್ವಾತಂತ್ರ್ಯ ಬಂದು ಹಲವು ಸಮಯಗಳ ಕಾಲ ಪೋರ್ಚುಗೀಸ್ ರು ಗೋವಾ ರಾಜ್ಯವನ್ನು ತಮ್ಮ ಅಧೀನದಲ್ಲಿ ಇರಿಸಿಕೊಂಡ ಕಾರಣ, ಈ ಭಾಗಗಳೂ ಗೋವಾ ರಾಜ್ಯದ ಹೆಸರಿನಲ್ಲೇ ದಾಖಲಾಗಿವೆ.ಪೋರ್ಚುಗೀಸ್ ರು ದೇಶ ತೊರೆದ ನಂತರದಲ್ಲಿ ಈ ನಡುಗಡ್ಡೆಗಳನ್ನು ತಮ್ಮ ಅಧೀನಕ್ಕೆ ಪಡೆದುಕೊಳ್ಳಬೇಕಿದ್ದ ಸರ್ಕಾರ ಕಣ್ಮುಚ್ಚಿಯೇ ಕುಳಿತಿದೆ.ಉತ್ತರ ಕನ್ನಡ ಜಿಲ್ಲೆಯನ್ನು ಸದಾ ಉದಾಸೀನ ಮಾಡುವ ಕರ್ನಾಟಕ ಸರ್ಕಾರಕ್ಕೆ, ಇದೊಂದು ಬಹುಮುಖ್ಯ ವಿಷಯ ಎಂಬುದು ಸಹ ಈ ಕ್ಷಣದ ತನಕ ಜ್ಞಾನೋದಯವಾಗದೇ ಇದ್ದುದು ಹೊಸತೆನೂ ಅಲ್ಲ.
Be the first to comment