ಸರ್ಕಾರಿ ನೌಕರರ ಬೇಡಿಕೆ ಈಡೇರಿಕೆಗಾಗಿ ಹೋರಾಟಕ್ಕೆ ರೂಪರೇಷೆ:ತಾಲೂಕಾಧ್ಯಕ್ಷ ಪಿ ಎಸ್ ಪಮ್ಮಾರ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ:ದಿನಾಂಕ:10-10-2021 ರಂದು ಬೆಂಗಳೂರಿನಲ್ಲಿ ರಾಜ್ಯಾಧ್ಯಕ್ಷರಾದ ಸಿ ಎಸ್ ಷಡಾಕ್ಷರಿ ರವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಮಹಾಸಭೆಯಲ್ಲಿ ಸರ್ಕಾರಿ ನೌಕರರ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಹಂತ ಹಂತವಾಗಿ ಹೋರಾಟ ಮಾಡಲು ಮಹಾಸಭೆಯು ಮಹತ್ವದ ನಿರ್ಣಯವನ್ನು ಕೈಗೊಂಡಿರುತ್ತದೆ ಎಂದು ಇಳಕಲ್ ತಾಲ್ಲೂಕು ಅಧ್ಯಕ್ಷರಾದ ಪರಶುರಾಮ ಎಸ್ ಪಮ್ಮಾರ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸರ್ಕಾರಿ ನೌಕರರ ಪ್ರಮುಖ ಬೇಡಿಕೆಗಳಾದ;

* ಸರ್ಕಾರಿ ನೌಕರರಿಗೆ 07 ನೇ ವೇತನ ಆಯೋಗವನ್ನು ರಚಿಸಿ ವೇತನ ಭತ್ಯೆಗಳನ್ನು ಪರಿಷ್ಕರಿಸಿ ಜಾರಿಗೊಳಿಸುವುದು.

* ರಾಷ್ಟ್ರೀಯ ನೂತನ ಪಿಂಚಣಿ ಯೋಜನೆಯನ್ನು (NPS) ರದ್ದುಪಡಿಸಿ, ನಿಶ್ಚಿತ ಪಿಂಚಣಿ ಯೋಜನೆ ಜಾರಿಗೊಳಿಸುವುದು.

* ರಾಜ್ಯದಲ್ಲಿ ಖಾಲಿಯಿರುವ 2.63 ಲಕ್ಷ ಹುದ್ದೆಗಳನ್ನು ಕಾಲಮಿತಿಯೊಳಗೆ ಭರ್ತಿ ಮಾಡುವುದು.

* ರಾಜ್ಯದ ಪ್ರಾಥಮಿಕ,ಪ್ರೌಢಶಾಲಾ ಶಿಕ್ಷಕರು ಹಾಗೂ ಉಪನ್ಯಾಸಕರ ವರ್ಗಾವಣೆ ಕಾಯಿದೆ ಜಾರಿ,ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ, ಪದವೀಧರ ಶಿಕ್ಷಕರ ಸಮಸ್ಯೆ, ಮುಖ್ಯ ಶಿಕ್ಷಕರ ಸಮಸ್ಯೆ, ವೇತನ ತಾರತಮ್ಯ ಹಾಗೂ ಗ್ರಾಮೀಣ ಕೃಪಾಂಕ ಶಿಕ್ಷಕರ ಸಮಸ್ಯೆ ಬಗೆಹರಿಸುವುದು.

ಈ ಪ್ರಮುಖವಾದ ಬೇಡಿಕೆಗಳ ಬಗ್ಗೆ ಕೆಳಗಿನಂತೆ ಸರ್ಕಾರದ ಗಮನ ಸೆಳೆಯಲು ಹೋರಾಟದ ರೂಪರೇಷೆಗಳನ್ನು ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ.

* 2021 ರ ನವೆಂಬರ್ ಮಾಹೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲಾ,ತಾಲ್ಲೂಕು ಸಂಘಗಳಿಂದ ಸಚಿವರು, ಶಾಸಕರು,ಸಂಸದರು,ವಿಧಾನ ಪರಿಷತ್ ಸದಸ್ಯರಿಗೆ ಮನವಿ ಸಲ್ಲಿಸಿ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸುವುದು.

* 2021 ರ ಡಿಸೆಂಬರ್ ಮಾಹೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲಾ, ತಾಲ್ಲೂಕು ಸಂಘಗಳಿಂದ ಏಕಕಾಲಕ್ಕೆ ಕಚೇರಿಯ ಮಧ್ಯಾನ್ಹದ ಬಿಡುವಿನ ಅವಧಿಯಲ್ಲಿ ತಾಲ್ಲೂಕಿನ ತಹಶಿಲ್ದಾರರ ಹಾಗೂ ಜಿಲ್ಲಾ ಹಂತದಲ್ಲಿ ಜಿಲ್ಲಾಧಿಕಾರಿಗಳಿಗೆ ಎಲಾ ಪದಾಧಿಕಾರಿಗಳು ಹಾಗೂ ಸರ್ಕಾರಿ‌ ನೌಕರರು ಸೇರಿ ಮನವಿ ಸಲ್ಲಿಸುವುದು.

* 2022 ರ ಜನವರಿ ತಿಂಗಳಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ನೌಕರರು ಮೂರು ದಿನಗಳ‌ ಕಾಲ ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸುವುದು.
ಆದಾಗ್ಯೂ ನಮ್ಮ ಬೇಡಿಕೆಗಳಿಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸದಿದ್ದಲ್ಲಿ,ರಾಜ್ಯ ಸಂಘದ ಮಹಾಸಭೆ ಹಾಗೂ ಎಲ್ಲಾ ವೃಂದ ಸಂಘಗಳ ಸಭೆಗಳನ್ನು ಏರ್ಪಡಿಸಿ, ಸಭೆಯು ಕೈಗೊಳ್ಳುವ ನಿರ್ಣಯವನ್ನಾಧರಿಸಿ ಮುಂದಿನ‌ ನಿರ್ಣಾಯಕ ಹೋರಾಟಗಳನ್ನು ಸಂಘದ ವತಿಯಿಂದ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಪರಿಷತ್ ಸದಸ್ಯರಾದ ಈಶ್ವರ ಎಸ್ ಗಡ್ಡಿ,ಖಜಾಂಚಿಗಳಾದ ಮಹಾಂತಗೌಡ ಎಚ್ ಗೌಡರ,ಕಾರ್ಯದರ್ಶಿಗಳಾದ ಗುಂಡಪ್ಪ ಎ ಕುರಿ,ಗೌರವಾಧ್ಯಕ್ಷರಾದ ಎಸ್ ಎನ್ ಗಡೇದ ರವರು ಹಾಗೂ ಪದಾಧಿಕಾರಿಗಳು ಹಾಜರಿದ್ದರು.

Be the first to comment

Leave a Reply

Your email address will not be published.


*