ಜಿಲ್ಲಾ ಸುದ್ದಿಗಳು
ಯಲ್ಲಾಪುರ:
ಚರಂಡಿ ನಿರ್ಮಾಣದ ಗುತ್ತಿಗೆ ಪಡೆದ ಗುತ್ತಿಗೆದಾರನೋರ್ವ ನಿಗಧಿತ ಸಮಯದಲ್ಲಿ ಚರಂಡಿ ನಿರ್ಮಿಸದೇ ಇರುವ ಕಾರಣಕ್ಕೆ, ಚರಂಡಿ ಮೇಲಿನ ಸುಮಾರು 75 ಮೀಟರ್ ಉದ್ದದ ಕಾಂಪೌಂಡ್ ಉರುಳಿ ಬಿದ್ದಿರುವ ಘಟನೆ ಸಬಗೇರಿ ಪ.ಪಂ ವಾರ್ಡ್ ನಲ್ಲಿ ಬುಧವಾರ ರಾತ್ರಿ 7 ಗಂಟೆಗೆ ನಡೆದಿದೆ.
ಸಬಗೇರಿ ಪ.ಪಂ ವಾರ್ಡ್ ನಂ 13ರ ಜನವಸತಿ ಪ್ರದೇಶದಲ್ಲಿ ಖಾಸಗಿ ಮನೆಯ ಕಂಪೌಂಡ್ ಗೋಡೆಗಳು ಮೂರು ಹಂತದಲ್ಲಿ ಕುಸಿದಿದ್ದು, ಸುಮಾರು 75 ಮೀಟರ್ ಗೂ ಹೆಚ್ಚು ಗೋಡೆ ಕುಸಿದು ಹೋಗಿದೆ.
ನೀರು ಸರಾಗವಾಗಿ ಹರಿದು ಹೋಗಲು ಸುಮಾರು 130 ಮೀಟರ್ ಉದ್ದದ ಕಾಂಕ್ರೀಟ್ ಚರಂಡಿ ನಿರ್ಮಾಣ ಕಾರ್ಯವನ್ನು ಪಟ್ಟಣ ಪಂಚಾಯಿತಿ ಇ-ಟೆಂಡರ್ ಕರೆದು ಗುತ್ತಿಗೆದಾರರ ಮೂಲಕ ಕೆಲಸ ಕೈಗೆತ್ತಿಕೊಂಡಿದೆ. ಗುತ್ತಿಗೆ ಪಡೆದ ಗುತ್ತಿಗೆದಾರರು ಚರಂಡಿ ನಿರ್ಮಾಣಕ್ಕೆ ಹೊಂಡ ತೆಗೆದು ಮಣ್ಣು ಮೇಲೆ ಸಂಗ್ರಹ ಮಾಡಿದ್ದ, ಆದರೆ ಸಕಾಲದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಿಲ್ಲ. ಚರಂಡಿ ನಿರ್ಮಾಣಕ್ಕಾಗಿ ಅಗಳ ತೆಗೆದು ಹಾಗೆ ಬಿಟ್ಟಿರುವ ಕಾರಣಕ್ಕೆ ಇತ್ತೀಚೆಗೆ ಸುರಿದ ಮಳೆಯಿಂದಾಗಿ, ಕಾಂಪೌಂಡ್ ಕೆಳಗಿನ ಇನ್ನಷ್ಟು ಮಣ್ಣು ಕುಸಿದು, ಸುಮಾರು 75 ಮೀಟರ್ ಉದ್ದದ ಕಂಪೌಂಡ್ ಗೋಡೆಗಳು ನೋಡುನೋಡುತ್ತಲೇ ಕುಸಿದುಬಿದ್ದಿದೆ. ಈ ಚರಂಡಿ ಖಾಸಗಿ ವ್ಯಕ್ತಿಗಳ ಮನೆಯ ಕಂಪೌಂಡಿನ ಪಕ್ಕ ಹಾದು ಹೋಗಿರುವುದರಿಂದ 6 ಅಡಿಯಿಂದ 8 ಅಡಿ ಎತ್ತರದವರೆಗೆ ನಿರ್ಮಾಣವಾಗಿದ್ದ ಕಾಂಪೌಂಡ್ ಗಳು ತರಗೆಲೆಯಂತೆ ಉದುರಿ ಬಿದ್ದಿವೆ.
ಸಬಗೇರಿ ನಿವಾಸಿಗಳಾದ ಅಶೋಕ ಕುರ್ಡೇಕರ್( ಚಾಮುಂಡೇಶ್ವರಿ), ನಿತ್ಯಾನಂದ ನಾಯ್ಕ, ಶಾಂತಪ್ಪ ನಾಯ್ಕ, ಅಶೋಕ ನಾಯ್ಕ, ವಿಶ್ವನಾಥ ನಾಯ್ಕ ಇವರ ಕುಟುಂಬಕ್ಕೆ ಸೇರಿರುವ ಕಾಂಪೌಂಡ್ ಗಳು ಕುಸಿದು ಬಿದ್ದಿದೆ. ನಾಳೆ ಬೆಳಿಗ್ಗೆ ಒಳಗೆ ಇನ್ನಷ್ಟು ಕಾಂಪೌಂಡ್ ಗಳು ಹಾಗೂ ಮನೆಯ ಗೋಡೆಗಳು ಕುಸಿದು ಬೀಳುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಪಟ್ಟಣ ಪಂಚಾಯಿತಿ ಕಾಮಗಾರಿಗಳನ್ನು ರಾಜ್ಯವ್ಯಾಪಿ ಇ- ಟೆಂಡರ್ ಮೂಲಕ ಕರೆಯಲಾಗುತ್ತದೆ. ಗುತ್ತಿಗೆ ಪಡೆದ ಗುತ್ತಿಗೆದಾರರು ಸ್ಥಳೀಯರಿಗೆ ಸಬ್ ಕಾಂಟ್ರಾಕ್ಟ್ ನೀಡಿ, ಪಟ್ಟಣ ಪಂಚಾಯಿತಿ ಸದಸ್ಯರು ಅಥವಾ ಸಾರ್ವಜನಿಕರ ಕೈಗೆ ಸಿಗುವುದಿಲ್ಲ. ಹತ್ತಾರು ಕಡೆ ಗುತ್ತಿಗೆ ಹಿಡಿಯುವ ಗುತ್ತಿಗೆದಾರರು ಯಾವುದೇ ಒಂದು ಕಡೆ ನಿಗದಿತ ಸಮಯದಲ್ಲಿ ಕೆಲಸವನ್ನು ಪೂರ್ಣಗೊಳಿಸುವದಿಲ್ಲ. ಇಂತಹ ಕಾರಣಕ್ಕಾಗಿಯೇ, ಸಬಗೇರಿಯಲ್ಲಿ 130 ಮೀಟರ್ ಉದ್ದದ ಚರಂಡಿ ನಿರ್ಮಾಣಕ್ಕಾಗಿ ಹೊಂಡ ತೆಗೆದಿದ್ದು ಬಿಟ್ಟರೆ, ಕಾಂಕ್ರೀಟ್ ಕಂಪೌಂಡ್ ನಿರ್ಮಾಣ ಇನ್ನುವರೆಗೂ ಮುಂದುವರೆದಿಲ್ಲ. ಹೀಗಾಗಿ ಸುರಿದ ಮಳೆಯಿಂದಾಗಿ ಮತ್ತಷ್ಟು ಹೊಂಡದ ಮಣ್ಣು ಕುಸಿಯುತ್ತ ಸಾಗಿದ್ದು, ಒಂದು ತಾಸಿನ ಅವಧಿಯಲ್ಲಿ 75 ಮೀಟರ್ ನಿಂದ 100 ಮೀಟರ್ ನಷ್ಟು ಉದ್ದದ ಕಂಪೌಂಡ್ ಗೋಡೆಗಳು ಕುಸಿದು ಬಿದ್ದಿವೆ.
“ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಗೂ ಎಂಜಿನಿಯರ್ ಗುತ್ತಿಗೆದಾರರಿಗೆ ಚರಂಡಿ ನಿರ್ಮಾಣದ ಪರವಾನಿಗೆ ನೀಡಿದ್ದಾರೆ. ಗುತ್ತಿಗೆದಾರ ಕೂಡಲೇ ಕಾಮಗಾರಿ ಪೂರ್ಣಗೊಳಿಸಿ ಕೊಳ್ಳಬೇಕಾಗಿತ್ತು, ಆದರೆ ಆತ ಶೀಘ್ರವಾಗಿ ಕೆಲಸ ಮಾಡುವ ಬದಲು ಬಹಳಷ್ಟು ಬಿಡಮ್ಮ ನೀತಿ ಅನಿಸಿರುವ ಕಾರಣಕ್ಕೆ ಗುತ್ತಿಗೆದಾರನ ಜೊತೆಯಲ್ಲಿ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಕೂಡ ಕಾಂಪೌಂಡ್ ಕುಸಿಯಲು ಹೊಣೆಗಾರರಾಗಿದ್ದಾರೆ. ಹಾನಿಗೊಳಗಾದ ಕಂಪೌಂಡಿಗೆ ಖಾಸಗಿ ವ್ಯಕ್ತಿಗಳಿಗೆ ಸೂಕ್ತ ಪರಿಹಾರ ನೀಡಬೇಕು.”
-ರಾಜು ನಾಯ್ಕ, ಪ.ಪಂ ಸಬಗೇರಿ ಪ.ಪಂ ವಾರ್ಡ್ ಸದಸ್ಯರು.
“ಕಂಪೌಂಡ್ ಗೋಡೆ ಕುಸಿಯಲು ಗುತ್ತಿಗೆದಾರನ ವಿಳಂಬನೀತಿ ಕಾರಣವಾಗಿದ್ದು, ಬಹಳಷ್ಟು ಜನರ ಖಾಸಗಿ ಕಂಪೌಂಡ್ ಗೋಡೆಗಳು ಕುಸಿದು ಹೋಗಿದೆ, ನಾಳೆ ಬೆಳಿಗ್ಗೆಯೊಳಗೆ ಮನೆಯ ಅಂಚಿನ ಕೆಲವು ಗೋಡೆಗಳು ಕುಸಿಯುವ ಭಯವಿದೆ. ಗುತ್ತಿಗೆದಾರನ ಹಾಗೂ ಪಟ್ಟಣ ಪಂಚಾಯಿತಿಯ ತಪ್ಪು ನಿರ್ಣಯ ದಿಂದಾಗಿ ಖಾಸಗಿ ವ್ಯಕ್ತಿಗಳು ಹಾನಿಗೊಳಗಾಗಿದ್ದು ಅವರಿಗೆ ಸೂಕ್ತ ಪರಿಹಾರವನ್ನು ಗುತ್ತಿಗೆದಾರರಿಗೆ ಕೊಡಿಸಬೇಕು.”
-ವಿನೋದ ತಳೇಕರ, ಸಬಗೇರಿ ಪ.ಪಂ ವಾರ್ಡ್ ಮಾಜಿ ಸದಸ್ಯರು
Be the first to comment