ರಾಜ್ಯ ಸುದ್ದಿಗಳು
ಶಿರಸಿ:
ನಕಲಿ ಪರಿಸರ ವಾದಿಗಳು ಶಿರಸಿ- ಕುಮಟಾ ರಸ್ತೆ ಕಾಮಗಾರಿ ನಿಲ್ಲಿಸುವಂತೆ ಒತ್ತಾಯಿಸಿ ಉಚ್ಛ ನ್ಯಾಯಾಲಯದಿಂದ ತಡೆಯಾಜ್ಞೆ ತರುವ ಆತಂಕ ಇದೆ ಎಂದು ಶಿರಸಿ ಸಮಗ್ರ ಅಭಿವೃದ್ಧಿ ವೇದಿಕೆ ಕಾರ್ಯಕರ್ತರು ದೂರಿದ್ದಾರೆ.
ಮಂಗಳವಾರ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿದ ಕಾರ್ಯಕರ್ತರು ಮನವಿ ಸಲ್ಲಿಸಿದರು. ಬೆಂಗಳೂರಿನ ಸ್ವಯಂಸೇವಾ ಸಂಸ್ಥೆಯೊಂದು ಹೈ ಕೋರ್ಟ್ ದಲ್ಲಿ ಸೋಲನ್ನನುಭವಿಸಿ, ಸುಪ್ರೀಂಕೋರ್ಟ್‌ನಿಂದ ಈ ರಸ್ತೆಯ ಕಾಮಗಾರಿಗೆ ತಡೆಯಾಜ್ಞೆ ತರುವುದಕ್ಕಾಗಿ ಪ್ರಯತ್ನಿಸುತ್ತಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಕಾಮಗಾರಿಗೆ ವೇಗ ನೀಡಬೇಕು. ಯಾವುದೇ ಕಾರಣಕ್ಕೂ ಕಾಮಗಾರಿ ಸ್ಥಗಿತಗೊಳೊಸಬಾರದು ಎಂದು ಕಾರ್ಯಕರ್ತರು ಕೋರಿದರು. ಶಿರಸಿ-ಕುಮಟಾ ರಸ್ತೆ ಕಾಮಗಾರಿ ಮಂಜೂರಾಗಿ ವರ್ಷ ಕಳೆದರೂ ಇನ್ನೂ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದರು.
ಈಗಾಗಲೇ ಜಿಲ್ಲಾಧಿಕಾರಿ ಆದೇಶವಿದ್ದು, ಶಿರಸಿ-ಕುಮಟಾ ರಸ್ತೆಯನ್ನು ಬಂದ್ ಮಾಡಿ ಶೀಘ್ರದಲ್ಲಿ ಕೆಲಸ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು. ಅಲ್ಲದೇ ಪರಿಸರ ಸಂಘಟನೆ ಹೆಸರಲ್ಲಿ ಸಾರ್ವಜನಿಕರಿಂದ ಹಣ ಸಂಗ್ರಹ ಕಾರ್ಯ ಮಾಡಲಾಗುತ್ತಿದ್ದು, ಅಭಿವೃದ್ಧಿ ವಿರೋಧಿ ಕಾರ್ಯಗಳಿಗೆ ಹಣ ದೋಚುತ್ತಿರುವ ವ್ಯಕ್ತಿಗಳ ವಿರುದ್ಧ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.
ಕಾಮಗಾರಿ ತ್ವರಿತವಾಗಿ ಪೂರೈಸಲು ಹಕ್ಕೊತ್ತಾಯ ಮಾಡುವ ಉದ್ದೇಶದಿಂದ ಅ.8ರಂದು ಬೆಳಗ್ಗೆ 10 ಗಂಟೆಗೆ ಶಿರಸಿ-ಕುಮಟಾ ರಸ್ತೆಯ ಹೆಗಡೆಕಟ್ಟಾ ಕ್ರಾಸ್‌ನಲ್ಲಿ ರಸ್ತೆ ತಡೆ ಚಳುವಳಿ ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ನಮಗೆ ಪರಿಸರದ ಪಾಠ ಮಾಡಲು ಪುನಃ ಪುನಃ ಕೋರ್ಟ್ ಗೆ ಅಲೆಯುತ್ತಿರುವ ಸ್ವಯಂಸೇವಾ ಸಂಸ್ಥೆಯ ಪದಾಧಿಕಾರಿಗಳನ್ನು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಮತ್ತು ಸಂಬಂಧಿಸಿದ ಇತರೆ ಸರ್ಕಾರಿ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಲು ವ್ಯವಸ್ಥೆ ಮಾಡಬೇಕು ಎಂದು ಕೋರಿದರು.
ಮನವಿ ನೀಡುವ ವೇಳೆ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ, ಸಂಘಟನೆಯ ರಾಜೇಶ ಶೆಟ್ಟಿ, ಉಪೇಂದ್ರ ಪೈ, ಪರಮಾನಂದ ಹೆಗಡೆ, ಎಂ.ಎಂ.ಭಟ್ಟ, ರಾಖೇಶ ತಿರುಮನೆ, ಶಶಿ ಪಂಡಿತ, ನಾಗರಾಜ ನಾಯ್ಕ, ರಮಾಕಾಂತ ಭಟ್ಟ ಇತರರಿದ್ದರು.
Be the first to comment