ಉತ್ತರ ಕನ್ನಡ ಜಿಲ್ಲೆಗೆ ಎರಡು ಇಎಸ್ಐ ಚಿಕಿತ್ಸಾಲಯ ; “ಸೋಶಿಯಲ್ ವಾರ್”..!!

ವರದಿ-ಸುಚಿತ್ರಾ ನಾಯ್ಕ ಹೊನ್ನಾವರ

ಜಿಲ್ಲಾ ಸುದ್ದಿಗಳು 

ಕಾರವಾರ

ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಹಲವು ವರ್ಷಗಳ ಹಿಂದೆಯೇ ಶಾಶ್ವತ ಇಎಸ್‌ಐ ಆಸ್ಪತ್ರೆ ನಿರ್ಮಾಣವಾಗಿದ್ದು, ಉಳಿದ ಕೆಲ ತಾಲೂಕುಗಳಲ್ಲಿ ಇಎಸ್‌ಐ ಚಿಕಿತ್ಸಾಲಯ ನಿರ್ಮಾಣವಾಗಬೇಕು ಎನ್ನುವ ಬೇಡಿಕೆ ಹಲವು ವರ್ಷಗಳಿಂದ ಇಟ್ಟಿದ್ದರು. ಈ ನಿಟ್ಟಿನಲ್ಲಿ ಕೇಂದ್ರ ಕಾರ್ಮಿಕ ಇಲಾಖೆ ರಾಜ್ಯದ ಹಲವು ತಾಲೂಕು ಕೇಂದ್ರಗಳಲ್ಲಿ ಇಎಸ್‌ಐ ಡಿಸ್ಪೆನ್ಸರಿ ನಿರ್ಮಾಣಕ್ಕೆ ಮಂಜೂರು ಮಾಡಿದೆ ಅದರಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಹಾಗೂ ಕುಮಟಾಕ್ಕೂ ಮಂಜೂರು ಮಾಡಿ ತಾಂತ್ರಿಕ ಅನುಮೋದನೆ ನೀಡಿದೆ.ಕಾರ್ಮಿಕ ಇಲಾಖೆಗೆ ಸಂಬಂಧಿಸಿದ ಇಎಸ್‌ಐ ಡಿಸ್ಪೆನ್ಸರಿಗಳನ್ನು (ಚಿಕಿತ್ಸಾಲಯ) ಉತ್ತರ ಕನ್ನಡ ಜಿಲ್ಲೆಯ ಕುಮಟಾ ಹಾಗೂ ಶಿರಸಿ ತಾಲ್ಲೂಕಿಗೆ ಕೇಂದ್ರ ಸರ್ಕಾರ ಮಂಜೂರು ಮಾಡಿದೆ.ಆದರೆ ಇದನ್ನು ಮಂಜೂರು ಮಾಡಲು ‘ನಮ್ಮ ನಾಯಕರೇ ಕಾರಣ’ … ‘ನಮ್ಮ ನಾಯಕರೇ ಕಾರಣ’, ಎಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ನಾಯಕರುಗಳ ಬೆಂಬಲಿಗರು ಪೋಸ್ಟ್‌ಗಳನ್ನು ಹಂಚಿಕೊಳ್ಳುವ ಮೂಲಕ “ಸೋಶಿಯಲ್ ವಾರ್” ಶುರು ಮಾಡಿಕೊಂಡಿದ್ದಾರೆ. ಇದರಿಂದಾಗಿ ಡಿಸ್ಪೆನ್ಸರಿ ಮಂಜೂರಿಗೆ ನಿಜವಾಗಿಯೂ ಕಾರಣರಾರು ಎನ್ನುವ ಪ್ರಶ್ನೆ ಉದ್ಭವವಾಗಿ ಉತ್ತರ ಸಿಗದಂತಾಗಿದೆ.

CHETAN KENDULI

ಶಿರಸಿ ಹಾಗೂ ಕುಮಟಾದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಮಂಜೂರಾಗಿರುವ ಬಗ್ಗೆ ಪ್ರಕಟವಾಗುತ್ತಿದ್ದಂತೆ ಸೆಪ್ಟೆಂಬರ್ 25ರಂದು ಜಿಲ್ಲೆಯ ಸಂಸದರಿಗೆ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗಿ ಪರಿಸರ ಹಾಗೂ ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ಸಚಿವ ಭೂಪೇಂದ್ರ ಯಾದವ್ ಆಸ್ಪತ್ರೆ ಮಂಜೂರು ಮಾಡಿರುವ ಕುರಿತು ಬರೆದಿರುವ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಆಸ್ಪತ್ರೆ ನಿರ್ಮಾಣಕ್ಕೆ ಪ್ರಮುಖ ಪಾತ್ರವಹಿಸಿದ ಸಂಸದರಿಗೆ ಧನ್ಯವಾದಗಳು ಎಂದು ಹೆಗಡೆ ಬೆಂಬಲಿಗರು ಹಾಕಿಕೊಂಡಿದ್ದಾರೆ.ಇನ್ನೊಂದೆಡೆ ಇದರ ಬೆನ್ನಲ್ಲೇ ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಬೆಂಬಲಿಗರು ಕೇಂದ್ರ ಸಚಿವರಿಗೆ ಹೆಬ್ಬಾರ್ ಬರೆದಿರುವ ಪತ್ರವನ್ನು ಹಂಚಿಕೊಂಡು, ಜುಲೈ 23ರಂದೇ ಶಿವರಾಮ ಹೆಬ್ಬಾರ್ ಕೇಂದ್ರ ಕಾರ್ಮಿಕ ಸಚಿವರಿಗೆ ರಾಜ್ಯದ 50 ತಾಲೂಕು ಕೇಂದ್ರದಲ್ಲಿ ಇಎಸ್‌ಐ ಡಿಸ್ಪೆನ್ಸರಿ ಮಂಜೂರು ಮಾಡುವಂತೆ ಪತ್ರ ಬರೆದಿದ್ದರು.

ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಕುಮಟಾ, ಹೊನ್ನಾವರ, ಶಿರಸಿ ಹಾಗೂ ಯಲ್ಲಾಪುರ ತಾಲೂಕಿನಲ್ಲಿ ಆಸ್ಪತ್ರೆ ಮಂಜೂರು ಮಾಡುವಂತೆ ಪತ್ರ ಬರೆದಿದ್ದರು. ಅದರಂತೆ ಇದೀಗ ಎರಡು ಡಿಸ್ಪೆನ್ಸರಿ ಮಂಜೂರಾಗಿದೆ ಎಂದು ಹೇಳಿಕೊಂಡಿದ್ದಾರೆ.ಇದೇ ವಿಚಾರ ಇದೀಗ ಬಿಜೆಪಿಯ ಪ್ರಮುಖ ಇಬ್ಬರು ನಾಯಕರುಗಳ ಬೆಂಬಲಿಗರ ನಡುವೆ ಸೋಶಿಯಲ್ ವಾರ್‌ಗೆ ಕಾರಣವಾಗಿದೆ. ಆಸ್ಪತ್ರೆ ಮಂಜೂರಾತಿಗೆ ನಮ್ಮ ನಾಯಕರೇ ಕಾರಣ ಎಂದು ಸಂಸದ ಅನಂತ್‌ಕುಮಾರ್ ಹೆಗಡೆ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿಕೊಂಡರೆ, ಇನ್ನೊಂದೆಡೆ ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್, ಪರಿಶ್ರಮದಿಂದಲೇ ಜಿಲ್ಲೆಗೆ ಎರಡು ಕಡೆ ಆಸ್ಪತ್ರೆ ಮಂಜೂರಾಗಿದೆ ಎಂದು ಹೆಬ್ಬಾರ್ ಬೆಂಬಲಿಗರು ಪೋಸ್ಟ್ ಹಂಚಿಕೊಳ್ಳುತ್ತಿದ್ದಾರೆ. ಇದು ಬಿಜೆಪಿಯ ನಾಯಕರುಗಳ ಬೆಂಬಲಿಗರ ನಡುವಿನ ಮುಸುಕಿನ ಗುದ್ದಾಟ ಎನ್ನುವಂತೆ ಮೇಲ್ನೋಟಕ್ಕೆ ಕಂಡುಬರುತ್ತಿದೆ. ನಾಯಕರ ಬೆಂಬಲಿಗರ ಈ ಪೋಸ್ಟ್‌ಗಳು ಬಿಜೆಪಿ ಕಾರ್ಯಕರ್ತರಲ್ಲಿ ಹಾಗೂ ಸಾರ್ವಜನಿಕರಲ್ಲಿ ಆಸ್ಪತ್ರೆ ಮಂಜೂರಾತಿಗೆ ನಿಜವಾಗಿಯೂ ಕಾರಣ ಯಾರು ಎನ್ನುವ ಪ್ರಶ್ನೆ ಉದ್ಭವಕ್ಕೆ ಕಾರಣವಾಗಿದೆ.ಒಟ್ಟಿನಲ್ಲಿ ಅದೇನೆ ಇರಲಿ, ಅಪ್ಪ- ಅಮ್ಮರ ಜಗಳದಲ್ಲಿ ಕೂಸು ಬಡವಾದಂತೆ, ಈ ಇಬ್ಬರು ನಾಯಕರುಗಳ ಬೆಂಬಲಿಗರ ಕಿತ್ತಾಟದಲ್ಲಿ ಆಸ್ಪತ್ರೆ ಅಭಿವೃದ್ಧಿಗೆ ಹಿನ್ನಡೆಯಾಗದಿರಲಿ , ಎಂಬುದು ಉತ್ತರ ಕನ್ನಡ ಜಿಲ್ಲೆಯ ಪ್ರಜ್ಞಾವಂತ ನಾಗರಿಕರ ಅಭಿಪ್ರಾಯವಾಗಿದೆ. 

Be the first to comment

Leave a Reply

Your email address will not be published.


*