ರಾಜ್ಯ ಸುದ್ದಿಗಳು
ದೇವನಹಳ್ಳಿ
ಪ್ರತಿಯೊಬ್ಬರು ಆರೋಗ್ಯಕರ ಸಮಾಜಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಸ್ವಚ್ಛ ಪರಿಸರ, ಉತ್ತಮ ಸ್ನೇಹ ಸಂಬಂಧ, ಆರೋಗ್ಯಕರ ವಾತಾವರಣ ಸೃಷ್ಠಿ ಮಾಡಲು ಕೈಜೋಡಿಸಬೇಕು ಎಂದು ಬೆಂಗಳೂರು ಲಯನ್ಸ್ ಸಂಸ್ಥೆಯ ಸೀತಾರಾಮ್ ತಿಳಿಸಿದರು.
ದೇವನಹಳ್ಳಿ ತಾಲೂಕಿನ ಚಪ್ಪರಕಲ್ಲು ಬಳಿಯ ವಿಹಾನ್ ಪಬ್ಲಿಕ್ ಶಾಲೆಯಲ್ಲಿ ಸರಕಾರಿ ಶಾಲಾ ಮಕ್ಕಳಿಗೆ ಲಯನ್ಸ್ ಸಂಸ್ಥೆ ಮತ್ತು ಶಾಲಾ ಆಡಳಿತ ಮಂಡಳಿ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಿ ಅವರು ಮಾತನಾಡಿದು. ಗಾಂಧಿ ಜಯಂತಿಯಂದು ಮಕ್ಕಳಿಗೆ ವಿಶೇಷವಾಗಿ ಆರೋಗ್ಯ ತಪಾಸಣೆಯನ್ನು ಮಾಡಲಾಗಿದೆ. ಮಕ್ಕಳಿಗೆ ಉಚಿತ ಕಣ್ಣಿನ ತಪಾಸಣೆ, ಸಾಮಾನ್ಯ ಆರೋಗ್ಯ ತಪಾಸಣೆ, ಶ್ರವಣದೋಷ ಪರೀಕ್ಷೆ ಸೇರಿದಂತೆ ಆರೋಗ್ಯಕ್ಕೆ ಸಂಬಂಧಿಸಿದ ತಪಾಸಣಾ ಕಾರ್ಯವನ್ನು ಸಂಸ್ಥೆಯಿಂದ ಮಾಡಲಾಗಿದೆ. ಗಾಂಧಿಜಿಯವರ ಜೀವನ ಚರಿತ್ರೆಯನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸುವ ಪ್ರಯತ್ನ ಆಗುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆ ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ. ಶಾಲಾ ಹಂತದಲ್ಲಿ ಮಕ್ಕಳನ್ನು ಸ್ವಾತಂತ್ರ್ಯ ಹೋರಾಟಗಾರರು ನಡೆದು ಬಂದ ಪ್ರತಿಯೊಂದು ವಿಷಯವನ್ನು ಮಕ್ಕಳಿಗೆ ಮನದಟ್ಟು ಮಾಡುವ ಅನಿವಾರ್ಯತೆ ಇದೆ. ಪ್ರತಿಯೊಬ್ಬರು ಆರೋಗ್ಯಕರವಾಗಿರಲು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛ ಮತ್ತು ಸುಂದರವಾಗಿಟ್ಟುಕೊಳ್ಳಬೇಕು ಎಂದು ಹೇಳಿದರು.
ವಿಹಾನ್ ಪಬ್ಲಿಕ್ ಶಾಲೆಯ ಅಧ್ಯಕ್ಷ ಪ್ರತಾಪ್‌ಯಾದವ್ ಮಾತನಾಡಿ, ಗಾಂಧಿಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿಯ ಅಂಗವಾಗಿ ಬೀರಸಂದ್ರ ಮತ್ತು ಚಿಕ್ಕೋಬದೇನಹಳ್ಳಿ ಗ್ರಾಮದ ಸರಕಾರಿ ಶಾಲೆಯ ಸುಮಾರು ೨೦೦ಕ್ಕೂ ಹೆಚ್ಚು ಮಕ್ಕಳನ್ನು ಕರೆತಂದು ಉಚಿತ ಆರೋಗ್ಯ ತಪಾಸಣೆಯನ್ನು ಮೊಬೈಲ್ ವಾಹನದ ಮೂಲಕ ನಡೆಸಲಾಗುತ್ತಿದೆ. ಸಮಾಜದಲ್ಲಿ ನಾವು ಪರಿಸರಕ್ಕೆ ಏನಾದರೂ ಕೊಡುವ ನಿಟ್ಟಿನಲ್ಲಿ ಪರಿಸರದ ಮೌಲ್ಯಗಳನ್ನು ಮಕ್ಕಳಿಗೆ ತಿಳಿಸಿಕೊಡುವ ಪ್ರಯತ್ನ ಮಾಡಲಾಗುತ್ತಿದೆ ಎಂದರು. ಈ ವೇಳೆಯಲ್ಲಿ ವಿಶ್ವನಾಥಪುರ ಕ್ಲಸ್ಟರ್ ಸಿಆರ್‌ಪಿ ಜ್ಯೋತಿಕುಮಾರ್, ಬೀರಸಂದ್ರ ಸರಕಾರಿ ಶಾಲೆಯ ಮುಖ್ಯ ಶಿಕ್ಷಕ ಎನ್.ನಂಜೇಗೌಡ, ಚಿಕ್ಕೋಬದೇನಹಳ್ಳಿ ಸರಕಾರಿ ಶಾಲೆಯ ಮುಖ್ಯ ಶಿಕ್ಷಕಿ ಶಾಂತಮ್ಮ, ವಿಹಾನ ಪಬ್ಲಿಕ್ ಶಾಲೆಯ ಶಿಕ್ಷಕ ವೃಂದ, ಆಡಳಿತ ಮಂಡಳಿ, ಮಕ್ಕಳು ಹಾಗೂ ಪೋಷಕರು ಇದ್ದರು.
Be the first to comment