ರಾಜ್ಯ ಸುದ್ದಿಗಳು
ದೇವನಹಳ್ಳಿ
ಹಿಂದಿನ ಕಾಲದಲ್ಲಿ ಪೂರ್ವಜರು ಅಶ್ವತ್ಥ್‌ಕಟ್ಟೆಗಳಲ್ಲಿ ಗ್ರಾಮದ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದರು. ಗ್ರಾಮದಲ್ಲಿ ಶಾಂತಿ ನೆಲೆಸಬೇಕಾದರೆ ಅಶ್ವತ್ಥ್‌ಕಟ್ಟೆ ಪಾತ್ರ ಹೆಚ್ಚು ಇದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ಸಿ.ಶ್ರೀನಿವಾಸ್ ತಿಳಿಸಿದರು.ದೇವನಹಳ್ಳಿ ತಾಲೂಕಿನ ಕಾರಹಳ್ಳಿ ಗ್ರಾಮದಲ್ಲಿ ನೂತನ ಅಶ್ವತ್ಥ್‌ಕಟ್ಟೆ ಜೀರ್ಣೋದ್ಧಾರ ಸ್ಥಳದಲ್ಲಿ ಮುಖಂಡರೊಂದಿಗೆ ಚರ್ಚಿಸಿ ಮತ್ತು ಸಹಾಯಧನ ನೀಡಿ ಅವರು ಮಾತನಾಡಿದರು. ಅಶ್ವತ್ಥ್‌ಕಟ್ಟೆ ಎಲ್ಲಿ ಇರುತ್ತದೆಯೋ ಅಲ್ಲಿ ಉತ್ತಮ ಗಾಳಿ ಮತ್ತು ಪರಿಸರ ನಿರ್ಮಾಣವಾಗುತ್ತದೆ. ಹಳ್ಳಿ ಜನರಿಗೂ ಅಶ್ವತ್ಥ್‌ಕಟ್ಟೆಗೂ ಇರುವ ಅನುಭಾವ ಸಂಬಂಧ ಹೇಳಲಾಗುವುದಿಲ್ಲ. ಏನೋ ಒಂದು ಶಕ್ತಿ ಸೆಳೆಯುತ್ತದೆ. ಅಶ್ವತ್ಥ್‌ಕಟ್ಟೆಗಳಲ್ಲಿ ನಾಗರಕಲ್ಲುಗಳನ್ನು ಇಟ್ಟು ಇಂದಿಗೂ ಗ್ರಾಮೀಣ ಭಾಗದ ಜನರು ಪೂಜಿಸುತ್ತಾರೆ. ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ವಿವಿಧ ರೀತಿಯಲ್ಲಿ ಪೂಜಾ ಕೈಂಕರ್ಯಗಳನ್ನು ಜರುಗಿಸುತ್ತಾರೆ. ರಾಮನವಮಿ, ನಾಗರ ಪಂಚಮಿ ಹೀಗೆ ಹಲವು ಹಬ್ಬಗಳಲ್ಲಿ ಅಶ್ವತ್ಥ್‌ಕಟ್ಟೆಗೆ ಪೂಜೆ ಸಲ್ಲಿಸುವುದು ಇಂದಿಗೂ ರೂಢಿಯಲ್ಲಿದೆ. ಇಂತಹ ಅಶ್ವತ್ಥ್‌ಕಟ್ಟೆಗಳ ಜೀರ್ಣೋದ್ಧಾರ ಹೆಚ್ಚಾಗಿ ಆಗಬೇಕು ಎಂದು ಹೇಳಿದರು.
ಕಾರಹಳ್ಳಿ ಗ್ರಾಪಂ ಸದಸ್ಯ ಆರ್.ಜಯರಾಮ್ ಮಾತನಾಡಿ, ಕಾರಹಳ್ಳಿ ಗ್ರಾಮದಲ್ಲಿ ನೂತನ ಅಶ್ವತ್ಥ್ ಕಟ್ಟೆ ನಿರ್ಮಾಣವಾಗುತ್ತಿದ್ದು, ಈಗಾಗಲೇ ಕಾಮಗಾರಿ ಪ್ರಗತಿಯಲ್ಲಿದೆ. ಈ ಹಿಂದೆ ರಸ್ತೆ ಬದಿಯಲ್ಲಿ ಮೂರು ಬೇರೆ ಬೇರೆ ಕಡೆಗಳಲ್ಲಿ ಅಶ್ವತ್ಥ್‌ಕಟ್ಟೆಗಳು ಇದ್ದವು. ರಸ್ತೆ ಅಗಲೀಕರಣದಿಂದಾಗಿ ಕೆಡವಲಾಗಿತ್ತು. ಇದೀಗ ಮೂರು ಅಶ್ವತ್ಥ್‌ಕಟ್ಟೆಗಳನ್ನು ಇಲ್ಲಿಯೇ ಒಂದೇ ಜಾಗದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಕಾಂಗ್ರೆಸ್ ಮುಖಂಡರು ಆಗಮಿಸಿ ಶುಭಹಾರೈಸಿದ್ದಾರೆ ಎಂದರು.
ಈ ವೇಳೆಯಲ್ಲಿ ಗ್ರಾಪಂ ಸದಸ್ಯರಾದ ಕೃಷ್ಣವೇಣಿ ಲಕ್ಷ್ಮೇಗೌಡ, ಸರಳ ಶಶಿಕುಮಾರ್, ಪದ್ಮಮ್ಮ ಚಿನ್ನಪ್ಪ, ಕೆಂಪಣ್ಣ, ಕಾಂಗ್ರೆಸ್ ಮುಖಂಡರಾದ ಚೇತನ್‌ಗೌಡ, ಪ್ರಸನ್ನಕುಮಾರ್, ಹೊಸೂರು ಶ್ರೀನಿವಾಸ್, ಮುಖಂಡರಾದ ಎಸ್.ಮುನೇಗೌಡ, ಜಿ.ಮುನೇಗೌಡ, ಆನಂದ್‌ಕುಮಾರ್, ಜೋಸೇಫ್, ಪಟಾಲಪ್ಪ, ನರಸಿಂಹ ಮತ್ತು ಊರಿನ ಮುಖಂಡರು, ಗ್ರಾಮಸ್ಥರು ಇದ್ದರು.
Be the first to comment