ರಾಜ್ಯ ಸುದ್ದಿಗಳು
ದೇವನಹಳ್ಳಿ
ಕೈಗಾರಿಕಾ ಹೆಸರಿನಲ್ಲಿ ಭೂಸ್ವಾಧೀನ ಮಾಡುತ್ತಿರುವುದರಿಂದ ಕೃಷಿ ಭೂಮಿಗಳಿಗೆ ಹೊಡೆತ ಬೀಳುತ್ತಿದೆ. ರೈತರು ಬೀದಿಗೆ ಬರುವ ಪರಿಸ್ಥಿತಿ ಇದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆದಾಗಿನಿಂದ ಇಲ್ಲಿನ ಭೂಮಿಗೆ ಒಂದಿಷ್ಟು ಬೆಲೆ ಬಂದ ಕಾರಣ ಭೂ ಸ್ವಾಧಿನಕ್ಕೆ ಸಿಲುಕಿ ರೈತರು ನಲುಗುವ ಸ್ಥಿತಿಗೆ ಸರಕಾರಗಳು ತಂದು ಬಿಟ್ಟಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯಾಧ್ಯಕ್ಷ ಮಾವಳ್ಳಿ ಶಂಕರ್ ತಿಳಿಸಿದರು.ತಾಲೂಕಿನ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಆವರಣದಲ್ಲಿ ವಿವಿಧ ಹಕ್ಕೋತ್ತಾಯಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಪರಿಶಿಷ್ಟ ಜಾತಿಗೆ ಸೇರಿದ ಯಶೋಧಮ್ಮ ಎಂಬುವ ಮಹಿಳೆ ಮತ್ತು ಕುಟುಂಬದವರು ಕಳೆದ ೩೦-೪೦ವರ್ಷದಿಂದ ಭೂಮಿಯಲ್ಲಿ ಉಳುಮೆ ಮಾಡಿಕೊಂಡು ಬರುತ್ತಿದ್ದರು. ಆ ಭೂಮಿ ಅವರಿಗೆ ಸೇರಿಲ್ಲ ಎಂದು ಹೇಳಿ ಈ ಹಿಂದಿನ ತಹಶೀಲ್ದಾರ್ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಯಶೋದಮ್ಮಗೆ ಬರುವುದಿಲ್ಲ ಎಂದು ಆದೇಶ ಹೊರಡಿಸಿದ್ದ ಹಿನ್ನಲೆಯಲ್ಲಿ ಡಿಎಸ್‌ಎಸ್ ಹೋರಾಟದ ಫಲವಾಗಿ ಮತ್ತೇ ಯಶೋಧಮ್ಮಗೆ ಭೂಮಿ ಸಿಕ್ಕುವಂತೆ ಆಯಿತು. ಆದರೆ ಅಧಿಕಾರಿ ಶಾಹಿಗಳು ಹಣದಾಹಕ್ಕೆ ತಮ್ಮ ಹಿಡಿತವನ್ನೇ ಕಳೆದುಕೊಳ್ಳುತ್ತಿದ್ದಾರೆ. ಬಡವರನ್ನು ಉಳಿಸುವ ಪ್ರಯತ್ನವನ್ನು ಅಧಿಕಾರಿಗಳಾಗಲೀ, ಸರಕಾರಗಳಾಗಲೀ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರಕಾರಿ ಗೋಮಾಳದ ಜಮೀನಿನಲ್ಲಿ ಕಳೆದ ೩೦-೪೦ ವರ್ಷಗಳಿಂದ ಬಗರ್ ಹುಕ್ಕುಂ ಸಾಗುವಳಿ ಮಾಡುತ್ತಾ, ನಮೂನೆ ೫೦, ೫೩, ೫೭ರಲ್ಲಿ ಅರ್ಜಿಯನ್ನು ಸಲ್ಲಿಸಿಕೊಂಡು ವ್ಯವಸಾಯ ಮಾಡುತ್ತಿರುವ ಸಣ್ಣ ರೈತರಿಗೆ ಭೂಮಿಯನ್ನು ಸಕ್ರಮ ಮಾಡುವ ಬದಲು ಬಿಬಿಎಂಪಿ ವ್ಯಾಪ್ತಿ, ಗೋವುಗಳಿಗೆ ಕಾಯ್ದಿರಿಸಬೇಕು ಇತ್ಯಾದಿ ನೆಪಗಳನ್ನು ಹೇಳಿ ಮಂಜೂರಾತಿಯನ್ನು ಮುಂದೂಡುತ್ತಲೇ ಬಂದಿರುವುದು ರೈತನ ಭೂಮಿಯ ಹಕ್ಕುದಾರಿಕೆಯ ಕನಸು ಹಿಂದಿಗೂ ನನಸಾಗಿಲ್ಲ. ದೊಡ್ಡ ದೊಡ್ಡ ಬಂಡವಾಳ ಶಾಹಿಗಳಿಗೆ ಹಿಗ್ಗಿಲ್ಲದೆ ಮಾರಾಟ ಮಾಡುತ್ತಿದೆ. ತಾಲೂಕಿನ ಜಿಲ್ಲಾಡಳಿತ ಭವನದ ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಲೆ ಬಾಳುವ ಜಮೀನಿನಲ್ಲಿ ಕಲ್ಲುಗಣಿಗಾರಿಕೆ ಹೆಗ್ಗಿಲ್ಲದೆ ನಡೆಯುತ್ತಿದ್ದು, ಎಲ್ಲಾ ಪ್ರಭಾವವನ್ನು ಬಳಸಿ ಕಂದಾಯ, ಗಣಿ ಮತ್ತು ಪೊಲೀಸ್ ಇಲಾಖೆಯ ಕೆಲ ಅಧಿಕಾರಿಗಳನ್ನು ಬಳಸಿಕೊಂಡು ಅನುಭವದಲ್ಲಿರುವ ರೈತರನ್ನು ಒಕ್ಕಲೆಬ್ಬಿಸುವ ಕುತಂತ್ರಗಳು ನಡೆಯುತ್ತಿವೆ ಎಂದು ಆರೋಪಿಸಿದರು.
ಡಿಎಸ್‌ಎಸ್‌ನ ಸಂಜಾಲಕ ಕಾರಹಳ್ಳಿ ಶ್ರೀನಿವಾಸ್ ಮಾತನಾಡಿ, ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿಯ ಕೃಷಿ ಭೂಮಿಯನ್ನು ಭೂ ಸ್ವಾಧೀನ ಪ್ರಕ್ರಿಯೆ ನಡೆಸುವುದನ್ನು ಕೂಡಲೇ ನಿಲ್ಲಿಸಬೇಕು. ರಾಗಿ ಬೆಳೆಯನ್ನು ನಾಶ ಪಡಿಸಿ, ಜೀವ ಬೆದರಿಕೆ ಹಾಕಿರುವ ಈಶ್ವರ್ ಅವರ ವಿರುದ್ಧ ಕೂಡಲೇ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ದಲಿತ ಮಹಿಳೆ ಯಶೋಧಮ್ಮ ಜಮೀನಿನಲ್ಲಿ ವ್ಯವಸಾಯ ಮಾಡಲು ಯಾವುದೇ ತೊಂದರೆ ನೀಡಬಾರದು. ಗ್ರೇ-ಗ್ರಾನೈಟ್ ಗಣಿಗಾರಿಕೆ ಅನುಮತಿ ನೀಡಬಾರದು. ನಮೂನೆ ೫೦, ೫೩, ೫೭ರಲ್ಲಿ ಅರ್ಜಿಯನ್ನು ಸಲ್ಲಿಸಿಕೊಂಡವರಿಗೆ ಕೂಡಲೇ ಜಮೀನು ಮಂಜೂರು ಮಾಡಬೇಕು. ಗಣಿ ಗುತ್ತಿಗೆದಾರರಿಗೆ ಮತ್ತು ಬಂಡವಾಳ ಶಾಹಿಗಳಿಗೆ ತಮ್ಮನ್ನು ಮಾರಿಕೊಂಡಿರುವ ಅಧಿಕಾರಿಗಳನ್ನು ಈ ಕೂಡಲೇ ವರ್ಗಾವಣೆ ಮಾಡಬೇಕು. ಬೈರಪ್ಪನಹಳ್ಳೀ ಗ್ರಾಮದ ಎಸ್‌ಸಿ/ಎಸ್‌ಟಿ ಪಂಗಡದ ೧೫೦ ಕುಟುಂಬಗಳಿದ್ದು, ಸರ್ವೆನಂ.೩೯ರಲ್ಲಿ ಪೊಲೀಸ್ ಇಲಾಖೆಗೆ ನೀಡಿರುವ ಸ್ಮಶಾನದ ಜಾಗ ವಾಪಸ್ಸು ಸಾರ್ವಜನಿಕರಿಗೆ ಸ್ಮಶಾನಕ್ಕಾಗಿ ಮೀಸಲು ಇಡಬೇಕು ಎಂದು ಪ್ರತಿಭಟನೆಯಲ್ಲಿ ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಪ್ರಜಾವಿಮೋಚನಾ ಚಳುವಳಿ ರಾಜ್ಯಾಧ್ಯಕ್ಷ ಮುನಿನಂಜಪ್ಪ, ಡಿಎಸ್‌ಎಸ್ ತಾಲೂಕು ಪ್ರಧಾನ ಸಂಚಾಲಕ ಪಿ.ನರಸಪ್ಪ, ಖಜಾಂಚಿ ಸಿ.ಮುರಳಿ ಸಂಘಟನಾ ಸಂಚಾಲಕರಾದ ಸಿ.ಮುನಿರಾಜ್, ವಿ.ರಮೇಶ್, ಸಿ.ಟಿ.ಮೋಹನ್, ವೇಣುಗೋಪಾಲ್, ಎನ್.ರವಿಕುಮಾರ್, ಗಣೇಶ್.ಸಿ.ಎನ್, ಜಿಲ್ಲಾ ಸಮಿತಿ ಸದಸ್ಯರಾದ ಬೀಸಗಾನಹಳ್ಳಿ ಮೂರ್ತಿ, ತಿಮ್ಮರಾಯಪ್ಪ.ಎಂ, ವೆಂಕಟೇಶಪ್ಪ, ಕೊಯಿರಾ ಮುನಿನರಸಿಂಹಮ್ಮ, ಪ್ರತಿಭಟನಾಕಾರರು ಇದ್ದರು.
Be the first to comment