ರಾಜ್ಯ ಸುದ್ದಿಗಳು
ಕಾರವಾರ
ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಅಧ್ಯಯನ ಕೇಂದ್ರ, ಕರಾವಳಿ ಸಂಶೋಧನೆಯ ರಾಷ್ಟ್ರೀಯ ಕೇಂದ್ರ, ಎನ್‌ಸಿಸಿ ಹಾಗೂ ಕರಾವಳಿ ಕಾವಲು ಪೊಲೀಸರಿಂದ ಶನಿವಾರ ಬೆಳಿಗ್ಗೆ ಅಂತರರಾಷ್ಟ್ರೀಯ ಕರಾವಳಿ ಸ್ವಚ್ಛತಾ ದಿನದ ಅಂಗವಾಗಿ ಸ್ವಚ್ಛತಾ ಕಾರ್ಯ ನಡೆಯಿತು.ಪ್ರತಿವರ್ಷ ಸೆಪ್ಟೆಂಬರ್ 18ರಂದು ಅಂತರರಾಷ್ಟ್ರೀಯ ಕರಾವಳಿ ಸ್ವಚ್ಛತಾ ದಿನವನ್ನು ಆಚರಿಸಲಾಗುತ್ತಿದ್ದು ಅದರಂತೆ ಶನಿವಾರ ದೇಶದ ವಿವಿಧೆಡೆಯ 35 ಕರಾವಳಿ ತೀರಗಳಲ್ಲಿ ವಿವಿಧ ಸಂಘಟನೆಗಳಿಂದ ಸ್ವಚ್ಛತಾ ಕಾರ್ಯ ನಡೆಸಲಾಗಿದೆ. ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು, ಕರಾವಳಿ ಕಾವಲು ಪೊಲೀಸರು ಹಾಗೂ ಎನ್‌ಸಿಸಿ ಕೆಡೆಟ್‌ಗಳು ಕಡಲತೀರದಲ್ಲಿ ಎಸೆಯಲಾಗಿದ್ದ ಪ್ಲಾಸ್ಟಿಕ್, ಮೀನುಗಾರಿಕಾ ಚಟುವಟಿಕೆಗೆ ಬಳಸಿ ಬಿಸಾಡಿದ್ದ ನಿರಪಯುಕ್ತ ವಸ್ತುಗಳನ್ನು ಹಾಗೂ ಗಿಡಗಂಟಿಗಳನ್ನು ತೆಗೆದು ತೀರದಲ್ಲಿ ಸ್ವಚ್ಛ ಮಾಡಿದರು.
114 ಕೆಜಿ ಗಾಜಿನ ಬಾಟಲಿ, 48 ಕೆಜಿ ಪ್ಲಾಸ್ಟಿಕ್, 32 ಕೆಜಿ ಪ್ಲಾಸ್ಟಿಕ್ ಕವರ್, 8 ಕೆಜಿಯಷ್ಟು ಪ್ಲಾಸ್ಟಿಕ್ ಕಪ್, 11 ಕೆಜಿ ಥರ್ಮಾಕೋಲ್, 230 ಕೆಜಿಯಷ್ಟು ಮಿಶ್ರಿತ ಪ್ಲಾಸ್ಟಿಕ್, 37 ಕೆಜಿಯಷ್ಟು ಪ್ಲಾಸ್ಟಿಕ್ ಮತ್ತು ಇತರೆ ಚಪ್ಪಲಿಗಳು, 75 ಕೆಜಿಯಷ್ಟು ಮೀನಿನ ಬಲೆಯ ತ್ಯಾಜ್ಯ, 7 ಕೆಜಿಯಷ್ಟು ಆಟಿಕೆ ಸಾಮಾನುಗಳು, 1 ಕೆಜಿ ಪೆನ್, ತಲಾ 2 ಕೆಜಿಯಷ್ಟು ಶ್ಯಾಂಪೂ ಕವರ್, ಕಾಸ್ಮೆಟಿಕ್ಸ್ ಕವರ್‌ಗಳು, ಪ್ಲಾಸ್ಟಿಕ್ ಬಾಚಣಿಕೆಗಳು, ಟೂತ್ ಬ್ರಶ್, ಟೂತ್ ಪೇಸ್ಟ್ ಕವರ್‌ಗಳು, 1 ಕೆಜಿಯಷ್ಟು ಮಾತ್ರೆಯ ಕವರ್‌ಗಳು, 10 ಕೆಜಿ ಲೋಹದ ಕ್ಯಾನ್‌ಗಳು, 3 ಕೆಜಿಯಷ್ಟು ಆಹಾರ ಪ್ಯಾಕ್ ಮಾಡುವ ಅಲ್ಯುಮಿನಿಯಮ್ ಬಾಕ್ಸ್ಗಳು, 456 ಕೆಜಿಯಷ್ಟು ಸಾಂಪ್ರದಾಯಿಕ ತ್ಯಾಜ್ಯಗಳನ್ನು ಸೇರಿದಂತೆ ಒಂದು ಟನ್‌ನಷ್ಟು ತ್ಯಾಜ್ಯವನ್ನು ಸಂಗ್ರಹಿಸಲಾಗಿದೆ.
ಕವಿವಿ ಸ್ನಾತಕೋತ್ತರ ಕೇಂದ್ರದ ಮುಖ್ಯಸ್ಥ ಡಾ.ಜೆ.ಎಲ್.ರಾಠೋಡ, ಡಾ.ಶಿವಕುಮಾರ್, ಡಾ.ಹನುಮಂತ ಮುಸ್ತಾರಿ, ಡಾ.ಅನು ನಾಯಕ, ಕರಾವಳಿ ಪೊಲೀಸ್ ಇನ್ಸ್ಪೆಕ್ಟರ್ ನಿಶ್ಚಲ್‌ಕುಮಾರ್ ಮುಂತಾದವರು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.
Be the first to comment