ಇಂದು ಬೃಹತ್ ಕೋವಿಡ್ ಲಸಿಕಾ ಅಭಿಯಾನ:75 ಸಾವಿರ ಲಸಿಕೆ ಹಾಕುವ ಗುರಿ : ಡಿಸಿ ರಾಜೇಂದ್ರ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಲಸಿಕೆ ಪಡೆಯಲು ಕಾರ್ಮಿಕರಲ್ಲಿ ಮನವಿ

ಜಿಲ್ಲೆಯಾಧ್ಯಂತ ಸೆಪ್ಟೆಂಬರ 17 ರಂದು ಹಮ್ಮಿಕೊಂಡ ಬೃಹತ್ ಕೋವಿಡ್ ಲಸಿಕಾ ಮೇಳದಲ್ಲಿ ಕಟ್ಟಡ ಕಾರ್ಮಿಕರು, ಅಸಂಘಟಿತ ಕಾರ್ಮಿಕರು ಹಾಗೂ ಎಲ್ಲ ವರ್ಗದ ಕಾರ್ಮಿಕರು ಹಾಗೂ 18 ವರ್ಷ ಮೇಲ್ಪಟ್ಟ ಕುಟುಂಬದ ಸದಸ್ಯರು ಕಡ್ಡಾಯವಾಗಿ ಆಧಾರ ಕಾರ್ಡ ತೆಗೆದುಕೊಂಡು ತಮ್ಮ ಹತ್ತಿರದ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ ಕೋವಿಡ್ ಲಸಿಕೆ ಪಡೆದುಕೊಳ್ಳುವಂತೆ ಜಿಲ್ಲಾ ಕಾರ್ಮಿಕ ಅಧಿಕಾರಿ ಬಿ.ಆರ್.ಜಾದವ ಮನವಿ ಮಾಡಿಕೊಂಡಿದ್ದಾರೆ.

ಬಾಗಲಕೋಟೆ : ಮಹಾಮಾರಿ ಕೋವಿಡ್ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಲಸಿಕೆ ಪಡೆದುಕೊಳ್ಳುವುದು ಅವಶ್ಯವಾಗಿದ್ದು, ಈ ಹಿನ್ನಲೆಯಲ್ಲಿ ಸೆಪ್ಟೆಂಬರ 17 ರಂದು ಜಿಲ್ಲೆಯಾದ್ಯಂತ ಬೃಹತ್ ಲಸಿಕೆ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಒಂದೇ ದಿನದಲ್ಲಿ 75 ಸಾವಿರ ಜನರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.

ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಸೂಚನೆ ಮೇರೆಗೆ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನ್ಮದಿನದ ಅಂಗವಾಗಿ ರಾಜ್ಯಾದ್ಯಂತ ಸೆಪ್ಟೆಂಬರ 17 ರಂದು ಬೃಹತ್ ಲಸಿಕಾ ಮಹಾಮೇಳ ಹಮ್ಮಿಕೊಳ್ಳಲಾಗಿದೆ. ಒಂದೇ ದಿನದಲ್ಲಿ ರಾಜ್ಯದ 30 ಲಕ್ಷ ಜನರಿಗೆ ಉಚಿತ ಲಸಿಕೆ ಹಾಕುವ ಗುರಿ ಹಾಕಿಕೊಳ್ಳಲಾಗಿದೆ. ಬಾಗಲಕೋಟೆ ಜಿಲ್ಲೆಗೆ 75 ಸಾವಿರ ಜನರಿಗೆ ಲಸಿಕೆ ಹಾಕುವ ಗುರಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಲಸಿಕಾಕರಣದ ಗುರಿಯನ್ನು ಕಡ್ಡಾಯವಾಗಿ ತಲುಪುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ತೊಡಗಿಸಿಕೊಳ್ಳಲಾಗುತ್ತಿದೆ. ಮೇಲ್ವಿಚಾರಣೆಗಾಗಿ 69 ಜನ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಕೋವಿಡ್ ಮಹಾಮೇಳದಲ್ಲಿ ಮುಖ್ಯಮಂತ್ರಿಗಳ ನಿರ್ದೇಶನದಂತೆ ವಿಶೇಷವಾಗಿ ಬಡತನ ರೇಖೆಗಿಂತ ಕೆಳಗಿರುವವರು, ಕಟ್ಟಡ ಕಾರ್ಮಿಕರು, ದುಡಿಯುವ ವರ್ಗ, ಅಲ್ಪಸಂಖ್ಯಾತರ ಸಮೂಹ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದೂಳಿದ ಸಮೂಹದಲ್ಲಿ ಲಸಿಕೆ ಪಡೆಯದವರಿಗೆ ಲಸಿಕೆ ಹಾಕಲು ಯೋಜಿಸಲಾಗಿದೆ. ಕಾರ್ಮಿಕ ಸಂಘಟನೆಗಳ ಮುಖಂಡರೊಂದಿಗೆ ಚರ್ಚಿಸಲಾಗಿದ್ದು, ಎಲ್ಲರೂ ಲಸಿಕೆ ಪಡೆದುಕೊಳ್ಳುವಂತೆ ತಿಳಿಸಲಾಗಿದೆ.

ಜಿಲ್ಲೆಯಲ್ಲಿ ಇಲ್ಲಿಯವರೆಗೆ ಶೇ.66 ರಷ್ಟು ಲಸಿಕೆ ನೀಡಲಾಗಿದೆ. ಸೆಪ್ಟೆಂಬರ 15 ರವರೆಗೆ 18 ವರ್ಷ ಮೇಲ್ಪಟ್ಟ 11,98,797 ಜನರಿಗೆ ಕೋವಿಡ್ ಲಸಿಕೆ ನೀಡಲಾಗಿದೆ. ಈ ಪೈಕಿ 9,17,502 ಜನರಿಗೆ ಮೊದಲನೇ ಡೋಸ್, 2,81,295 ಜನರಿಗೆ ಎರಡನೇ ಡೋಜ್ ಸಲಿಕೆ ಪಡೆದುಕೊಂಡಿದ್ದಾರೆ. ಈ ವರೆಗೆ ಒಂದೇ ದಿನದಲ್ಲಿ 49 ಸಾವಿರ ಜನರಿಗೆ ಲಸಿಕೆ ನೀಡುವ ಮೂಲಕ ದಾಖಲೆ ಮಾಡಲಾಗಿದೆ. ಮೊದಲನೇ ಡೋಸ್ ಪಡೆದು ಎರಡನೇ ಡೋಸ್ ಪಡೆಯದೇ ಉಳಿದಿದ್ದು, ಮಹಾಮೇಳದಲ್ಲಿ ಆದ್ಯತೆ ನೀಡಲಾಗುತ್ತಿದೆ. 2ನೇ ಡೋಸ್ ಪಡೆಯದ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಲು ತಿಳಿಸಿದ್ದಾರೆ.

Be the first to comment

Leave a Reply

Your email address will not be published.


*