ಜಿಲ್ಲಾ ಸುದ್ದಿಗಳು
ಬಾಗಲಕೋಟೆ : ಭೂಮಿಯನ್ನು ನೇರಳಾತೀತ ಕಿರಣಗಳಿಂದ ರಕ್ಷಣೆ ಮಾಡುವಲ್ಲಿ ಓಝೋನ್ ಪಾತ್ರ ಮಹತ್ವದ ಪಾತ್ರ ವಹಿಸುತ್ತಿದ್ದು, ಇದರ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದು ಬಿ.ವಿ.ವ ಸಂಘದ ಇಂಜಿನಿಯರಿಂಗ್ ಕಾಲೇಜನ ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥೆ ಡಾ.ಭಾರತಿ ಪಾಟೀಲ ಹೇಳಿದರು.
ವಿದ್ಯಾಗಿರಿಯ ಎಮ್.ಬಿ.ಎ ಕಾಲೇಜಿನ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪ್ರಾದೇಶಿಕ ಕಛೇರಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಬಿವ್ಹಿವ್ಹಿ ಸಂಘದ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಓಝೋನ್ ದಿನಾಚರಣೆ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಮಾನವನ ಅತಿಯಾದ ತಾಂತ್ರಿಕತೆ, ಐಷಾರಾಮಿ ಜೀವನಕ್ಕೆ ಒಗ್ಗಿಕೊಂಡಿದ್ದು, ರೆಫ್ರಿಜಿರೇಟರ್, ಎಸಿ, ಬೃಹತ್ ಕಾರ್ಖಾನೆಗಳಿಂದ ಬರುವ ಹೊಗೆ, ವಾಹನಗಳು ಪರಿಸರಕ್ಕೆ ಬಿಡುವ ದಟ್ಟ ಹೊಗೆ, ಬ್ರೋಮೊಫ್ಲೋರಾ, ಕ್ಲೋರೊಫ್ಲೋರಾ ಕಾರ್ಬನಗಳಿಂದಾಗಿ ಓಝೋನ್ ಪದರು ಹಾನಿಗೆ ಕಾರಣವಾಗುತ್ತಿದೆ. ಇದರಿಂದ ಸೂರ್ಯನ ಕಿರಣಗಳು ನೇರವಾಗಿ ಭೂಮಿಗೆ ಬೀಳುತ್ತಿದ್ದು, ಪರಿಸರ ಹಾಗೂ ಮಾನವನ ಮೇಲೆ ದುಷ್ಪರಿಣಾಮ ಬೀರಲಿದೆ. ಹಾಗಾಗಿ ಓಝೋನ್ ರಕ್ಷಣೆಗೆ ವಿಶ್ವಾದ್ಯಂತ ಜಾಗೃತಿ ಮೂಡಿಸಲು ಈ ದಿನವನ್ನು ವಿಶ್ವ ಒಝೋನ್ ದಿನವನ್ನಾಗಿ ಆಚರಿಸಲಾಗುತ್ತದೆ. ಓಝೋನಿನ ನಾಶ ತಡೆಗಟ್ಟಲು ಜೈವಿಕ ಇಂಧನಗಳ ಬಳಕೆ, ಪರಿಸರ ಸಂರಕ್ಷಣೆ ವಾಯು ಮಾಲಿನ್ಯ ತಡೆಗಟ್ಟುವುದರ ಮೂಲಕ ಓಝೋನ್‍ನ್ನು ಸಂರಕ್ಷಿಸುವುದ ಅವಶ್ಯವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಓಝೋನ್ ದಿನದ ಕುರಿತು ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಪ್ರಮಾಣ ಪತ್ರ ಮತ್ತು ನೆನಪಿನ ಕಾಣಿಕೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಎಂಬಿಎ ಕಾಲೇಜಿನ ಪ್ರಾಚಾರ್ಯಾ ಪ್ರೊ.ಎಸ್.ಎಚ್.ವಟವಟಿ, ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯ ಪ್ರಾಚಾರ್ಯ ಟಿ.ಬಿ.ಕೋರಿಶೆಟ್ಟಿ, ಸೈನ್ಸ್ ಅಸೋಸಿಯೆಷನ್ ಕಾರ್ಯಾಧ್ಯಕ್ಷ ಡಾ.ಶ್ರೀದೇವಿ ಕುಲಕರ್ಣಿ ಮತ್ತಿತ ಗಣ್ಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಅಧೀಕ್ಷಕರಾದ ಅನ್ನಪೂರ್ಣ ಅಥಣಿ ವಂದಿಸಿ, ಸ್ನೇಹಾ ಕಾಡದೇವರ ನಿರೂಪಿಸಿದರು.
Be the first to comment