ಜೋಕುಮಾರ ಬಂದಾನವ್ವ ದವಸ ಧಾನ್ಯ ನೀಡವ್ವ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಉತ್ತರ ಕರ್ನಾಟಕ ಭಾಗದಲ್ಲಿ ಆಚರಿಸಲ್ಪಡುವ ಪ್ರತಿಯೊಂದು ಹಬ್ಬಗಳಿಗೆ ತಮ್ಮದೇ ಆದ ವೈಶಿಷ್ಟ್ಯಮಯ ಹಿನ್ನೆಲೆ ಇದೆ. ಕೆಲವು ಹಬ್ಬ-ಹರಿದಿನಗಳು ಮನರಂಜನೆಯ ಮೂಲಕ ಆಚರಿಸಲ್ಪಡುತ್ತಿದ್ದರೆ ಹಲವು ಸಮಾಜದಲ್ಲಿ ಬೇರುಬಿಟ್ಟಿರುವ ದುಗುಡ, ದುಮ್ಮಾನಗಳನ್ನು ದೂರ ಮಾಡುವಂತಹ ದೇವತೆಗಳಿವೆ.

ಬಾಗಲಕೋಟೆ : ಹುನಗುಂದ ತಾಲೂಕಿನ ಅಮೀನಗಡ ಪಟ್ಟಣದ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರು ಜೋಕುಮಾರನನ್ನು ಕೂರಿಸಿಕೊಂಡು ಅಡ್ಡಾಡುತ್ತಿದ್ದಾರೆ.

ಉತ್ತರ ಕರ್ನಾಟಕದ ಪ್ರಮುಖ ಜಾನಪದ ದೇವರು ಜೋಕುಮಾರನ ಕುರಿತು ಅನೇಕ ಕಥೆಗಳಿವೆ. ಬೆನಕನ ಅಮಾವಾಸ್ಯೆಯ ನಂತರ ಏಳನೇ ದಿನ ಜೋಕುಮಾರನ ಹಬ್ಬ ಆರಂಭವಾಗುತ್ತದೆ. ಈ ಭಾಗದ ಜನರು ಉತ್ತಮ ಮಳೆ, ಬೆಳೆ ಮತ್ತು ಸಮೃದ್ಧಿಯ ನಿಮಿತ್ತ ಜೋಕುಮಾರನ ಪೂಜಿಸುತ್ತಾರೆ. ಗಣೇಶನನ್ನು ಪ್ರತಿಷ್ಠಾಪಿಸಿದ ನಾಲ್ಕನೆಯ ದಿನಕ್ಕೆ ಜನ್ಮ ತಾಳುವ ಜೋಕುಮಾರನನ್ನು ಮಹಿಳೆಯರು ಮಣ್ಣಿನ ಮೂರ್ತಿಯಾಗಿ ರೂಪಿಸುತ್ತಾರೆ.

ನಂತರ ಹೊಸ ಬಿದಿರಿನ ಬುಟ್ಟಿಯಲ್ಲಿ ಜೋಕುಮಾರನ ಪ್ರತಿಷ್ಠಾಪಿಸುತ್ತಾರೆ. ಅವನನ್ನು ಬೇವಿನ ಎಲೆಗಳಿಂದ ಶೃಂಗರಿಸುತ್ತಾರೆ. ನಂತರ ಮಹಿಳೆಯರು ಬುಟ್ಟಿಯನ್ನು ತಲೆಯ ಮೇಲಿಟ್ಟುಕೊಂಡು ಊರಿನ ಪ್ರಮುಖ ಗಲ್ಲಿಗಳಿಗೆ ಹೊತ್ತುಕೊಂಡು ಹೋಗುತ್ತಾರೆ. ಮನೆಯ ಕಟ್ಟೆಯ ಮೇಲಿಟ್ಟು ಜೋಕುಮಾರನ ಹಾಡುಗಳ ಹಾಡುತ್ತಾರೆ.

ಇಲ್ಲಿ ಜೋಕುಮಾರನ ಹಾಡುಗಳು ಜಾನಪದ ಶೈಲಿಯಲ್ಲಿವೆ. ಈ ಎಲ್ಲ ಹಾಡುಗಳನ್ನು ಓದಲು ಬರೆಯಲು ಬಾರದ ಮಹಿಳೆಯರು ಸಹ ಹಾಡುತ್ತಾರೆ. ಈ ಹಾಡುಗಳಿಗೆ ಅದರದೇ ಆದ ಪದ್ಧತಿ ಇದೆ. ಈ ಹಾಡುಗಳು ಕೂಡ ಅತ್ಯಂತ ವಿಶಿಷ್ಠವಾಗಿವೆ.

‘ಅಡ್ಡಡ್ಡ ಮಳೆ ಬಂದ, ದೊಡ್ಡ ದೊಡ್ಡ ಕೆರೆ ತುಂಬಿ, ಗೊಡ್ಡುಗಳೆಲ್ಲ ಹೈನಾಗಿ ಜೋಕುಮಾರ, ಮಡಿವಾಳರ ಕೇರಿ ಹೊಕ್ಕಾನ ಜೋಕುಮಾರ ಮುಡಿ ತುಂಬ ಹೂವ ಮುಡಿದಂತೆ ಚೆಲುವಿ ತನ್ನ ಮಡದಿಯಾಗೆಂದ ಸುಕುಮಾರ’ ಈ ರೀತಿಯ ವಿಶೇಷವಾದ ಹತ್ತಾರು ಹಾಡುಗಳನ್ನು ಹಾಡುತ್ತಾರೆ.

ನಂತರ ಮೊರದಲ್ಲಿ ಅಕ್ಕಿ, ಜೋಳ, ಸಜ್ಜಿ, ಗೋಧಿ ಸೇರಿದಂತೆ ಆಹಾರ ಸಾಮಗ್ರಿಗಳನ್ನು ನೈವೇದ್ಯ ರೂಪದಲ್ಲಿ ನೀಡುತ್ತಾರೆ. ಜೋಕುಮಾರನ ತುಟಿಗೆ ಹಚ್ಚಲಾದ ಬೆಣ್ಣೆಯನ್ನು ಕಪ್ಪು ಅಣ್ಣ ಮುಚ್ಚು ಬೇವಿನ ಎಲೆಗೆ ಹಚ್ಚಿ ಮೊರದಲ್ಲಿ ಪ್ರಸಾದದ ಜೊತೆಗೆ ನೀಡುತ್ತಾರೆ.

Be the first to comment

Leave a Reply

Your email address will not be published.


*