1995ರ ನಂತರ ಪ್ರಾರಂಭವಾದ ಶಾಲಾ ಕಾಲೇಜುಗಳನ್ನು ಅನುದಾನಕ್ಕೊಳಪಡಿಸುವಂತೆ ಒತ್ತಾಯಿಸಿ ವಿಭಾಗ ಮಟ್ಟದ ಸಮಾಲೋಚನಾ ಸಭೆ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ: (ಮುಧೋಳ) ಬೆಳಗಾವಿ ವಿಭಾಗ ಮಟ್ಟದ ಅನುದಾನರಹಿತ ಶಿಕ್ಷಣ ಸಂಸ್ಥೆಗಳ ವಿವಿಧ ಬೇಡಿಕೆಗಳನ್ನು ಹಾಗೂ 1995ರ ನಂತರದಲ್ಲಿ ಪ್ರಾರಂಭವಾದ ಕನ್ನಡ ಮಾಧ್ಯಮ ಪ್ರೌಢ ಶಾಲಾ, ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸಬೇಕು ಎಂದು ಒತ್ತಾಯಿಸಿ ಸೆಪ್ಟೆಂಬರ್ 18ರಂದು ಮುಧೋಳದ ಜಮಖಂಡಿ ರಸ್ತೆಯಲ್ಲಿರುವ  ಪಾರ್ಕ್ ಹೊಟೇಲ್ ಸಭಾಭವನದಲ್ಲಿ ಬೆಳಗಾವಿ ವಿಭಾಗ ಮಟ್ಟದ ಸಮಾಲೋಚನಾ ಸಭೆಯನ್ನು ಏರ್ಪಡಿಸಲಾಗಿದೆ ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳ ಹೋರಾಟ ಸಮನ್ವಯ ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ವಿ.ಹಿರೇಮಠ್ ಹೇಳಿದರು.

ಗುರುವಾರ ಮುಧೋಳ ನಗರದ ಕಾನಿಪಕ ಕಾರ್ಯಾಲಯದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಹೋರಾಟ ಸಮನ್ವಯ ಸಮಿತಿ ಹಾಗೂ ತಾಲ್ಲೂಕಾ ಅನುದಾನ ರಹಿತ ಶಾಲೆಗಳ ಮುಖ್ಯೋಪಾಧ್ಯಾಯರ ಸಂಘದ ಆಶ್ರಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಪ್ರಮುಖ ಬೇಡಿಕೆಗಳು:
1) 1995ರ ನಂತರ ಪ್ರಾರಂಭಿಸಲ್ಪಟ್ಟ ಪ್ರಾಥಮಿಕ, ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ನೀಡುವುದು.
2) ಮೂಲಭೂತ ಸೌಲಭ್ಯಗಳನ್ನು ಹೊಂದಿದ ಶಾಲೆಗಳಿಗೆ ಶಾಶ್ವತ ಮಾನ್ಯತೆ ನವೀಕರಣ ನೀಡುವುದು.
3) ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೂ ಉಚಿತ ಪಠ್ಯಪುಸ್ತಕ ನೀಡುವುದು.
4) ಖಾಸಗಿ ಶಾಲಾ ಶಿಕ್ಷಕರಿಗೂ ಜ್ಯೋತಿಸಂಜೀವಿನಿ ವಿಸ್ತರಿಸುವುದು.

ವಿಭಾಗ ಮಟ್ಟದ ಈ ಸಭೆಯಲ್ಲಿ ರುಪ್ಸಾ ಸಂಘಟನೆಯ ರಾಜ್ಯಾಧ್ಯಕ್ಷ ಲೋಕೇಶ ತಾಳಿಕಟ್ಟಿ, ನಮ್ಮ ಕಲ್ಯಾಣ ಕರ್ನಾಟಕದ ರಾಜ್ಯ ಅಧ್ಯಕ್ಷ ಸುನಿಲ್ ಉಟಗಿ,ಸೇರಿದಂತೆ ಬೆಳಗಾವಿ ವಿಭಾಗ ಮಟ್ಟದ ಮುಖಂಡರು ಭಾಗಿಯಾಗಲಿದ್ದಾರೆ ಎಂದು ಹೇಳಿದರು.

Be the first to comment

Leave a Reply

Your email address will not be published.


*