ರಾಜ್ಯ ಸುದ್ದಿಗಳು
ದೇವನಹಳ್ಳಿ:
ತಾಲೂಕಿನ ತೈಲಗೆರೆ ಗ್ರಾಮದ ಸರ್ವೆ ನಂ.೧೧೦ರಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಸ್ಥಳದಲ್ಲಿ ರೈತರ ಪ್ರತಿಭಟನೆ ಸುದ್ದಿಯಾಗುತ್ತಿದ್ದಂತೆ, ಭಾನುವಾರದಂದು ಬರುತ್ತೇನೆಂದು ಹೇಳಿ, ದಿಡೀರ್ ಶುಕ್ರವಾರದಂದೆ ಗಣಿ ಮತ್ತು ಭೂವಿಜ್ಞಾನ ಸಚಿವ ಹಾಲಪ್ಪ ಬಸಪ್ಪ ಆಚಾರ್ ಬೆಳ್ಳಂ ಬೆಳಿಗ್ಗೆ ಸ್ಥಳ ಪರಿಶೀಲನೆ ನಡೆಸಿದರು.
ನಂತರ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ಕರೆದು, ಅಧಿಕಾರಿಗಳೊಂದಿಗೆ ಚರ್ಚಿಸಿದರು. ಕಲ್ಲು ಗಣಿಗಾರಿಕೆಗೆ ಸಂಬಂಧಿಸಿದ ಸರಕಾರದ ಏನೇ ನಿರ್ದೆಶನಗಳು ಮತ್ತು ನಿಬಂಧನೆಗಳು ಇದ್ದರೂ ಚಾಚೂ ತಪ್ಪದೇ ನಡೆಸಿಕೊಂಡು ಹೋಗಬೇಕು. ಅಧಿಕಾರಿಗಳು ವಾಸ್ತವದಲ್ಲಿ ರೈತರಿಗೆ ಅನ್ಯಾಯವಾಗದಂತೆ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಕಲ್ಲುಗಣಿಗಾರಿಕೆ ನಡೆಯುವ ಪ್ರದೇಶದ ರಸ್ತೆಗಳು ಹಾಳಾಗದಂತೆ ಉತ್ತಮ ರಸ್ತೆ ನಿರ್ಮಾಣ ಮಾಡಿಕೊಳ್ಳಬೇಕು. ವಾತಾವರಣಕ್ಕೆ ತೊಂದರೆಯಾಗದಂತೆ ಸಕಾಲದಲ್ಲಿ ಮಾಹಿತಿ ಪಡೆಯುವಂತಾಗಬೇಕು. ಲೈಸನ್ಸ್ ಕೊಟ್ಟರೆ ಸಾಲದು, ನಿಬಂಧನೆಗಳ ಪಾಲನೆ ಆಗುತ್ತಿದೆಯೇ ಇಲ್ಲವೆ ಎಂಬುವುದರ ಬಗ್ಗೆ ಪರಿಶೀಲನೆ ನಡೆಸಬೇಕು. ಗಣಿಗಾರಿಕೆಯಿಂದ ಅಕ್ಕಪಕ್ಕದ ರೈತರ ಜಮೀನುಗಳಿಗೆ ಧೂಳು ಮುಕ್ಕರಿಸುತ್ತಿದೆ ಎಂಬ ಮಾಹಿತಿ ಇದೆ. ಧೂಳು ಗಣಿಗಾರಿಕೆ ಪ್ರದೇಶ ಬಿಟ್ಟು ಹೊರಗಡೆ ಹೋಗದಂತೆ ಏನು ನಿಯಮಗಳು ಇವೆ ಅದನ್ನು ಸರಿಯಾಗಿ ಪಾಲನೆ ಮಾಡಬೇಕಾಗುತ್ತದೆ. ಓವರ್‌ಲೋಡ್ ಮಾಡಿಕೊಂಡು ರಸ್ತೆಗೆ ವಾಹನಗಳು ಇಳಿಯದಂತೆ ಇಲಾಖೆ ಎಚ್ಚರವಹಿಸಬೇಕು. ಓವರ್‌ಲೋಡ್ ಕಂಡುಬಂದರೆ ಸೂಕ್ತ ಕ್ರಮಕೈಗೊಳ್ಳಬೇಕು. ಇಲಾಖೆಯಲ್ಲಿ ನಿಯಮಗಳ ಪ್ರಕಾರ ಯಾವ ಕ್ರಮಕೈಗೊಂಡಿದ್ದೀರ ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಒಂದು ಕೈಗಾರಿಕೆ ನಡೆಸಬೇಕಾದರೆ, ಅಲ್ಲಿ ಎಲ್ಲಾ ರೀತಿಯ ಮೂಲಭೂತ ಸೌಕರ್ಯಕ್ಕೆ ಒತ್ತು ನೀಡಬೇಕಾಗುತ್ತದೆ. ಕೇವಲ ಗಣಿಗಾರಿಕೆ ನಡೆಸಿಕೊಂಡು ಬಂಡೆ ಕೊರೆದರೆ ಸಾಲದು, ರಸ್ತೆಗಳ ಅಭಿವೃದ್ಧಿಗೊಳಿಸಬೇಕು. ಬಂಡೆ ಕೆಲಸ ಮಾಡುವವರು ಸುತ್ತಮುತ್ತಲು ಏನು ತೊಂದರೆಯಾಗದಂತೆ ಎಚ್ಚರಿಕೆಯಿಂದ ಮಾಡಬೇಕು. ವೇ-ಬ್ರಿಡ್ಜ್ ಇರಬೇಕು. ವಾಹನಗಳು ಒಳಗೆ-ಹೊರಗೆ ಹೋಗಲು ಏಕ ರಸ್ತೆ ಮಾಡಿರಬೇಕು. ಬ್ಲಾಸ್ಟಿಂಗ್ ಮಾಡಬೇಕಾದರೆ, ತಜ್ಞರನ್ನು ನೇಮಿಸಿದ್ದಾರೆಯೇ ಎಂಬುವುದರ ಬಗ್ಗೆ ಮಾಹಿತಿ ಪಡೆಯಬೇಕು. ಕ್ವಾರೆ ನಡೆಯುವ ಸ್ಥಳದಲ್ಲಿ ಎಲ್ಲಾ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಬೇಕು. ಡಸ್ಟ್-ಕಂಟ್ರೋಲ್ ಆಗಬೇಕಾದರೆ ಏನೆಲ್ಲಾ ಕ್ರಮ ಕೈಗೊಳ್ಳಬೇಕಾಗುತ್ತದೆ. ಈವರೆಗೆ ನಡೆದಿರುವ ವಿಸ್ಕೃತ ವರದಿಯನ್ನು ನೀಡುವಂತೆ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯನ್ನು ಮುಗಿಸಿ ಹೊರಗಡೆ ಬರುತ್ತಿದ್ದಂತೆ, ತೈಲಗೆರೆ ಸುತ್ತಮುತ್ತಲಿನ ರೈತರು ಸಚಿವರಿಗೆ ತಮ್ಮ ಜಮೀನಿನಲ್ಲಿ ಬೆಳೆ ಇಡಲಾಗುತ್ತಿಲ್ಲ. ಸರಕಾರಕ್ಕೆ ಗಣಿಗಾರಿಕೆಯಿಂದಾಗಿ ಸಾಕಷ್ಟು ನಷ್ಟವನ್ನು ಮಾಡುತ್ತಿದ್ದಾರೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ೨೫ ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ಕಲ್ಲುಗಣಿಗಾರಿಕೆ ನಡೆಸಬಾರದೆಂದು ಆದೇಶ ಇದ್ದರೂ ಸಹ ಆದೇಶವನ್ನು ಗಾಳಿಗೆ ತೂರಿದ್ದಾರೆ. ಅಧಿಕಾರಿಗಳು ಹಣದಾಹಿಗಳಾಗಿದ್ದಾರೆ. ಪ್ರಶ್ನಿಸಿದರೆ, ದಬ್ಬಾಳಿಕೆ ಮಾಡುತ್ತಾರೆ ಮತ್ತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುತ್ತಾರೆ. ಸ್ವಾಮಿ ನಮಗೆ ಕೃಷಿ ಮಾಡಲು ಬಿಡಿ, ಇಲ್ಲವಾದರೆ ಆ ಜಾಗವನ್ನು ಗಣಿಗಾರಿಕೆ ಪ್ರದೇಶಕ್ಕೆ ಬಳಸಿಕೊಳ್ಳಿ ನಮಗೆ ಪರಿಹಾರವಾದರೂ ಕೊಡಿಸಿ. ಸಾಕಷ್ಟು ರೈತರು ಇದರಿಂದ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಕೊಯಿರ ಚಿಕ್ಕೇಗೌಡ ನೇತೃತ್ವದಲ್ಲಿ ರೈತರು ತಮ್ಮ ಅಳಲನ್ನು ತೋಡಿಕೊಂಡರು.
ಈ ವೇಳೆಯಲ್ಲಿ ಸರಕಾರದ ಕಾರ್ಯದರ್ಶಿ ಪಂಕಜ್‌ಕುಮಾರ್ ಪಾಂಡೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕ ಪಿ.ಎನ್.ರವೀಂದ್ರ, ರಾಜ್ಯ ಖನಿಜ ಆಡಳಿತ ಉಪನಿರ್ದೇಶಕಿ ಲಕ್ಷ್ಮಮ್ಮ, ಡಿಜಿಎಂಎಸ್ ನಿರ್ದೇಶಕರು, ಅಪರ ಜಿಲ್ಲಾಧಿಕಾರಿ ವಿಜಯರವಿಕುಮಾರ್, ಜಿಲ್ಲಾ ಉಪನಿರ್ದೇಶಕಿ ರೇಣುಕಾ, ತೋಟಗಾರಿಕಾ ಇಲಾಖೆ ಡಿಡಿ ಮಹಂತೇಶ್ ಮುರುಗೋಡ್, ರೇಷ್ಮೆ ಇಲಾಖೆ ಡಿಡಿ ಪ್ರಭಾಕರ್, ವಲಯ ಅರಣ್ಯ ಇಲಾಖಾಧಿಕಾರಿ ಧನಲಕ್ಷ್ಮೀ, ಪಿಡಬ್ಲ್ಯೂಡಿ ಕೃಷ್ಣಪ್ಪ, ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು, ಪೊಲೀಸ್ ಇಲಾಖೆಯ ಅಧಿಕಾರಿಗಳು, ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.
Be the first to comment