ಹೊನ್ನಾವರದ ವೈದ್ಯ ಡಾ.ವಿಶ್ವನಾಥ್ ಶೆಟ್ಟಿ ನಿಧನ

ವರದಿ: ಸುಚಿತ್ರಾ ನಾಯ್ಕ, ಹೊನ್ನಾವರ

ಜಿಲ್ಲಾ ಸುದ್ದಿಗಳು 

ಹೊನ್ನಾವರ:

CHETAN KENDULI

ಬಡಜನರ ಪಾಲಿನ ಆಶಾಕಿರಣ, ಬುಲೆಟ್ ಏರಿ ಬರುತ್ತಿದ್ದ ಶೆಟ್ಟಿ ಡಾಕ್ಟರ್ ಎಂದೇ ಪ್ರಖ್ಯಾತಿ ಪಡೆದ ಡಾ ವಿಶ್ವನಾಥ್ ಶೆಟ್ಟಿಯವರ(79) ಬ್ರೇನ್ ನಿಷ್ಕ್ರೀಯಗೊಂಡು ನಿನ್ನೆ ಇಹಲೋಕ ತ್ಯಜಿಸಿದ್ದಾರೆ. ಮೂಲತಃ ಉಡುಪಿಯವರಾದ ಇವರು 40 ದಶಕಗಳ ಹಿಂದೆ ಮಂಕಿಯಲ್ಲಿ ನೆಲೆಸಿ ಬಡವರ ಯೋಗಕ್ಷೇಮ ವಿಚಾರಿಸಿ ಅವರಿಗೆ ಸರಿಯಾದ ಚಿಕಿತ್ಸೆ ನೀಡಿ ಬಡಜನರ ಕಾಯಿಲೆ ಕಸಾಲೆಗಳನ್ನು ಗುಣ ಪಡಿಸುತ್ತಿದ್ದರು. ಗಾಡಿಗಳೇ ಇಲ್ಲದ ಆ ಕಾಲದಲ್ಲಿ ಬುಲೆಟ್ ಏರಿ ಹಗಲು, ರಾತ್ರಿ ಎನ್ನದೇ ಬಡ ಜನರ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಹಳ್ಳಿ ಜನರ ಮನೆಮಾತಾಗಿದ್ದರು.

ಕೆಳಗಿನೂರು, ಕಾಸರಕೋಡು, ಮಂಕಿ, ದಬ್ಬೋಡು, ಚಿತ್ತಾರ, ಆಡುಕಳ, ಈ ಕಡೆಗಳಲ್ಲಿ ಬುಲೆಟ್ ಶಬ್ದ ಕೇಳಿ ಬಂತು ಎಂತಾದರೆ ಊರಲ್ಲಿ ಯಾರಿಗೋ ಆರಾಮಿಲ್ಲ ಎನ್ನುವುದು ಪಕ್ಕಾ ಆಗಿ ಬಿಡುತ್ತಿತ್ತು. ಕೊರೊನಾ ಕಾಲಿಟ್ಟ ಸಂದರ್ಭದಲ್ಲಿ ವೈದ್ಯ ಲೋಕವೇ ದೂರ ನಿಲ್ಲುವ ಸಮಯದಲ್ಲಿ ಬೆಚ್ಚದೇ, ಬೆದರದೆ, ಲಾಭಕ್ಕಾಗಿ ಜನರನ್ನು ಬಳಸಿಕೊಳ್ಳದೆ ನಿರಂತರ ಬಡಜನರ ಸೇವೇ ಮಾಡುತ್ತಿದ್ದವರೇ ನಮ್ಮ ಶೆಟ್ಟಿ ಡಾಕ್ಟರ್. ಜೀವಿತದ ಬಹು ಕಾಲವನ್ನು ಮಂಕಿಯಲ್ಲೇ ಕಳೆದಿದ್ದರು. ಮನೆ ಮನೆಗೂ ಹೋಗಿ ಬಡಜನರಿಗೆ ಚಿಕಿತ್ಸೆ ನೀಡಿದ ಶೆಟ್ಟಿ ಡಾಕ್ಟರು ಎಂದಿಗೂ ಹಳ್ಳಿ ಜನರ ಮನಸ್ಸಿನಲ್ಲಿ ಅಜರಾಮರವಾಗಿ ಉಳಿಯುವಂತಾಗಿದೆ. ಜನರ ನೋವುಗಳಿಗೆ ಸ್ಪಂದಿಸುತ್ತ ಇಲ್ಲಿನವರೇ ಆಗಿದ್ದ ಶೆಟ್ಟಿ ಡಾಕ್ಟರ್ ಅಲ್ಪ ಕಾಲದ ಅನಾರೋಗ್ಯದಿಂದ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಾಗಿದ್ದರು. ದುರದೃಷ್ಟವಶಾತ್ ಚಿಕಿತ್ಸೆಗೆ ಸ್ಪಂದಿಸದೆ ಬ್ರೇನ್ ನಿಷ್ಕ್ರೀಯಗೊಂಡು ನಿಧನ , ಬುಲೆಟ್ ಏರಿ ಬರುತ್ತಿದ್ದ ಸಂಚಾರಿ ವೈದ್ಯರು ಇನ್ನಿಲ್ಲವಾಗಿದ್ದಾರೆ.

 

Be the first to comment

Leave a Reply

Your email address will not be published.


*