ಜಿಲ್ಲಾ ಸುದ್ದಿಗಳು
ಕುಮಟಾ
ತಾಲೂಕಿನ ಅಳಕೋಡ ಗ್ರಾ.ಪಂ ವ್ಯಾಪ್ತಿಯ ಶಿರಗುಂಜಿಯಲ್ಲಿ ರಸ್ತೆಯ ಪಕ್ಕದ ಸರ್ಕಾರಿ ಜಾಗ ಜನರಿಂದ ಅತಿಕ್ರಮಣವಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಇದನ್ನೆಲ್ಲಾ ನೋಡುತ್ತಿದ್ದರೂ ಅಧಿಕಾರಿಗಳು ಯಾಕೆ ಸುಮ್ಮನಿದ್ದಾರೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಸಹಜವಾಗಿ ಮೂಡಿದೆ.
ಶಿರಗುಂಜಿಗೆ ತೆರಳುವ ಮಾರ್ಗದ ರಸ್ತೆ ಪಕ್ಕದಲ್ಲಿ ಈಗಾಗಲೇ ಮೂರ್ನಾಲ್ಕು ಗೂಡಂಗಡಿಗಳು ಅತಿಕ್ರಮಣ ಜಾಗದಲ್ಲಿ ನಿರ್ಮಾಣವಾಗಿದ್ದು, ಈಗ ಮತ್ತೊಂದು ಅಂಗಡಿ ತಲೆ ಎತ್ತಲು ಸಿದ್ಧವಾಗುತ್ತಿದೆ. ಸರ್ಕಾರಿ ಜಾಗ ಅತಿಕ್ರಮಣವಾಗುವುದನ್ನು ತಡೆಯಲು ರಾಜ್ಯ ಸರ್ಕಾರ ಕಠಿಣ ಕಾನೂನು ಕ್ರಮ ಜಾರಿಗೊಳಿಸಿದ್ದರೂ, ಕ್ಯಾರೇ ಎನ್ನದ ಸಾರ್ವಜನಿಕರು, ಪ್ರತಿನಿತ್ಯ ಅತಿಕ್ರಮಣ ಮಾಡುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳದೇ ಮೌನ ವಹಿಸುತ್ತಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.
ಅತಿಕ್ರಮಣದ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಬಳಿ ಪ್ರಶ್ನಿಸಿದರೆ, ರಸ್ತೆಯ ಪಕ್ಕದ ಜಾಗ ಲೊಕೋಪಯೋಗಿ ಇಲಾಖೆಯ ಅಧೀನದಲ್ಲಿ ಬರುತ್ತದೆ. ಇದಕ್ಕಾಗಿ ನಾವು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎನ್ನುತ್ತಾರೆ. ಲೊಕೋಪಯೋಗಿ ಇಲಾಖೆಯ ಅಧಿಕಾರಿಗಳನ್ನು ಕೇಳಿದರೆ ಅರಣ್ಯ ಇಲಾಖೆಯ ಜಾಗ ಅವರು ತೆರವುಗೊಳಿಸಬೇಕು ಎಂಬ ಹಾರಿಕೆ ಉತ್ತರ ನೀಡುತ್ತಾರೆ. ಸರ್ಕಾರಿ ಜಾಗ ದಿನಂಪ್ರತಿ ಅತಿಕ್ರಮಣವಾಗುತ್ತಿದ್ದರೂ ಈ ಎರಡೂ ಇಲಾಖೆ ಅಧಿಕಾರಿಗಳು ತಮಗೆ ಸಂಬಂಧಿಸಿಲ್ಲ ಎನ್ನುತ್ತಲೇ ಬಂದಿದ್ದಾರೆ.
ರಸ್ತೆಯ ಪಕ್ಕದ ಜಾಗವನ್ನು ಅತಿಕ್ರಮಣ ಮಾಡಿ ಗೂಡಂಗಡಿಗಳ ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. ಮೊದಲು ತಾತ್ಕಾಲಿಕವಾಗಿ ಅಂಗಡಿಗಳನ್ನು ನಿರ್ಮಾಣ ಮಾಡುತ್ತಾರೆ. ನಂತರ ಶಾಶ್ವತವಾಗಿ ಕಲ್ಲಿನಿಂದ ನಿರ್ಮಿಸಿಕೊಂಡು ಅಕ್ರಮವಾಗಿ ಮನೆ ನಂಬರ್ ಪಡೆದು ಅಲ್ಲಿಯೇ ತಳವೂರುತ್ತಾರೆ. ಆಗ ತೆರವುಗೊಳಿಸಲು ಸಾಧ್ಯವಿಲ್ಲ. ಅತಿಕ್ರಮಣ ಕಂಡು ಬಂದಲ್ಲಿ ತಕ್ಷಣ ಅಧಿಕಾರಿಗಳು ತೆರವುಗೊಳಿಸಲು ಮುಂದಾಗಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.
ಅಕ್ರಮ ಮದ್ಯ ಮಾರಾಟ?
ಶಿರಗುಂಜಿ ರಸ್ತೆಯ ಪಕ್ಕದಲ್ಲಿ ಗೂಡಂಗಡಿಗಳಲ್ಲಿ ಅಕ್ರಮ ಮದ್ಯ ಸೇರಿದಂತೆ ಮತ್ತಿತರ ಅಕ್ರಮ ಚಟುವಟಿಕೆಗಳು ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಮೊದಲು ಚಹಾ, ಕಿರಾಣಿಗಳನ್ನು ಮಾರಾಟ ಮಾಡುತ್ತಾರೆ. ನಿಧಾನವಾಗಿ ಮದ್ಯ ಮಾರಾಟವನ್ನು ಪ್ರಾರಂಭಿಸುತ್ತಾರೆ. ಈ ಎಲ್ಲ ಅಕ್ರಮ ಚಟುವಟಿಕೆಗಳಿಗೆ ಅಧಿಕಾರಿಗಳು ಕಡಿವಾಣ ಹಾಕಬೇಕು ಎಂಬ ಒತ್ತಾಯ ಸಾರ್ವಜನಿಕರದ್ದಾಗಿದೆ.
Be the first to comment