ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಂಕೇತ ಮೊಹರಂ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ: (ಕೆಲೂರ)ಪ್ರಸ್ತುತ ಸಮಾಜದಲ್ಲಿ ಜಾತಿ ಜಾತಿಗಳ ಧರ್ಮ ಧರ್ಮಗಳ ಮಧ್ಯೆ ಒಂದಿಲ್ಲೊಂದು ಕಾರಣಕ್ಕಾಗಿ ಸಂಘರ್ಷದ ಸುದ್ದಿಗಳನ್ನು ನಾವೆಲ್ಲ ಕೇಳುವುದು ಸಾಮಾನ್ಯವಾಗಿದೆ ಫೇಸ್ಬುಕಲ್ಲಿ ಧರ್ಮಗಳ ಅವಹೇಳನದಿಂದ ಒಬ್ಬರ ಮೇಲೊಬ್ಬರು ಹಲ್ಲು ಮಸೆಯುವುದು ಹೊಸದೇನಲ್ಲ ಆದರೆ ಇಲಕಲ್ಲ ತಾಲ್ಲೂಕು ಕೆಲೂರ ಎಂಬ ಗ್ರಾಮದಲ್ಲಿ ಎಲ್ಲಾ ಸಮುದಾಯದವರು ಜಾತಿ ಜನಾಂಗವನ್ನು ಮರೆತು ಮುಂಚೂಣಿಯಲ್ಲಿ ನಿಂತು ಊರ ಹಬ್ಬ ಆಚರಿಸುವುದುಸೌ ಹಾರ್ದತೆಗೆ ಸಾಕ್ಷಿಯಾಗಿದೆ.

ಏನಿದು ಸೌಹಾರ್ದತೆ ಅಂತೀರಾ ಸದ್ಯಕ್ಕೆ ಈ ಗ್ರಾಮದಲ್ಲಿ ಹಿಂದೂ ಮುಸ್ಲಿಮರಲ್ಲಿ ಯಾವುದೇ ಭೇದಭಾವ ಇಲ್ಲವೆ ಇಲ್ಲ ಮುಸ್ಲಿಮರು ಹಿಂದೂಗಳನ್ನು ತಮ್ಮ ಹಬ್ಬಗಳಿಗೆ ಮನೆಯ ಸದಸ್ಯರಂತೆ ಕರೆಯುತ್ತಾರೆ. ಹಾಗೂ ಹಿಂದೂಗಳು ಕೂಡ ತಮ್ಮ ಧರ್ಮದ ಹಬ್ಬಗಳಿಗೆ ಮುಸ್ಲಿಮರನ್ನು ತಮ್ಮ ಮನೆಯ ಸದಸ್ಯರಂತೆ ಕರೆಯುತ್ತಾರೆ ಹೀಗಾಗಿ ಇಲ್ಲಿ ಯಾವುದೇ ಜಾತಿ ಜನಾಂಗದ ಭೇದಭಾವವಿಲ್ಲದೆ ಇಲ್ಲಿಯ ಜನರು ತಾವೆಲ್ಲರೂ ಸಾಮರಸ್ಯದಿಂದ ಕೂಡಿ ಬಾಳುತ್ತಿದ್ದಾರೆ.

ಹೌದು ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಂಕೇತವಾದ ಮೊಹರಂ ಹಬ್ಬವು ಕೆಲೂರ ಗ್ರಾಮದಲ್ಲಿ ಪ್ರಾಮುಖ್ಯತೆಯನ್ನು ಪಡೆದಿದೆ. ಮೊಹರಂ ಆಚರಣೆಯ ಸಂದರ್ಭದಲ್ಲಿ ಮಸೀದಿಯ ಎದುರು ಆಳವಾದ ಗುಂಡಿ ತೊಡುತ್ತಾರೆ ಇದೆ ಅಲಾವಿ ಕುಣಿ. ಮೊಹರಂ ತಿಂಗಳ 9ನೇಯ ರಾತ್ರಿ ಅಲಾವಿ ಕುಣಿಗೆ ಕಟ್ಟಿಗೆ ಹಾಕಿ ಅಗ್ನಿ ಹೊತ್ತಿಸುತ್ತಾರೆ. ಮೊಹರಂ ಘಟನೆಗೆ ಸಂಬಂಧಿಸಿದ ಪದಗಳನ್ನು ಹೇಳುತ್ತ ಅದರ ಸುತ್ಯ ತಿರುಗುತ್ತಾರೆ ಈ ಪದಗಳನ್ನು ಅಲಾವಿ ಪದಗಳು ಎಂದು ಕರೆಯುತ್ತಾರೆ.

ಇದೆಲ್ಲದರ ಜೊತೆಗೆ ತಮ್ಮದೇ ಆದ ವಿಶಿಷ್ಟ ಹರಕೆ ಸಲ್ಲಿಸುವವರು ಕಪ್ಪು ಮುಖದ ದೇವರ ಸೇವಕರು. ಮುಖದ ತುಂಬಾ ಕಪ್ಪುಮಸಿ,ಸೊಂಟಕ್ಕೆ ಎತ್ತಿಗೆ ಕಟ್ಟುವ ದೊಡ್ಡ ಶಬ್ದಗಳ ಗೆಜ್ಜೆ ಸರ, ತಲೆ ತುಂಬಾ ಬಣ್ಣಬಣ್ಣದ ದೊಡ್ಡ ಟೋಪಿ, ಕೈಯಲ್ಲಿ ಉದ್ದಕ್ಕೆ ಸುತ್ತಿ ಹದಗೊಳಿಸಿದ ವಸ್ತ್ರ ಇರುವವರೇ ಕಪ್ಪು ಮುಖದ ದೇವರ ಸೇವಕರು.ಇವರನ್ನು”ಅಳ್ಳೊಳ್ಳಿ ಬುಕ್ಕಾ” ಎಂದು ಕರೆಯುತ್ತಾರೆ. ಇವರು ಮನೆಮನೆಗೆ ಅಂಗಡಿಗಳಿಗೆ ಹೋಗಿ “ಎಮಮಲೋಮ್ ಎಮಲೋಯ್ ಧುಯ್” ಎಂದು ಕಾಣಿಕೆ ಕೇಳುತ್ತಾರೆ.

ಕೊನೆಯ 10ನೇ ದಫನ್ ದಿನದಂದು ಮುಖ್ಯ ದೇವರನ್ನು ಹೊರುವವರು ಭಕ್ತಿಯ ಆವೇಶದಿಂದ ಚಡಪಡಿಸುತ್ತಾರೆ. ಲೋಬಾನದ ಹೊಗೆಯಿಂದ ಮಸೀದಿ ಆವೃತ್ತವಾಗಿರುತ್ತದೆ. ಊರಲ್ಲಿ ಸವಾರಿ ಹೊರಟರೆ ಜನರ ಭಕ್ತಿಯ ಪ್ರದರ್ಶನಕ್ಕೊಂದು ತಿರುವುಮೂಡುತ್ತದೆ. ತುಂಬಿದ ಕೊಡ ಗಳಿಂದ ಕುಣಿಯ ಸುತ್ತಲೂ ನೀರು ಹಾಕುತ್ತಾರೆ.ಸವಾರಿ ಹೊರಟಾಗ ಮಹಿಳೆಯರು,ಹರಕೆ ಹೊತ್ಯವರು, ಮಕ್ಕಳು,ಒಳ್ಳೆಯದು ಆಗಲಿ ಎಂದು ಬಯಸುವವರು ನೆಲಕ್ಕೆ ಮಲಗಿ ದೇವರ ಪಂಜಾ ಹೊತ್ತವರು ನಮ್ಮನ್ನು ತುಳಿದು ಸಾಗಲಿ ಎಂದು ಬಯಸುವರು. ಹೀಗೆ ಮಾಡುವುದರಿಂದ ನಮಗೆ ಒಳಿತಾಗುತ್ತದೆ ಎಂಬ ನಂಬಿಕೆ.

ಹೀಗೆ ಹೊರಟ ಮೆರವಣಿಗೆ ಗ್ರಾಮದ ಹೊರ ಪ್ರದೇಶದಲ್ಲಿನ ಹೊಂಡಕ್ಕೆ ತೆರಳಿ ದೇವರುಗಳನ್ನು ವಿಸರ್ಜಿಸಿದ ನಂತರ ದೇವರ ಮೂರ್ತಿಗಳನ್ನು ಪೆಟ್ಟಿಗೆಯಲ್ಲಿರಿಸಿ ತಲೆಮೇಲೆ ಹೊತ್ತುಕೊಂಡು ರಾತ್ರಿ ಸುಮಾರು 9 ಗಂಟೆಗೆ ವಿದಾಯ ಗೀತೆಯನ್ನು ಹಾಡುತ್ತ ಮಸೀದಿ ಬಳಿ ಬರುವರು.

ಈ ರೀತಿ ಹತ್ತು ದಿನಗಳ ಕಾಲ ನಡೆಯುವ ಮೊಹರಂ ಹಬ್ಬ ಮೂಲ ಕರ್ಬಲಾದ ಘಟನೆಗಳ ಸಾಂಕೇತಿಕ ರೂಪವಾಗಿರುತ್ತದೆ. ಶೋಕಾಚರಣೆ ಮೂಲ ಉದ್ದೇಶವಾದರೂ ಮೊಹರಂ ಹಿನ್ನೆಲೆ ತಿಳಿದಿರುವ ಜನರಲ್ಲಿ ಭಯ, ಭಕ್ತಿಯ ಜೊತೆಗೆ ಸಾಮಾನ್ಯವಾಗಿ ಹಬ್ಬಗಳಲ್ಲಿನ ಸಂಭ್ರಮವೂ ಮನೆಮಾಡಿಕೊಂಡಿದೆ. ಮೊಘಲದೊರೆ ಅಕ್ಬರನ ಕಾಲದಲ್ಲಿ ರಾಷ್ಟ್ರೀಯ ಹಬ್ಬದ ಮಾನ್ಯತೆ ಪಡೆದು ಭಾರತದಾದ್ಯಂತ ವಿಸ್ತರಿಸಲಾಗಿದೆ. ಹಿಂದೂ ಮುಸ್ಲಿಮರ ಮಧ್ಯೆ ಸೌಹಾರ್ದತೆ ಬೆಸೆಯುವ ಸಂಕೇತದ ವಿಶಿಷ್ಟ ಆಚರಣೆ ಎಲ್ಲರೂ ಒಂದಾಗಿ ಆಚರಿಸುವ ಹಬ್ಬವಾಗಿದೆ.

Be the first to comment

Leave a Reply

Your email address will not be published.


*