ರಾಜ್ಯ ಸುದ್ದಿಗಳು
ಮುದ್ದೇಬಿಹಾಳ:
ಇಲ್ಲಿನ ತಹಶೀಲ್ದಾರ್ ಬಿ.ಎಸ್.ಕಡಕಭಾವಿ ಅವರು ಸಾರ್ವಜನಿಕರ ಅದರಲ್ಲೂ ಹಿರಿಯ ನಾಗರಿಕರ ಸಮಸ್ಯೆಗಳಿಗೆ ಸ್ಪಂಧಿಸುತ್ತಿಲ್ಲ. ಯಾವುದೇ ಸಮಸ್ಯೆ ಅಥವಾ ವಿಷಯದ ಬಗ್ಗೆ ಕೇಳಿದರೆ ಉಡಾಫೆ ಉತ್ತರ ಕೊಡುತ್ತಾರೆ. ಇವರ ವಿರುದ್ಧ ನಿಯಮಾನುಸಾರ ಕ್ರಮ ಕೈಕೊಳ್ಳಬೇಕು ಎಂದು ಆಗ್ರಹಿಸಿ ಇಣಚಗಲ್‍ನ ಹಿರಿಯ ಸಮಾಜಸೇವಕರಾದ ಜಿ.ಡಿ.ಇನಾಮದಾರ ಅವರು ಕಂದಾಯ ಅಧೀನ ಕಾರ್ಯದರ್ಶಿ, ಬೆಳಗಾವಿಯ ವಿಭಾಗೀಯ ಆಯುಕ್ತ ಮತ್ತು ವಿಜಯಪುರ ಜಿಲ್ಲಾಧಿಕಾರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ.
ಈ ಕುರಿತು ಕಾನೂನಾತ್ಮಕ ಅಂಶಗಳು, ನಿಯಮಗಳು ಮತ್ತು ಪರಿಚ್ಛೇದಗಳಿರುವ ದೂರಿನ ಪ್ರತಿಗಳ ಸಮೇತ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ನಾನು ವೃತ್ತಿಯಿಂದ ನಿವೃತ್ತನಾದ ಮೇಲೆ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದೇನೆ. ಆಸ್ತಿ ವ್ಯವಹಾರವೊಂದಕ್ಕೆ ಸಂಬಂಧಿಸಿದಂತೆ 23-4-2021ರಂದು ಮುದ್ದೇಬಿಹಾಳ ಸಿವಿಲ್ ನ್ಯಾಯಾಲಯದಲ್ಲಿ ಮಾಡಿಕೊಂಡಿದ್ದ ಕಾಂಪ್ರೋಮೈಜ್ ಡಿಕ್ರೀಯನ್ನು ಮ್ಯುಟೇಶನ್‍ಗಾಗಿ 27-7-2021ರಂದು ತಹಶೀಲ್ದಾರ್ ಕಚೇರಿಯಲ್ಲಿ ನಿಯಮಾನುಸಾರ ಅರ್ಜಿ ಸಲ್ಲಿಸಿದ್ದೆ. ಇದಕ್ಕೂ ಮುನ್ನ 23-7-2021ರಂದು ತಹಶೀಲ್ದಾರ್ ಕಚೇರಿಯ ಈ ಮೇಲ್ ವಿಳಾಸಕ್ಕೂ ಅರ್ಜಿಯನ್ನು ಕಳಿಸಿದ್ದೆ. ಈ ಅರ್ಜಿ ವಿಷಯದಲ್ಲಿ ತಹಶೀಲ್ದಾರ್ ಅನುಚಿತವಾಗಿ ನಡೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಸಧ್ಯ ಮಹಾರಾಷ್ಟ್ರದ ಪುಣೆಯಲ್ಲಿ ವಾಸವಾಗಿರುವ ನನಗೆ ಮೇಲಿಂದ ಮೇಲೆ ಇಲ್ಲಿನ ತಹಶೀಲ್ದಾರ್ ಕಚೇರಿಗೆ ಅಲೆದಾಡುವುದು, ಅದರಲ್ಲೂ ಕೋವಿಡ್‍ನಂತಹ ಸಾಂಕ್ರಾಮಿಕ ರೋಗದ ಹಾವಳಿಯ ಸಂದರ್ಭ ಹೆಚ್ಚು ವಯಸ್ಸಾಗಿರುವ ನನಗೆ 450 ಕಿಮಿ ದೂರದಿಂದ ಪ್ರಯಾಣ ಮಾಡುವುದೂ ಕಷ್ಟಕರ. ಹೀಗಾಗಿ ಸರ್ಕಾರದ ನಿರ್ದೇಶನದಂತೆ ಸರ್ಕಾರದ ಸೌಲಭ್ಯವಾಗಿರುವ ಇ-ಆಡಳಿತವನ್ನು ಬಳಸಿಕೊಳ್ಳುತ್ತಿದ್ದೇನೆ. ಆದರೆ ಇದಕ್ಕೆ ಸರಿಯಾದ ಸ್ಪಂಧನೆ ಸಿಗುತ್ತಿಲ್ಲ ಎಂದು ತಿಳಿಸಿದ್ದಾರೆ.
ಮ್ಯೂಟೇಶನ್ ವಿಷಯಕ್ಕೆ ಸಂಬಂಧಿಸಿದಂತೆ ತಹಸೀಲ್ದಾರ್‍ಗೆ 4-8-2021ರಂದು ಕರೆ ಮಾಡಿ ಮಾಹಿತಿ ಪಡೆಯಲು ಮುಂದಾಗಿದದೆ. ಕರೆಗೆ ಉತ್ತರಿಸಿದ್ದ ಅವರು ಮೂಟೇಶನ್ ವಿಷಯದಲ್ಲಿ ಸಕಾರಾತ್ಮಕವಾಗಿ ಸ್ಪಂಧಿಸುವ ಬದಲು ಬೇಜವಾಬ್ದಾರಿ ವರ್ತನೆ ತೋರಿದರು. ನನಗೆ ಸವಡು ಇಲ್ಲ. ನನಗೆ ಇಷ್ಟೇ ಕೆಲಸ ಇಲ್ಲ. ನನಗೆ ದಿನಾಲೂ ನೂರು ಇ ಮೇಲ್ ಬರುತ್ತವೆ. ನಾನೀಗ ಕ್ಷೇತ್ರ ಮೇಲೆ ಇದ್ದೇನೆ ಎಂದೆಲ್ಲ ಸಬೂಬು ಹೇಳಿ ಕರ್ತವ್ಯ, ಜವಾಬ್ಧಾರಿಯಿಂದ ನುಣುಚಿಕೊಳ್ಳಲು ಯತ್ನಿಸಿದರು. ಆದರೂ ಕಚೇರಿಗೆ ಹೋದ ಮೇಲೆ ಇ-ಮೇಲ್ ನೋಡಿ ಸ್ಪಂಧಿಸುವಂತೆ ಕೋರಿದರೂ ನೀವು ಯಾರು ನನಗೆ ಕೇಳುವವರು ಎಂದು ದಬಾಯಿಸಿದರು ಎಂದು ಇನಾಮದಾರ ದೂರಿದರು.
ತಾಲೂಕಿನ ಕಾರ್ಯನಿರ್ವಾಹಕ ದಂಡಾಧಿಕಾರಿಯಾಗಿದ್ದು ಇಂಥ ಬೇಜವಾಬ್ಧಾರಿ ಮಾತುಗಳನ್ನು ಆಡಿರುವುದು ಸಲ್ಲದ ನಡವಳಿಕೆಯಾಗಿದೆ. ಸರ್ಕಾರದ ನಿಯಮಗಳು, ಸಂವಿಧಾನದ ಕಾನೂನುಗಳು ಇಂಥ ನಡವಳಿಕೆಯನ್ನು ಒಪ್ಪುವುದಿಲ್ಲ. ಸಾರ್ವಜನಿಕರೊಂದಿಗೆ, ಅದರಲ್ಲೂ ಹಿರಿಯ ನಾಗರಿಕರೊಂದಿಗೆ ಇವರ ವರ್ತನೆ ಶೋಭೆ ತರುವಂಥದ್ದಲ್ಲ. ಆದ್ಧರಿಂದ ಇವರ ಮೇಲೆ ಶಿಸ್ತು ಕ್ರಮ ಜರುಗಿಸಲು ಹಿಂದೇಟು ಹಾಕಬಾರದು. ಇಂಥ ಅಧಿಕಾರಿಗಳಿಗೆ ಕಾರ್ಯನಿರ್ವಾಹಕ ಹುದ್ದೆಯಲ್ಲಿ ಕೆಲಸ ಮಾಡಲು ಅವಕಾಶವನ್ನೂ ಕೊಡಬಾರದು ಎಂದು ದೂರಿನಲ್ಲಿ ಇನಾಮದಾರ ಅವರು ಒತ್ತಾಯಿಸಿದ್ದಾರೆ.
ತಮ್ಮ ಅರ್ಜಿ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು ಕಂದಾಯ ಇಲಾಖೆಯ ಪ್ರಿನ್ಸಿಪಾಲ್ ಸೆಕ್ರೇಟರಿ, ವಿಭಾಗೀಯ ಕಮೀಷನರ್ ಜೊತೆ ತಾವು ಮಾತನಾಡಿದ್ದು ಅವರು ಈ ತಹಶೀಲ್ದಾರ್‍ಗೆ ಕಾರಣ ಕೇಳುವ ನೋಟಿಸ್ ನೀಡಿ ಶಿಸ್ತು ಕ್ರಮ ಜರುಗಿಸುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
Be the first to comment