ಜಿಲ್ಲಾ ಸುದ್ದಿಗಳು
ನೇಕಾರ ಸಂಘಕ್ಕೆ 6.75 ಲಕ್ಷ ಸಾಲ ವಿತರಣೆ
ಬಾಗಲಕೋಟೆ ಜಿಲ್ಲಾ ಸಹಕಾರಿ ಬ್ಯಾಂಕ್ ಮೂಲಕ ಹುನಗುಂದ ತಾಲೂಕಿನ ಕಮತಗಿ ದೇವಲ ಮಹರ್ಷಿ ಪ್ರಾಥಮಿಕ ಕೈಮಗ್ಗ ನೇಕಾರರ ಸಹಕಾರ ಸಂಘಕ್ಕೆ 6.75 ಲಕ್ಷ ರೂ.ಗಳ ಸಾಲದ ಚೆಕ್‍ನ್ನು ಸಹ ಜಿ.ಪಂ ಸಿಇಓ ಟಿ.ಭೂಬಾಲನ ವಿತರಿಸಿದರು.
ಬಾಗಲಕೋಟೆ : ಕೇಂದ್ರ ಸರಕಾರದ ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ ಜಿಲ್ಲೆಯ 45 ಜನ ನೇಕಾರರಿಗೆ ತಲಾ 50 ಸಾವಿರ ರೂ.ಗಳ ಸಾಲದ ಮಂಜೂರಾತಿ ಪತ್ರಗಳನ್ನು ಜಿ.ಪಂ ಸಿಇಓ ಟಿ.ಭೂಬಾಲನ್ ಗುರುವಾರ ವಿತರಿಸಿದರು.
ಜಿಲ್ಲಾಡಳಿತ ಭವನದಲ್ಲಿರುವ ಆಡಿಟೋರಿಯಂ ಹಾಲ್‍ನಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆ, ನಬಾರ್ಡ ಹಾಗೂ ಎಲ್‍ಡಿಎಂ ಸಹಯೋಗದಲ್ಲಿ ಹಮ್ಮಿಕೊಂಡ ಸಾಲ ಮಂಜೂರಾತಿ ಪತ್ರಗಳನ್ನು ವಿತರಿಸಿ ಮಾತನಾಡಿದ ಅವರು ಕೇಂದ್ರ ಸರಕಾರ ಆಗಸ್ಟ 7ನ್ನು ರಾಷ್ಟ್ರೀಯ ಕೈಮಗ್ಗ ದಿನವನ್ನಾಗಿ ಆಚರಿಸುವಂತೆ ಘೋಷಿಸಿದ್ದು, ಈ ಹಿನ್ನಲೆಯಲ್ಲಿ ಹಮ್ಮಿಕೊಂಡ ಕೈಮಗ್ಗ ಸಪ್ತಾಹ ಅಂಗವಾಗಿ ಅರ್ಹ ಫಲಾನುಭವಿಗಳಿಗೆ ಯೋಜನೆಯ ಫಲ ದೊರೆಯುವಂತೆ ಮಾಡಲಾಗುತ್ತಿದೆ ಎಂದರು.
ಕೇಂದ್ರ ಸರಕಾರ ಸಂಕಷ್ಟದಲ್ಲಿರುವ ನೇಕಾರಿಕೆ ಉತ್ಪನ್ನಗಳಿಗೆ ಉತ್ತೇಜನ ನೀಡುವ ಸಲುವಾಗಿ ವಿವಿಧ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಇದರ ಸದುಪಯೋಗವನ್ನು ನೇಕಾರರು ಪಡೆದುಕೊಳ್ಳಲು ಮುಂದಾಗಬೇಕು. ನೇಕಾರಿಕೆ ಉತ್ಪನ್ನಗಳ ಮಾರಾಟಕ್ಕೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿಕೊಡಬೇಕು. ಅಲ್ಲದೇ ಇಂದಿನ ತಂತ್ರಜ್ಞಾನದ ಯುಗದಲ್ಲಿ ಆನ್‍ಲೈನ್ ಖರೀದಿಗೆ ಜನ ಹೆಚ್ಚಾಗಿ ಮುಂದಾಗುತ್ತಿದ್ದು, ಕೈಮಗ್ಗ ಉತ್ಪನ್ನಗಳನ್ನು ಸಹ ಆನ್‍ಲೈನ್ ಮಾರಾಟಕ್ಕೆ ಸೊಸೈಟಿಗಳು ಮುಂದಾಗಬೇಕು ಎಂದರು.
ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕ ಎಂ.ಜಿ.ಕೊಣ್ಣೂರ ಮಾತನಾಡಿ ಜಿಲ್ಲೆಯ ನೇಕಾರರಿಗೆ ಮುದ್ರಾ ಯೋಜನೆಯಡಿ 350 ಜನ ನೇಕಾರರಿಗೆ ಸಾಲ ನೀಡುವ ಗುರಿ ಹೊಂದಲಾಗಿದ್ದು, ಈ ಪೈಕಿ ಕಮತಗಿ ಮತ್ತು ಅಮೀನಗಡ ಪಟ್ಟಣದ ನೇಕಾರರಿಗೆ ಕೆನರಾ ಬ್ಯಾಂಕ್ ಮತ್ತು ಕರ್ನಾಟಕ ವಿಕಾಶ ಬ್ಯಾಂಕ್‍ಗಳ ಮೂಲಕ ಒಟ್ಟು 45 ಜನರಿಗೆ ತಲಾ 50 ಸಾವಿರ ರೂ.ಗಳಂತೆ ಸಾಲ ಮಂಜೂರಾತಿ ಪತ್ರ ನೀಡಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಒಟ್ಟು 54 ಸಾವಿರ ಜನ ನೇಕಾರರಿದ್ದು, ಅದರ ಕಾಲುಭಾಗದಷ್ಟು ಅಂದರೆ 13 ಸಾವಿರ ಜನ ನೇಕಾರರು ಬಾಗಲಕೋಟೆ ಜಿಲ್ಲೆಯಲ್ಲಿದ್ದಾರೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಅಗ್ರಣಿ ಬ್ಯಾಂಕ್‍ನ ವ್ಯವಸ್ಥಾಪಕ ಗೋಪಾಲರೆಡ್ಡಿ, ನಬಾರ್ಡನ ಯಮುನಾ ಪೈ ಸೇರಿದಂತೆ ಇತರರು ಉಪಸ್ಥಿತರಿದ್ದರು.
Be the first to comment