ರಾಜ್ಯ ಸುದ್ದಿಗಳು
ದೇವನಹಳ್ಳಿ
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಯಿಂದ ಮಕ್ಕಳಿಗೆ ಪೌಷ್ಠಿಕಾಂಶ ಒದಗಿಸುವ ನಿಟ್ಟಿನಲ್ಲಿ ಆಹಾರದ ಪದಾರ್ಥಗಳನ್ನು ವಿತರಿಸಲಾಗುತ್ತಿದೆ ಎಂದು ಕುಂದಾಣ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ವೆಂಕಟೇಶ್.ವಿ ತಿಳಿಸಿದರು.ದೇವನಹಳ್ಳಿ ತಾಲೂಕಿನ ಕುಂದಾಣ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಆವರಣದಲ್ಲಿ ವಿದ್ಯಾರ್ಥಿಗಳಿಗೆ ಆಹಾರದ ಪದಾರ್ಥಗಳನ್ನು ವಿತರಿಸಿ ಅವರು ಮಾತನಾಡಿದರು. ಕಳೆದ ಮಾರ್ಚ್ ನಿಂದ ಕೋವಿಡ್ ಸಾಂಕ್ರಾಮಿಕ ರೋಗ ಹರಡುವ ಹಿನ್ನಲೆಯಲ್ಲಿ ಆನ್‌ಲೈನ್ ತರಗತಿಗಳನ್ನು ಮಾಡಲಾಗುತ್ತಿತ್ತು.
ವಿದ್ಯಾರ್ಥಿಗಳು ಪೌಷ್ಠಿಕ ಆಹಾರದಿಂದ ವಂಚಿತರಾಗಬಾರದೆಂಬ ನಿಟ್ಟಿನಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ಪ್ರತಿ ೮ ರಿಂದ ೧೦ನೇ ತರಗತಿ ಮಕ್ಕಳಿಗೆ ಹಾಗೂ ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳನ್ನು ಗಣನೆಗೆ ತೆಗೆದುಕೊಂಡು ಸುಮಾರು ೧೭೫ ಮಕ್ಕಳಿಗೆ ಪೌಷ್ಠಿಕ ಆಹಾರಗಳಾದ ೫೦ಕೆಜಿ ಅಕ್ಕಿ, ೨೫ಕೆಜಿ ಗೋಧಿ, ೨೩ಕೆಜಿ ಬೇಳೆಕಾಳು ಪದಾರ್ಥಗಳನ್ನು ನೀಡಿದ್ದು, ಅದರ ವಿತರಣಾ ಕಾರ್ಯವನ್ನು ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಸರಿಯಾದ ರೀತಿಯಲ್ಲಿ ಪಡೆದುಕೊಳ್ಳಬೇಕು. ಉತ್ತಮ ಆಹಾರ ಸೇವನೆಯಿಂದ ಆರೋಗ್ಯ ವೃದ್ಧಿಯಾಗಲಿದೆ ಎಂದರು.ಈ ವೇಳೆಯಲ್ಲಿ ಶಾಲೆಯ ಶಿಕ್ಷಕರಾದ ಯಲ್ಲಪ್ಪನಾಯಕ, ಹಾಜೀರಬಾನು, ಗಾಯಿತ್ರಿಹೆಗಡೆ, ಅರುಣ, ಗಾಯಿತ್ರಿ, ಸ್ವಾಮಿ, ಜ್ಯೋತಿ ಸೇರಿದಂತೆ ಮಕ್ಕಳು ಮತ್ತು ಪೋಷಕರು ಇದ್ದರು.
Be the first to comment