ಮದುವೆಯಾಗಿ ಫೇಸ್​​ಬುಕ್​ನಲ್ಲಿ ಫೋಟೋ ಹಾಕಿದ ಪ್ರೇಮಿಗಳು.. ಕೊಲ್ಲುವುದಾಗಿ ಕುಟುಂಬಸ್ಥರ ಕಮೆಂಟ್!

ವರದಿ-ಕುಮಾರ್ ನಾಯ್ಕ.ಭಟ್ಕಳ

ಜಿಲ್ಲಾ ಸುದ್ದಿಗಳು 

ಕಾರವಾರ

ಅನ್ಯ ಜಾತಿಯ ಯುವಕ-ಯುವತಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸುತ್ತಿದ್ದು, ತಮಗೆ ರಕ್ಷಣೆ ಕೊಡಿ ಎಂದು ನವ ವಿವಾಹಿತರು   ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಮಾಡಿಕೊಂಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಹೆಗಡೆಕಟ್ಟಾ ಗ್ರಾಮದ ನೀಲಕಂಠ ನಾಯ್ಕ ಹಾಗೂ ಅದೇ ಗ್ರಾಮದ ವಸುಧಾ ಹೆಗಡೆ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಯುವತಿಯ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು.ಯುವಕ-ಯುವತಿ ಇಬ್ಬರೂ ವಯಸ್ಕರಾಗಿದ್ದರಿಂದ ಇಬ್ಬರೂ ಪರಸ್ಪರ ಒಪ್ಪಿ ಅಂಕೋಲಾ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಮದುವೆಯಾಗಿದ್ದರು. ನವ ವಿವಾಹಿತ ಜೋಡಿ ಕಳೆದ ಒಂದು ವಾರದಿಂದ ಮನೆ ಬಿಟ್ಟು ಅಂಕೋಲಾದಲ್ಲಿ ತಂಗಿದೆ. ಯುವತಿಯ ಮನೆಯವರು ಈ ಸಂಬಂಧ ಶಿರಸಿ ಪೊಲೀಸ್ ಠಾಣೆಯಲ್ಲಿ ಯುವಕನ ವಿರುದ್ಧ ದೂರು ದಾಖಲಿಸಿದ್ದಾರೆ. ಇದಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಯುವಕನಿಗೆ ಬೆದರಿಕೆಯನ್ನ ಸಹ ಒಡ್ಡಿದ್ದಾರೆ ಎಂದು ಜೋಡಿ ಆರೋಪಿಸಿದೆ.ಕುತ್ತಿಗೆಯಲ್ಲಿ‌ ಮಾಂಗಲ್ಯ, ಕಣ್ಣಲ್ಲಿ ಆತಂಕ, ಕೈಯ್ಯಲ್ಲಿ ಮದುವೆ ರಿಜಿಸ್ಟ್ರೇಷನ್ ಪತ್ರವನ್ನ ಹಿಡಿದು ತೋರಿಸಿದ ಈ ಯುವತಿಯ ಹೆಸರು ವಸುಧಾ ಹೆಗಡೆ. ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ಹೆಗಡೆಕಟ್ಟಾ ಗ್ರಾಮದ ಯುವತಿ ತಮ್ಮದೇ ಊರಿನ ಯುವಕ ನೀಲಕಂಠ ನಾಯ್ಕ ಎನ್ನುವವನನ್ನ ಮನಸಾರೆ ಮೆಚ್ಚಿ ಪ್ರೀತಿಸಿದ್ದಳು. ನೀಲಕಂಠನಿಗೂ ಸಹ ಈಕೆಯ ಮೇಲೆ ಪ್ರೇಮಾಂಕುರವಾಗಿದ್ದು ಇಬ್ಬರೂ ಪರಸ್ಪರ ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಆಳಕ್ಕೆ ಇವರ ಪ್ರೀತಿ ಚಿಗುರು ಬೇರುಬಿಟ್ಟಿತ್ತು. ಆದರೆ ಈ ಇಬ್ಬರ ಪ್ರೀತಿ ವಿಚಾರ ಯುವತಿ ಮನೆಯವರಿಗೆ ಗೊತ್ತಾಗುವುದು ತಡವಾಗಲಿಲ್ಲ. ಅದರಲ್ಲೂ ಯುವಕ ಅನ್ಯಜಾತಿಯವನು ಎನ್ನುವ ಒಂದೇ ಕಾರಣ ಯುವತಿ ಮನೆಯವರ ಕಣ್ಣು ಕೆಂಪಾಗಿಸಿದ್ದು ಇವರನ್ನ ಬೇರ್ಪಡಿಸಲು ಮುಂದಾಗಿದ್ದರು.ಆದರೆ ಪ್ರೀತಿಯಲ್ಲಿ ಬಿದ್ದಿದ್ದ ಯುವಪ್ರೇಮಿಗಳಿಗೆ ಒಬ್ಬರನ್ನೊಬ್ಬರು ಬಿಡುವುದು ಸಾಧ್ಯವಿಲ್ಲ ಎನಿಸಿದ್ದು ಮನೆಯಿಂದ ಓಡಿಹೋಗಿ ಯುವಕನ ಮನೆಯವರ ಸಮ್ಮುಖದಲ್ಲಿ ಮದುವೆಯಾಗಿದ್ದರು. ಅಲ್ಲದೇ ತಮ್ಮ ಮದುವೆಯನ್ನ ಅಂಕೋಲಾ ಸಬ್ ರಿಜಿಸ್ಟರ್ ಕಚೇರಿಯಲ್ಲಿ ನೋಂದಣಿ ಸಹ ಮಾಡಿಸಿ ಮದುವೆಯಾದ ಖುಷಿಯನ್ನ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದರು.

ಆದ್ರೆ ಈ ಅನ್ಯಜಾತಿಯ ಯುವಜೋಡಿಗಳ ಮದುವೆಯಿಂದ ಯುವತಿ ಮನೆಯವರು ಆಕ್ರೋಶಗೊಂಡಿದ್ದು ಊರಿಗೆ ಬಂದಲ್ಲಿ ಹಲ್ಲೆ ನಡೆಸೋದಾಗಿ ಕಮೆಂಟ್‌ಗಳನ್ನ ಹಾಕಿ ಬೆದರಿಕೆ ಒಡ್ಡಿದ್ದಾರೆ.ಇನ್ನು ಈ ನವವಿವಾಹಿತ ಜೋಡಿ ಮನೆಯವರಿಗೆ ಹೆದರಿ ಕಳೆದೊಂದು ವಾರದಿಂದ ಅಂಕೋಲಾದಲ್ಲಿ ಉಳಿದುಕೊಂಡಿದ್ದಾರೆ. ಇದರ ಬೆನ್ನಲ್ಲೇ ಯುವತಿ ಮನೆಯವರು ಶಿರಸಿ ಠಾಣೆಯಲ್ಲಿ ಯುವಕನ ವಿರುದ್ಧ ಯುವತಿ ಕಿಡ್ನ್ಯಾಪ್ ಪ್ರಕರಣವನ್ನ ದಾಖಲಿಸಿದ್ದು ಇದರಿಂದ ಯುವಜೋಡಿ ಕಂಗಾಲಾಗಿದ್ದಾರೆ. ಅಲ್ಲದೇ ಫೇಸ್‌ಬುಕ್‌ನಲ್ಲಿ ಸಹ ಯುವತಿ ಸಂಬಂಧಿಕರಿಂದ ಸಾಕಷ್ಟು ಬೆದರಿಕೆ ಕಮೆಂಟ್‌ಗಳು ಬರುತ್ತಿದ್ದು ಇದರಿಂದ ಆತಂಕ ಎದುರಾಗಿದೆ ಎಂದು ಯುವಜೋಡಿ ಅಲವತ್ತುಗೊಂಡಿದೆ. ಅಲ್ಲದೇ ಪೊಲೀಸ್ ಠಾಣೆಯಿಂದ ಕರೆಮಾಡಿಸಿ ಯುವಕನನ್ನ ಬೆದರಿಸುವ ಕೆಲಸವನ್ನ‌ ಸಹ ಮಾಡಲಾಗುತ್ತಿದೆ. ಹೀಗಾಗಿ ಊರಿಗೆ ತೆರಳಿದಲ್ಲಿ ತಮ್ಮ ಜೀವಕ್ಕೆ ಅಪಾಯವಿದ್ದು ತಮಗೆ ರಕ್ಷಣೆ ನೀಡುವಂತೆ ಯುವಜೋಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿಯನ್ನ ಸಹ ಮಾಡಿದ್ದಾರೆ.ಇನ್ನು ಯುವತಿ ಮನಸೋ ಇಚ್ಚೆ ಮೆಚ್ಚಿ ಮದುವೆಯಾಗುವಂತೆ ಒತ್ತಾಯಿಸಿದ ಬಳಿಕವೇ ಇಬ್ಬರೂ ಮನೆಬಿಟ್ಟು ಬಂದು ಮದುವೆಯಾಗಿದ್ದು ಆದರೆ ತಮ್ಮನ್ನ ಬೇರ್ಪಡಿಸುವ ಉದ್ದೇಶದಿಂದಲೇ ತೊಂದರೆ ನೀಡಲಾಗುತ್ತಿದೆ. ಅಲ್ಲದೇ ಯುವಕ ಅನ್ಯಜಾತಿಯವನು ಎನ್ನುವ ಕಾರಣಕ್ಕೇ ಯುವತಿ ಮನೆಯವರಿಗಿಂತ ಆಕೆಯ ಸಂಬಂಧಿಕರೇ ಹೆಚ್ಚು ಒತ್ತಡ ಹೇರುತ್ತಿದ್ದಾರೆ. ಹೀಗಾಗಿ ತಮಗೆ ನ್ಯಾಯ ಕೊಡಿಸಿ ಅಂತಾ ಯುವಜೋಡಿ ಮನವಿ ಮಾಡಿಕೊಂಡಿದೆ.

CHETAN KENDULI

Be the first to comment

Leave a Reply

Your email address will not be published.


*