*ಸರಕಾರಿ ನೌಕರರ ಮಕ್ಕಳು ಸಮಾಜಕ್ಕೆ ಕೀರ್ತಿ ತರುವ ಕೆಲಸ ಮಾಡಬೇಕು* *ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಸಲಹೆ*

ವರದಿ: ಹೈದರ್ ಸಾಬ್, ಕುಂದಾಣ

ರಾಜ್ಯ ಸುದ್ದಿಗಳು 

ದೇವನಹಳ್ಳಿ

ಪ್ರತಿ ಸರಕಾರಿ ನೌಕರರು ಮದ್ಯಮ ವರ್ಗದಲ್ಲಿರುವಂತಹವರು, ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಓದುತ್ತಿರುವ ಸರಕಾರಿ ನೌಕರರ ಮಕ್ಕಳಿಗೆ ಲಕ್ಷಾಂತರ, ಕೋಟ್ಯಾಂತರ ರೂಪಾಯಿ ನೀಡಿ ಓದಿಸುವುದು ಕಷ್ಟಕರವಾದ ಪರಿಸ್ಥಿತಿ ಇದೆ ಎಂದು ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ತಿಳಿಸಿದರು.ದೇವನಹಳ್ಳಿ ತಾಲೂಕಿನ ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಜಿಲ್ಲಾ ಸರಕಾರಿ ನೌಕರರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅವರು ಮಾತನಾಡಿದರು. ವಿದ್ಯೆ ಯಾರ ಸ್ವತ್ತು ಅಲ್ಲ. ವಿದ್ಯೆ ಇದ್ದರೆ, ಎಲ್ಲಿ ಬೇಕಾದರೂ ಬದುಕಬಹುದು. ೨೦೧೯ರಲ್ಲಿ ಮೊದಲ ಬಾರಿಗೆ ಸರಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಪ್ರತಿ ಸರಕಾರಿ ನೌಕರರ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಲು ಇಂತಹ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ. ಮಕ್ಕಳು ಸಮಾಜಕ್ಕೆ ಕೀರ್ತಿ ತರುವ ಕೆಲಸ ಮಾಡಬೇಕು. ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದೆ. ಸರಕಾರಿ ನೌಕರರ ಸಂಘದ ಕ್ಷೇಮಾಭಿವೃದ್ಧಿಗೆ ಎಲ್ಲಾ ರೀತಿಯಲ್ಲಿ ಶ್ರಮಿಸಲಾಗುತ್ತಿದೆ. ಸರಕಾರಿ ನೌಕರರ ಬೇಡಿಕೆಗಳಿಗೆ ಸರಕಾರ ಸ್ಪಂಧಿಸಲು ಸಾಕಷ್ಟು ಯೋಜನೆಗಳನ್ನು ರೂಪಿಸಿದೆ. ಆರೋಗ್ಯ ಹಿತ ಕಾಪಾಡಲು ಆರೋಗ್ಯ ಸಂಜೀವಿನಿ ಯೋಜನೆ ಮೂಲಕ ಯಾವುದೇ ಖಾಸಗಿ ಆಸ್ಪತ್ರೆಯಲ್ಲಿ ಸರಕಾರಿ ನೌಕರರು ಒಂದು ಪೈಸೆಯೂ ನೀಡದೆ, ಉಚಿತ ಚಿಕಿತ್ಸೆ ಪಡೆಯಲು ಅನುಕೂಲ ಮಾಡಿಕೊಡಲಾಗಿದೆ.

CHETAN KENDULI

ಸರಕಾರಿ ನೌಕರರ ಸಂಬಳದಲ್ಲಿ ತಾರತಮ್ಯಗಳಿದ್ದು, ಮುಂದಿನ ಏಪ್ರಿಲ್ ತಿಂಗಳ ವೇಳೆಗೆ ವಿವಿಧ ರಾಜ್ಯಗಳ ಮಾದರಿಯಲ್ಲಿ ಯಾವ ರಾಜ್ಯ ಹೆಚ್ಚು ಸಂಬಳ ನೀಡುತ್ತಿದೆ ಅದನ್ನು ನಮ್ಮ ರಾಜ್ಯಕ್ಕೆ ಅನ್ವಯಿಸುವಂತೆ ಮಾಡಲಾಗುತ್ತಿದೆ. ನಮ್ಮ ಬೇಡಿಕೆಗಳು ಈಡೇರಿಸದ ಸಂದರ್ಭದಲ್ಲಿ ಸುಮಾರು ೮ಲಕ್ಷಕ್ಕೂ ಹೆಚ್ಚು ಸರಕಾರಿ ನೌಕರರು ಹೋರಾಟ ಮಾಡಲು ಬೀದಿಗೆ ಇಳಿಯಬೇಕಾಗುತ್ತದೆ. ಅದು ಆಗದಂತೆ ಸರಕಾರ ಸ್ಪಂಧಿಸುತ್ತದೆ ಎಂಬ ಆಶಯವಿದೆ. ಎಲ್ಲರೊಂದಿಗೆ ಒಡನಾಟ ಇರುವುದರಿಂದ ನೌಕರರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್ ಹರಡುವ ಸಂದರ್ಭದಲ್ಲಿ ದಿಟ್ಟ ತೀರ್ಮಾನ ಕೈಗೊಂಡು ಜಿಲ್ಲೆಯನ್ನು ಎರಡನೇ ಅಲೆಯಿಂದ ರಕ್ಷಿಸಲಾಗಿದೆ. ಇದೀಗ ಮಕ್ಕಳ ಆರೋಗ್ಯದ ಹಿತದೃಷ್ಠಿಯಿಂದ ಮೂರನೇ ಅಲೆ ಜಿಲ್ಲೆಗೆ ಬಾರದಂತೆ ಎಲ್ಲಾ ರೀತಿಯಲ್ಲಿ ಜಿಲ್ಲಾಡಳಿತ ಸಜ್ಜಾಗಿದ್ದು, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ವಿದ್ಯೆ ಇದ್ದವರು ದೇಶ-ವಿದೇಶಗಳಲ್ಲೂ ಕಾರ್ಯನಿರ್ವಹಿಸಬಹುದು. ವಿದ್ಯೇ ದೊಡ್ಡ ಆಸ್ತಿಯಾಗಿದೆ. ಇಡೀ ರಾಜ್ಯದಲ್ಲಿಯೇ ಕೋವಿಡ್ ತಡೆಗಟ್ಟಲು ವೈದ್ಯರ ನಡುಗೆ ಹಳ್ಳಿಗಳ ಕಡೆಗೆ ಹಾಗೂ ಮಕ್ಕಳ ತಜ್ಞರ ನಡಿಗೆ ಹಳ್ಳಿಗಳ ಕಡೆಗೆ ಮತ್ತು ಇಡೀ ರಾಷ್ಟ್ರ ಮತ್ತು ರಾಜ್ಯದಲ್ಲಿ ಯಾವುದೇ ತಾಲೂಕು ಜಿಲ್ಲೆಯಲ್ಲಿ ಬ್ಲಾಕ್ ಫಂಗಸ್ ಶಸ್ತ್ರಚಿಕಿತ್ಸೆಯ ಯಂತ್ರಗಳು ಇರಲಿಲ್ಲ. ನಮ್ಮ ಜಿಲ್ಲೆಯಲ್ಲಿ ಬ್ಲಾಕ್ ಫಂಗಸ್‌ಗೆ ಶಸ್ತ್ರಚಿಕಿತ್ಸೆ ಮಾಡಿ ಯಶಸ್ವಿಕಂಡಿದೆ ಎಂದು ಹೇಳಿದರು.ಅಪರ ಜಿಲ್ಲಾಧಿಕಾರಿ ವಿಜಯ ಈ.ರವಿಕುಮಾರ್ ಮಾತನಾಡಿ, ಮಕ್ಕಳಿಗೆ ಸ್ಪೂರ್ತಿ ತುಂಬುವ ಕೆಲವನ್ನು ಮಾಡಬೇಕು. ಯಾವುದೇ ಮಕ್ಕಳು ತಮ್ಮ ವಿಷಯವನ್ನು ಆಯ್ಕೆ ಮಾಡುವಾಗ ಪೋಷಕರು ಅವರಿಗೆ ಪ್ರೋತ್ಸಾಹ ನೀಡಬೇಕು. ಇಷ್ಟ ಪಟ್ಟು ವಿಷಯ ಓದುವ ಮಕ್ಕಳಿಗೆ ಎಷ್ಟೇ ಕಷ್ಟವಾದರೂ ಜೀರ್ಣ ಮಾಡಿಕೊಳ್ಳುತ್ತಾರೆ. ಅವರಿಗೆ ಬೆನ್ನುಲುಬಾಗಿ ಪೋಷಕರು ಇರಬೇಕು. ಮಕ್ಕಳು ಗುರಿಯನ್ನಿಟ್ಟುಕೊಂಡು ಓದಿದಾಗ ಗುರಿ ಸಾಧಿಸಲು ಸಾಧ್ಯ ಎಂದರು. ಜಿಲ್ಲಾ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಂ.ವಿಜಯ್‌ಕುಮಾರ್ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಂಘದ ಪದಾಧಿಕಾರಿಗಳ ನೇಮಕಾತಿ ಪತ್ರವನ್ನು ವಿತರಿಸಲಾಯಿತು.ಈ ವೇಳೆಯಲ್ಲಿ ರಾಜ್ಯ ಸರಕಾರಿ ನೌಕರರ ಸಂಘದ ಖಜಾಂಚಿ ಆರ್.ಶ್ರೀನಿವಾಸ್, ಗೌರವಾಧ್ಯಕ್ಷ ಆರ್.ಮುನಿಶಾಮಪ್ಪ, ಉಪಾಧ್ಯಕ್ಷ ಎಚ್.ಬಾಲಕೃಷ್ಣ, ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷ ಎನ್.ಲಕ್ಷ್ಮೀನರಸಿಂಹಯ್ಯ, ನೆಲಮಂಗಲ ತಾಲೂಕು ಅಧ್ಯಕ್ಷ ವಾಸುದೇವಮೂರ್ತಿ, ಜಿಲ್ಲಾ ಶಾಖೆಯ ಹಿರಿಯ ಉಪಾಧ್ಯಕ್ಷ ರವಿಶಂಕರ್, ಜಿಲ್ಲಾ ಖಜಾಂಚಿ ಮಹಮದ್ ಮುಜಾಮಿಲ್, ಪ್ರಧಾನ ಕಾರ್ಯದರ್ಶಿ ಪಿ.ಗಂಗಾಧರಪ್ಪ, ನೌಕರರ ಸಂಘದ ಪದಾಧಿಕಾರಿಗಳು, ಪೋಷಕರು ಮತ್ತು ಮಕ್ಕಳು ಇದ್ದರು.

Be the first to comment

Leave a Reply

Your email address will not be published.


*